ಶಿವಮೊಗ್ಗದ ಗಾಜನೂರು ಬಳಿಯ ಖಾಸಗಿ ರೇಸಾರ್ಟ್‌ನಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ, ಪಾತ್ರೆ ತೊಳೆಯುವ ಕೆಲಸಕ್ಕೆ ಬಂದಿದ್ದ ನಾಗಮ್ಮ ಎಂಬ ಮಹಿಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಿಶ್ಚಿತಾರ್ಥದ ದೀಪಾಲಂಕಾರದ ವೈರ್ ಮುಳ್ಳುತಂತಿ ಬೇಲಿಗೆ ತಗುಲಿದ್ದೇ ದುರಂತಕ್ಕೆ ಕಾರಣವಾಗಿದೆ.

ಶಿವಮೊಗ್ಗ (ಏ.07): ಜಿಲ್ಲೆಯ ಗಾಜನೂರು ಸಮೀಪದ ಖಾಸಗಿ ರೇಸಾರ್ಟ್‌ವೊಂದರಲ್ಲಿ ಸಂಭವಿಸಿದ ಭೀಕರ ವಿದ್ಯುತ್ ಅವಘಡದಲ್ಲಿ ಬಡ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರೇಸಾರ್ಟ್ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಸಾವಿಗೆ ನೇರ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ರೇಸಾರ್ಟ್ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಮೃತಪಟ್ಟ ದುರ್ದೈವಿಯನ್ನು ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮದ ನಿವಾಸಿ ನಾಗಮ್ಮ (45) ಎಂದು ಗುರುತಿಸಲಾಗಿದೆ. ರೇಸಾರ್ಟ್‌ನಲ್ಲಿ ನಡೆದ ನಿಶ್ಚಿತಾರ್ಥದ ಕಾರ್ಯಕ್ರಮವೊಂದಕ್ಕೆ ನಾಗಮ್ಮ ಅವರು ಕ್ಯಾಟರಿಂಗ್ ತಂಡದ ಜೊತೆಗೆ ಪಾತ್ರೆ ತೊಳೆಯುವ ಕೆಲಸಕ್ಕಾಗಿ ಬಂದಿದ್ದರು. ಮಧ್ಯಾಹ್ನದ ಸಮಯದಲ್ಲಿ ಕೆಲಸ ಮುಗಿಸಿ, ತಮ್ಮ ಒದ್ದೆಯಾದ ಬಟ್ಟೆಗಳನ್ನು ಒಣಗಿಸಲು ರೇಸಾರ್ಟ್‌ನ ಮುಳ್ಳುತಂತಿ ಬೇಲಿಯ ಮೇಲೆ ಹಾಕಲು ಹೋದಾಗ ಈ ದುರಂತ ಸಂಭವಿಸಿದೆ.

ನಿರ್ಲಕ್ಷ್ಯದ ಪರಮಾವಧಿ:

ನಿಶ್ಚಿತಾರ್ಥದ ಸಂಭ್ರಮಕ್ಕಾಗಿ ರೇಸಾರ್ಟ್‌ನಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೀಪಾಲಂಕಾರಕ್ಕೆ ಬಳಸಲಾದ ಶಾರ್ಟ್ ಜೋಮರ್ ವೈರ್‌ಗಳನ್ನು ರೇಸಾರ್ಟ್‌ನ ಮುಳ್ಳುತಂತಿ ಬೇಲಿಯ ಮೇಲೆಯೇ ಅಳವಡಿಸಲಾಗಿತ್ತು. ಮಳೆಯೋ ಅಥವಾ ತಾಂತ್ರಿಕ ದೋಷದಿಂದಲೋ ವಿದ್ಯುತ್ ವೈರ್ ಶಾರ್ಟ್ ಸರ್ಕ್ಯೂಟ್ ಆಗಿ ಇಡೀ ಮುಳ್ಳುತಂತಿ ಬೇಲಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಬಟ್ಟೆ ಒಣಗಿಸಲು ಹೋದ ನಾಗಮ್ಮ ಅವರು ಬೇಲಿಯನ್ನು ಮುಟ್ಟುತ್ತಿದ್ದಂತೆಯೇ ಬಲವಾಗಿ ವಿದ್ಯುತ್ ಸ್ಪರ್ಶಿಸಿದೆ.

ಆಸ್ಪತ್ರೆಗೆ ಸಾಗಿಸುವಾಗ ಸಾವು:

ವಿದ್ಯುತ್ ಆಘಾತದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ನಾಗಮ್ಮ ಅವರನ್ನು ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಮಾರ್ಗಮಧ್ಯೆ ನಾಗಮ್ಮ ಕೊನೆಯುಸಿರೆಳೆದಿದ್ದಾರೆ. ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಮಹಿಳೆ ಕೇವಲ ರೇಸಾರ್ಟ್‌ನವರ ಸಣ್ಣ ನಿರ್ಲಕ್ಷ್ಯದಿಂದಾಗಿ ಜೀವ ಕಳೆದುಕೊಂಡಿರುವುದು ನೋವಿನ ಸಂಗತಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೇಸಾರ್ಟ್ ಮಾಲೀಕ ಸೇರಿದಂತೆ ಒಟ್ಟು ಮೂವರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಎಫ್‌ಐಆರ್ (FIR) ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ:

'ನಮ್ಮ ಜೊತೆಗೆ ಕೆಲಸಕ್ಕೆ ಬಂದಿದ್ದ ನಾಗಮ್ಮ ಅವರು ಅನ್ಯಾಯವಾಗಿ ಸಾವನ್ನಪ್ಪಿದ್ದಾರೆ. ರೇಸಾರ್ಟ್‌ನವರು ಮುನ್ನೆಚ್ಚರಿಕೆ ವಹಿಸದೆ ವಿದ್ಯುತ್ ವೈರ್‌ಗಳನ್ನು ಬೇಲಿಗೆ ಹಾಕಿದ್ದು ತಪ್ಪು," ಎಂದು ಕ್ಯಾಟರಿಂಗ್ ಮೇಸ್ತ್ರಿ ಪರಮೇಶ್ವರಮ್ಮ ಹಾಗೂ ಸಹೋದ್ಯೋಗಿ ನೀಲಮ್ಮ ಅಳಲು ತೋಡಿಕೊಂಡಿದ್ದಾರೆ. ಮೃತ ನಾಗಮ್ಮ ಅವರ ಕುಟುಂಬಕ್ಕೆ ರೇಸಾರ್ಟ್ ಮಾಲೀಕರು ಮತ್ತು ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅಬ್ಬಲಗೆರೆ ಗ್ರಾಮದ ಮುಖಂಡ ಧನುಷ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.