ರಾಯಚೂರಿನ ಲಿಂಗಸೂಗೂರು ತಾಲೂಕಿನಲ್ಲಿ, ಬೆಂಗಳೂರಿಗೆ ಹೋಗಲು 2 ಲಕ್ಷ ರೂಪಾಯಿ ನೀಡದ ತಾಯಿಯನ್ನು ಮಗನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹ*ತ್ಯೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮುದಗಲ್ ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಯಚೂರು: ಭೂಮಿಯ ಮೇಲೆ ಎಂತಹ ಪಾಪಿ ಮಕ್ಕಳು ಹುಟ್ಟುತ್ತಾರೆ ಎನ್ನುವುದಕ್ಕೆ ರಾಯಚೂರಿನ ಲಿಂಗಸೂಗೂರು ತಾಲೂಕಿನ ಜುಕ್ಕೆರುಮಡು ತಾಂಡಾದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಬೆಂಗಳೂರಿಗೆ ಹೋಗುತ್ತೇನೆ, ಅದಕ್ಕಾಗಿ ಎರಡು ಲಕ್ಷ ರುಪಾಯಿ ಬೇಕು ಎಂದು ತಾಯಿ ಬಳಿ ಡಿಮ್ಯಾಂಡ್ ಇಟ್ಟ ಮಗ, ತಾಯಿ ಹಣಕೊಡಲು ನಿರಾಕರಿಸಿದರು ಎನ್ನುವ ಕಾರಣಕ್ಕೆ ಭೀಕರವಾಗಿ ಹ*ತ್ಯೆ ಮಾಡಿದ್ದಾನೆ. ಇದೀಗ ಆ ಪಾಪಿ ಮಗ ಕುಮಾರ್ ಪೊಲೀಸರ ಅತಿಥಿಯಾಗಿದ್ದಾನೆ.
ಲಿಂಗಸೂಗೂರು ತಾಲೂಕಿನಲ್ಲಿ ನಡೆದ ಘಟನೆ
ರಾಯಚೂರು ಜಿಲ್ಲೆ ಲಿಂಗಸೂಗೂರು ತಾ. ಜುಕ್ಕೆರುಮಡು ತಾಂಡಾದಲ್ಲಿ ಘಟನೆ ನಡೆದಿದ್ದು, 40 ವರ್ಷದ ಚಂದವ್ವ ಮೃತ ದುರ್ದೈವಿಯಾಗಿದ್ದಾರೆ. ನಾನು ಬೆಂಗಳೂರು ಹೋಗಬೇಕು, ಎರಡು ಲಕ್ಷ ರುಪಾಯಿ ಬೇಕು ಎಂದು ತಾಯಿ ಜತೆ ಜಗಳವಾಡಿದ್ದಾನೆ. ಆಗ ಚಂದವ್ವ ನಾನು ಹಣ ಎಲ್ಲಿಂದ ತರಲಿ ಎಂದು ಮಗ ಕುಮಾರ್‌ಗೆ ದಬಾಯಿಸಿದ್ದಾರೆ. ಆಗ ಸಿಟ್ಟಿಗೆದ್ದ ಕುಮಾರ್, ತಾಯಿಯ ತಲೆಗೂದಲನ್ನು ಹಿಡಿದು ಎಳೆದಾಡಿ, ಸೇವಾಲಾಲ್ ಭವನದವರೆಗೆ ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಕುಮಾರ್, ಸೇವಾಲಾಲ್ ಭವನದ ಬಳಿಯಿದ್ದ ಕಲ್ಲು ತೆಗೆದುಕೊಂಡು ತಾಯಿ ಚಂದವ್ವ ತಲೆಗೆ ಗುದ್ದಿ ಗಾಯ ಮಾಡಿದ್ದಾನೆ.
ಚಂದವ್ವ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ, ತೀವ್ರ ರಕ್ತಸ್ರಾವ ಶುರುವಾಗಿದೆ. ಹೀಗಾಗಿ ಸ್ಥಳೀಯರು ತಕ್ಷಣವೇ ಮುದುಗಲ್ ಆಸ್ಪತ್ರೆಗೆ ಕೊಂಡೊಯ್ಯದಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಚಂದವ್ವ ಕೊನೆಯುಸಿರೆಳೆದಿದ್ದಾರೆ.
ಸ್ಥಳಕ್ಕೆ ದೌಡಾಯಿಸಿ ಆರೋಪಿ ವಶಕ್ಕೆ ಪಡೆದ ಪೊಲೀಸರು:
ಇನ್ನು ಈ ಕೊಲೆ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಮುದಗಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆರೋಪಿ ಕುಮಾರ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ರಾಯಚೂರು ಎಸ್ ಪಿ ಅರುಣಾಂಗ್ಷು ಗಿರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.


