ತೀರ್ಥಹಳ್ಳಿಯಲ್ಲಿ ಕ್ಯಾಶಿಯರ್ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಮತ್ತು ಬಾಣಂತಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ (ಫೆ.16): ಪ್ರತಿದಿನದ ಮಾದರಿಯಲ್ಲಿ ತೀರ್ಥಹಳ್ಳಿ ಪಟ್ಟಣದ ಬಾರ್‌ನಲ್ಲಿ ಕ್ಯಾಶಿಯರ್ ಕೆಲಸ ಮಾಡಿದ ನಂತರ ರಾತ್ರಿ ಹಣವನ್ನು ಎಣಿಸಿಟ್ಟು ಬೈಕ್‌ನಲ್ಲಿ ಮನೆಗೆ ಹೊರಟ ಕ್ಯಾಶಿಯರ್ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಯಡೇಹಳ್ಳಿ ಕೆರೆ ಗ್ರಾಮದ ಸುಮಂತ್ (27 ) ಸಾವನಪ್ಪಿದವರು. ತೀರ್ಥಹಳ್ಳಿ ಪಟ್ಟಣದ ಮೂಡ್ ಬಾರ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಸುಮಂತ್ ಯಡೇಹಳ್ಳಿ ಕೆರೆ ಹತ್ತಿರ ಬೈಕ್ ಅಪಘಾತದಲ್ಲಿ ಸಾವು ಕಂಡಿದ್ದಾರೆ.ತೀರ್ಥಹಳ್ಳಿ ಪಟ್ಟಣದಿಂದ ಮನೆಗೆ ಹೋಗುವಾಗ ಬೈಕ್ ಅಪಘಾತಕ್ಕೆ ಬಲಿಯಾಗಿದ್ದಾರೆ. ಮೃತ ಹೇಮಂತ್ ತಂದೆ ಜಯರಾಮರವರು ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಕೈ ಕೊಟ್ಟ ಕರೆಂಟ್‌, ಬಳ್ಳಾರಿಯ ಬಿಮ್ಸ್‌ನಲ್ಲಿ ಮೊಬೈಲ್‌ ಟಾರ್ಚ್‌ನಲ್ಲಿ ರೋಗಿಗೆ ಚಿಕಿತ್ಸೆ!

ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಂಜುಳಾ (25) ಸಾವನ್ನಪ್ಪಿರುವ ಮೃತ ಬಾಣಂತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದ ಮಂಜುಳಾ ಒಂದು ವರ್ಷದ ಹಿಂದೆ ಮದುವೆ ಆಗಿದ್ದರು. ಫೆ.10 ರಂದು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.‌ಹೆರಿಗೆಯ ನಂತರ ಆರೋಗ್ಯದಲ್ಲಿ ಏರುಪೇರು ಹಿನ್ನಲೆ ಖಾಸಗಿ ಆಸ್ಪತ್ರೆಗೆ ಕುಟಂಬಸ್ಥರು ದಾಖಲು ಮಾಡಿದ್ದಾರೆ.‌ಚಿಕಿತ್ಸೆ ಫಲಕಾರಿಯಾಗದೆ ಇಂದು ಬಾಣಂತಿ ಮಂಜುಳಾ ಸಾವು ಕಂಡಿದ್ದಾರೆ.