ಶಿವಮೊಗ್ಗ(ಮೇ.26): ಅಪಘಾತ ನಡೆದ ಕಾರಿನಲ್ಲಿ ಸಿಕ್ಕ ಲಕ್ಷಾಂತರ ರುಪಾಯಿ ಬೆಲೆಯ ಚಿನ್ನಾಭರಣಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಅದರ ವಾರಸುದಾರರಿಗೆ ತಲುಪಿಸಿದ ಕುಂಸಿಯ ಪಿಎಸ್‌ಐ ಕುರಿತು ಇದೀಗ ಸಾರ್ವಜನಿಕವಾಗಿ ವ್ಯಾಪ​ಕ ಪ್ರಶಂಸೆ ವ್ಯಕ್ತವಾಗಿದೆ.

ವಾಸ್ತವವಾಗಿ ಚಿನ್ನದ ವಾರಸುದಾರರಿಗೆ ತಾವು ಚಿನ್ನ ಕಳೆದುಕೊಂಡಿದ್ದೇ ಗೊತ್ತಿರಲಿಲ್ಲ. ಕುಟುಂಬ ಸದಸ್ಯರ ಜೀವ ಕಳೆದುಕೊಂಡ ದುಃಖದಲ್ಲಿದ್ದವರಿಗೆ ಪಿಎಸ್‌ಐ ಒಬ್ಬರು ಕರೆ ಮಾಡಿ ಕರೆಸಿಕೊಂಡು ಚಿನ್ನ ಮರಳಿಸಿದಾಗ ಅಚ್ಚರಿಯೋ ಅಚ್ಚರಿ. ಇಂತಹದೊಂದು ಪ್ರಾಮಾಣಿಕತೆ ಮೆರೆದೆವರು ಕುಂಸಿ ಪೊಲೀಸ್‌ ಠಾಣೆಯ ಪಿಎಸ್‌ಐ ನವೀನ್‌ ಮಠಪತಿಯವರು.

ಘಟನೆ ವಿವರ:

ಮೇ 23 ರಂದು ಚೋರಡಿ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತ ನಡೆದು, ಕಾರಿನಲ್ಲಿ ಇದ್ದ ಮಹಿಳೆಯೋರ್ವರು ಮೃತಪಟ್ಟಿದ್ದರು. ಮೃತಪಟ್ಟವರು ಕಡೂರು ಮೂಲದ ಸುಬ್ಬಯ್ಯ ಅವರ ಪತ್ನಿ ಭಾರತಿ. ಸುಬ್ಬಯ್ಯ ಮತ್ತು ಭಾರತಿ ಅವ​ರು ತುಪ್ಪೂರಿನಿಂದ ಕಡೂರಿನ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.

ಮೆಜೆಸ್ಟಿಕ್‌ನಲ್ಲಿ ಟೆನ್ಷನ್..ಟೆನ್ಷನ್; ಕ್ವಾರಂಟೈನ್‌ ಸೀಲ್ ಇರೋ ವ್ಯಕ್ತಿ ಓಡಾಟ..!

ತಮ್ಮ ಪತ್ನಿ ಮೃತಪಟ್ಟಿದ್ದರಿಂದ ತೀವ್ರ ದುಃಖದಲ್ಲಿದ್ದ ಸುಬ್ಬಯ್ಯ ಅವರಿಗೆ ಕಡೂರಿನ ತಮ್ಮ ಮನೆಯಲ್ಲಿ ಇದ್ದ ವೇಳೆಯಲ್ಲಿ ಕುಂಸಿ ಪೊಲೀಸ್‌ ಠಾಣೆಯಿಂದ ಸೋಮವಾರ ಕರೆಯೊಂದು ಬಂದಿದೆ. ಇದನ್ನು ಅನುಸರಿಸಿ ಠಾಣೆಗೆ ಬಂದಾಗ ಅಲ್ಲಿದ್ದ ಪಿಎಸ್‌ಐ ನವೀನ್‌ ಮಠಪತಿಯವರು ಸುಮಾರು 15-20 ಲಕ್ಷ ರು. ಬೆಲೆ ಬಾಳುವ ಆಭರಣಗಳನ್ನು ನೀಡಿದ್ದಾರೆ. ಇದನ್ನು ಕಂಡು ಸುಬ್ಬಯ್ಯ ಅವರಿಗೆ ಅಘಾತವಾದಂತಾಗಿದೆ. ಈ ಒಡವೆ ಕಳೆದುಕೊಂಡಿದ್ದೇ ಅವರಿಗೆ ಗೊತ್ತಿರಲಿಲ್ಲ.

ಹಾಗಿದ್ದರೆ ಆಗಿದ್ದೇನು?:

ಅಪಘಾತ ನಡೆದ ಬಳಿಕ ದಂಪತಿಗಳನ್ನು ಅಲ್ಲಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಈ ಅಪಘಾತ ಸ್ಥಳಕ್ಕೆ ಪಿಎಸ್‌ಐ ನವೀನ್‌ ಆಗಮಿಸಿ ಪರಿಶೀಲನೆ ನಡೆಸಿದರು. ಆಗ ಕಾರಿನಲ್ಲಿ ಇದ್ದ ಬ್ಯಾಗೊಂದು ಇವರ ಗಮನ ಸೆಳೆಯಿತು. ಈ ಬ್ಯಾಗನ್ನು ತೆರೆದು ನೋಡಿದಾಗ ಇದರಲ್ಲಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಇತ್ತು. ಈ ಚಿನ್ನಾಭರಣ ಇದ್ದ ಬ್ಯಾಗ್‌ ಅನ್ನು ಭಾರತಿಯವರು ಇಟ್ಟುಕೊಂಡಿರುವುದು ಸುಬ್ಬಯ್ಯ ಅವರಿಗೂ ಗೊತ್ತಿರಲಿಲ್ಲ. ತಕ್ಷಣವೇ ಸುಬ್ಬಯ್ಯ ಅವರಿಗೆ ಕರೆ ಮಾಡಿ ಕರೆಸಿ ಈ ಒಡವೆ ಇದ್ದ ಬ್ಯಾಗನ್ನು ಮರಳಿಸಿದ್ದಾರೆ. ಪಿಎಸ್‌ಐ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.