'ಖಾತೆ ಹಂಚಿ ಸಿಎಂ ಎಲ್ಲರ ಸಮಾ​ಧಾ​ನಕ್ಕೆ ಯತ್ನಿ​ಸಿ​ದ್ದಾ​ರೆ'

ರೈತರ ಪ್ರತಿಭಟನೆ ದುರದೃಷ್ಟಕರ| ತಮ್ಮ ಬೇಡಿಕೆ ಸರ್ಕಾರದ ಮುಂದಿಡುವುದು ರೈತರ ಕರ್ತವ್ಯ| ಗಣರಾಜ್ಯೋತ್ಸವದಂತಹ ಶುಭ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ತಂದು ತೊಂದರೆ ಕೊಡುವ ರೀತಿ ಯಾವ ಸಂಘಟನೆಗೂ ಶೋಭೆ ತರುವುದಿಲ್ಲ. ಇದರಲ್ಲಿ ರಾಜಕೀಯ ಅಡಗಿದೆಯೇ ಎಂಬ ತನಿಖೆ ಆಗಬೇಕಿದೆ: ಸಚಿವ ಹೆಬ್ಬಾರ| 

Shivaram Hebbar Talks Over CM BS Yediyurappa grg

ಕಾರವಾರ(ಜ.27): ಆಡಳಿತದ ದೃಷ್ಟಿಯಿಂದ ಪದೇ ಪದೇ ಖಾತೆ ಬದಲಾವಣೆ ಮಾಡುವುದು ಸರಿಯಲ್ಲ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ಆದರೆ ಸಚಿವ ಸಂಪುಟ ಪುನರ್‌ ರಚನೆಯಾದ ಕಾಲದಲ್ಲಿ ಹೆಚ್ಚಿಗೆ ಇರುವ ಖಾತೆ​ಯ​ನ್ನು ಮತ್ತೊಬ್ಬರಿಗೆ ನೀಡದೆ ಇದ್ದರೆ ಹೇಗೆ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಪ್ರಶ್ನಿ​ಸಿ​ದ್ದಾರೆ.

ನಗರದಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ಅವ​ರು, ಮಂತ್ರಿ ಸ್ಥಾನ ಸಿಗದಿದ್ದರೆ, ಮಂತ್ರಿಯಾದರೆ ಹೇಳಿದ ಖಾತೆ ಸಿಕ್ಕಿಲ್ಲ ಎನ್ನುವ ಗಲಾಟೆ ಮಾಡುತ್ತಾರೆ. ಇವತ್ತಿನ ರಾಜಕಾಣವೇ ಹಾಗೆ. ಯಾವಾಗೆಲ್ಲಾ ಸಂಪುಟ ಪುನರ್‌ ರಚನೆ ಆಗುತ್ತದೆ ಆಗೆಲ್ಲಾ ಇಂತಹ ಚರ್ಚೆ, ಘಟನೆ ನಡೆಯುತ್ತದೆ. ಕೇವಲ ಯಡಿಯೂರಪ್ಪ ಸರ್ಕಾರದಲ್ಲಿ ಮಾತ್ರ ನಡೆದಿಲ್ಲ. ಖಾತೆ ಹಂಚಿಕೆಯಲ್ಲಿ ವ್ಯತ್ಯಾಸ ಆಗಿದೆ ಎನ್ನುವ ಬೇಸರ ಮುಚ್ಚಿಡಲು ಸಾಧ್ಯವಿಲ್ಲ. ಆದರೆ ಮುಖ್ಯಮಂತ್ರಿ ಅವರು ಮತ್ತೊಂದು ರೀತಿಯಲ್ಲಿ ಖಾತೆ ಹಂಚಿಕೆ ಮಾಡಿ ಎಲ್ಲರನ್ನೂ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಎಲ್ಲರೂ ಸಮಾಧಾನ ಆಗುತ್ತಾರೆ ಎನ್ನುವ ನಂಬಿಕೆಯಿದೆ ಎಂದರು.

ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ: ಸಚಿವ ಅಶೋಕ್‌

ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಷ್ಟು ಕಾಲ ಗುಂಪಾಗಿ ಇರಲು ಸಾಧ್ಯ? ನಾವೆಲ್ಲಾ ಬಿಜೆಪಿ ಕಾರ್ಯಕರ್ತರಾಗಿದ್ದೇವೆ. ಕೆಲಸ ಮಾಡುತ್ತಿದ್ದೇವೆ ಎಂದ ಅವರು ಆನಂದ ಸಿಂಗ್‌ ಜತೆಗೆ ಮಾತನಾಡಿ ತಾಳ್ಮೆ ಕಳೆದುಕೊಳ್ಳುವುದು ಬೇಡ ಎಂದಿದ್ದೇನೆ. ತಾಳ್ಮೆ ಎನ್ನುವುದು ಸಾರ್ವಜನಿಕ ಕ್ಷೇತ್ರದಲ್ಲಿ ಮುಖ್ಯ. ಎಲ್ಲವೂ ನಮ್ಮ ಅಳತೆಯಲ್ಲೇ ನಡೆಯುವುದಿಲ್ಲ. ನೋವು, ನಲಿವು, ಸೋಲು, ಗೆಲುವು ಇವೆಲ್ಲಾ ಸಹಜ. ಇವನ್ನು ಸಮಾನವಾಗಿ ಸ್ವೀಕರಿಸಬೇಕು. ಎಲ್ಲವೂ ಸರಿಯಾಗುತ್ತದೆ ಎಂದು ಅಭಿಪ್ರಾಯಿಸಿದರು.

ರೈತರ ಪ್ರತಿಭಟನೆ ದುರದೃಷ್ಟಕರವಾಗಿದೆ. ತಮ್ಮ ಬೇಡಿಕೆ ಸರ್ಕಾರದ ಮುಂದಿಡುವುದು ರೈತರ ಕರ್ತವ್ಯ. ಆದರೆ ಗಣರಾಜ್ಯೋತ್ಸವದಂತಹ ಶುಭ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ತಂದು ತೊಂದರೆ ಕೊಡುವ ರೀತಿ ಯಾವ ಸಂಘಟನೆಗೂ ಶೋಭೆ ತರುವುದಿಲ್ಲ. ಇದರಲ್ಲಿ ರಾಜಕೀಯ ಅಡಗಿದೆಯೇ ಎಂಬ ತನಿಖೆ ಆಗಬೇಕಿದೆ. ರೈತರು ರಾಜಕೀಯಕ್ಕೆ ಒಳಗಾಗಬಾರದು. ರೈತರನ್ನು ಗಡೆಗಣಿಸುವ ಕೆಲಸ ಸರ್ಕಾರ ಎಂದಿಗೂ ಮಾಡಿಲ್ಲ ಎಂದು ಅಭಿಪ್ರಾಯಿಸಿದರು.
 

Latest Videos
Follow Us:
Download App:
  • android
  • ios