ಶಿವಮೊಗ್ಗದಿಂದ ಬನಾರಸ್‌ಗೆ ವಿಶೇಷ ರೈಲು ಫೆಬ್ರವರಿ 22 ರಿಂದ ಓಡಲಿದೆ. ಕುಂಭಮೇಳಕ್ಕೆ ಹೋಗುವ ಭಕ್ತರಿಗೆ ಇದರಿಂದ ಅನುಕೂಲವಾಗಲಿದೆ. ಈ ರೈಲು ಹಲವು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಬೆಂಗಳೂರು/ಶಿವಮೊಗ್ಗ (ಫೆ.17): ಶಿವಮೊಗ್ಗ, ಮಲೆನಾಡಿನ ವಿವಿಧ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕ ಹಲವು ಜಿಲ್ಲೆಗಳ ಭಕ್ತರು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಹೋಗಲು ಅನುಕೂಲ ಆಗುವಂತೆ ಶಿವಮೊಗ್ಗ ನಗರದಿಂದ ಬನಾಸರ್‌ಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಒದಗಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆಯಿಂದ ತಿಳಿಸಲಾಗಿದೆ.
ಕುಂಭ ಮೇಳದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ರೈಲ್ವೆ ಮಂಡಳಿಯು ಶಿವಮೊಗ್ಗ ಟೌನ್ ಮತ್ತು ಬನಾರಸ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ 06223 ಶಿವಮೊಗ್ಗ ಟೌನ್ - ಬನಾರಸ್ ವಿಶೇಷ ಎಕ್ಸ್ ಪ್ರೆಸ್ ರೈಲು ಶಿವಮೊಗ್ಗ ನಗರದಿಂದ ಫೆಬ್ರವರಿ 22, 2025 ರಂದು ಸಂಜೆ 4:40 ಕ್ಕೆ ಹೊರಟು, ಫೆಬ್ರವರಿ 24, 2025 ರಂದು ಮಧ್ಯಾಹ್ನ 3:00 ಗಂಟೆಗೆ ಬನಾರಸ್ ತಲುಪಲಿದೆ.
ಇನ್ನು ಹಿಂತಿರುಗುವ ಪ್ರಯಾಣ, ರೈಲು ಸಂಖ್ಯೆ 06224 ಬನಾರಸ್ - ಶಿವಮೊಗ್ಗ ಟೌನ್ ವಿಶೇಷ ಎಕ್ಸ್ ಪ್ರೆಸ್ ರೈಲು ಬನಾರಸ್‌ನಿಂದ ಫೆಬ್ರವರಿ 25, 2025 ರಂದು ಬೆಳಗಿನ ಜಾವ 1:30 ಕ್ಕೆ ಹೊರಟು, ಫೆಬ್ರವರಿ 27, 2025 ರಂದು ಬೆಳಿಗ್ಗೆ 6:45 ಕ್ಕೆ ಶಿವಮೊಗ್ಗ ಟೌನ್ ನಿಲ್ದಾಣಕ್ಕೆ ಆಗಮಿಸಲಿದೆ.
ಇದನ್ನೂ ಓದಿ: ಭಾರತದ 5 ಭಯಾನಕ ರೈಲು ನಿಲ್ದಾಣಗಳು; ಕನ್ನಡಿಗರ ಪಕ್ಕದಲ್ಲೇ ಉಂಟು, ನಿಗೂಢತೆಯ ನಂಟು!
ಈ ರೈಲು ಎರಡೂ ಮಾರ್ಗಗಳಲ್ಲಿ ಭದ್ರಾವತಿ, ಬಿರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟ್, ಹೊಸಪೇಟೆ, ಕೊಪ್ಪಳ, ಗದಗ, ಹೋಳೆ ಆಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಇಂಡಿ ರೋಡ್, ಸೋಲಾಪುರ, ದೌಂಡ್, ಕೊಪರಗಾಂವ್, ಮನ್ಮಾಡ್, ಭುಸಾವಲ್, ಇಟಾರ್ಸಿ, ಪಿಪರಿಯಾ, ನರಸಿಂಗ್ಪುರ್, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್ಪುರ್, ಪ್ರಯಾಗ್ ರಾಜ್ ಚಿಯೋಕಿ ಮತ್ತು ಮಿರ್ಜಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ವಿಶೇಷ ರೈಲುಗಳು ಹನ್ನೊಂದು ಎಸಿ ತ್ರಿ-ಟೈರ್ ಬೋಗಿಗಳು, ನಾಲ್ಕು ಸ್ಲೀಪರ್ ಕ್ಲಾಸ್ ಬೋಗಿಗಳು, ಎರಡು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ಎರಡು ಲಗೇಜ್/ಜನರೇಟರ್/ಬ್ರೇಕ್ ವ್ಯಾಗನಗಳನ್ನು ಒಳಗೊಂಡಿರುತ್ತವೆ. ಈ ರೈಲುಗಳ ಪ್ರತಿ ನಿಲ್ದಾಣದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 139ಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ನೀರಾವರಿಗೆ ಹೆಚ್ಚು ಅನುದಾನ: ಸಚಿವ ಮಧು ಬಂಗಾರಪ್ಪ
