ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ತರಗತಿ ಕೊಠಡಿಯಲ್ಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನದ ವಿರಾಮದ ವೇಳೆ ಈ ಘಟನೆ ನಡೆದಿದ್ದು, ಆತ್ಮ*ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಶಿವಮೊಗ್ಗ (ಜ.15): ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬೆಚ್ಚಿಬೀಳಿಸುವ ಘಟನೆಯೊಂದು ಸಂಭವಿಸಿದೆ. ಕರ್ತವ್ಯನಿರತ ಶಿಕ್ಷಕರೊಬ್ಬರು ಶಾಲಾ ಕೊಠಡಿಯಲ್ಲೇ ಆತ್ಮ*ಹತ್ಯೆಗೆ ಶರಣಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ಘಟನೆಯ ವಿವರ

ಶಿಕಾರಿಪುರ ತಾಲ್ಲೂಕಿನ ಜೀನಹಳ್ಳಿ ಗ್ರಾಮದ ನಿವಾಸಿ, ಪ್ರಸ್ತುತ ಹೊನ್ನಾಳಿಯಲ್ಲಿ ವಾಸವಿದ್ದ ಧನಂಜಯ (51) ಆತ್ಮ*ಹತ್ಯೆ ಮಾಡಿಕೊಂಡ ಶಿಕ್ಷಕ. ಇವರು ಎಂದಿನಂತೆ ಬೆಳಗ್ಗೆ ಶಾಲೆಗೆ ಆಗಮಿಸಿದ್ದರು. ಶಾಲಾ ಕೆಲಸಕ್ಕೆ ಮುನ್ನ ಗ್ರಾಮದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನೂ ಮುಗಿಸಿ ಶಾಲೆಗೆ ಬಂದಿದ್ದರು. ನಂತರ ವಿದ್ಯಾರ್ಥಿಗಳಿಗೆ ಪಾಠವನ್ನೂ ಮಾಡಿದ್ದರು. ನಂತರ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ.

ವಿರಾಮದ ವೇಳೆ ನಡೆದ ದುರಂತ

ಮಧ್ಯಾಹ್ನದ ವಿರಾಮದ ಸಮಯದಲ್ಲಿ, ತರಗತಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿದ ಶಿಕ್ಷಕರು, 'ನನಗೆ ಕೆಲವು ದಾಖಲೆಗಳನ್ನು ಬರೆಯುವ ಕೆಲಸವಿದೆ' ಎಂದು ಹೇಳಿ ಕೊಠಡಿಯ ಬಾಗಿಲು ಮತ್ತು ಕಿಟಕಿಗಳನ್ನು ಹಾಕಿಕೊಂಡಿದ್ದಾರೆ. ಬಹಳ ಹೊತ್ತಾದರೂ ಶಿಕ್ಷಕರು ಹೊರಗೆ ಬಾರದಿರುವುದನ್ನು ಮತ್ತು ವಿದ್ಯಾರ್ಥಿಗಳು ಹೊರಗಡೆ ಕುಳಿತಿರುವುದನ್ನು ಗಮನಿಸಿದ ಸಹ ಶಿಕ್ಷಕರು ಅನುಮಾನಗೊಂಡು ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಕಿಟಕಿಯ ಮೂಲಕ ಇಣುಕಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಗ್ರಾಮಸ್ಥರು ಮತ್ತು ಶಿಕ್ಷಕರು ಸೇರಿ ಬಾಗಿಲು ಒಡೆದು ಒಳಪ್ರವೇಶಿಸಿ, ಧನಂಜಯ ಅವರನ್ನು ಕೆಳಗಿಳಿಸಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

ಕಾರಣ ನಿಗೂಢ

ಶಿಕ್ಷಕರ ಆತ್ಮ*ಹತ್ಯೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಶಾಲೆಗೆ ಬಂದಾಗ ಅವರು ಸಹಜವಾಗಿಯೇ ಇದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶಾಲಾ ಆವರಣದಲ್ಲಿ ನಡೆದ ಈ ಘಟನೆಯಿಂದಾಗಿ ಮಕ್ಕಳು ಭಯಭೀತರಾಗಿದ್ದು, ಗ್ರಾಮದಲ್ಲಿ ವಿಷಾದದ ಛಾಯೆ ಆವರಿಸಿದೆ.