ಶಾಲೆಯಲ್ಲಿ ಸಹಪಾಠಿಗಳು ಚೆಸ್ ಆಡುತ್ತಿದ್ದುದನ್ನು ನೋಡುತ್ತಾ ಕುಳಿತಿದ್ದ 15 ವರ್ಷದ ಬಾಲಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ (ಆ.10): ಶಾಲೆಯಲ್ಲಿ ಸಹಪಾಠಿಗಳು ಚೆಸ್ ಆಡುತ್ತಿದ್ದುದನ್ನು ನೋಡುತ್ತಾ ಕುಳಿತಿದ್ದ 15 ವರ್ಷದ ಬಾಲಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿನಯ್ ಜೆ.ಕೆ. (15) ಮೃತಪಟ್ಟ ವಿದ್ಯಾರ್ಥಿ. ಎಂದಿನಂತೆ ಶಾಲೆಗೆ ತೆರಳಿದ್ದ ಬಾಲಕ, ಸಹಪಾಠಿಗಳು ಚೆಸ್ ಆಟವಾಡುತ್ತಿದ್ದುದನ್ನು ವೀಕ್ಷಿಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾನೆ. ಕ್ಷಣಮಾತ್ರದಲ್ಲಿ ನಡೆದ ಈ ಘಟನೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿದೆ.

ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಉಳಿಯಲಿಲ್ಲ ಬಾಲಕ

ವಿನಯ್ ಕುಸಿದು ಬಿದ್ದ ಕೂಡಲೇ ಶಿಕ್ಷಕರು ತಕ್ಷಣವೇ ಅವರನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ದುರದೃಷ್ಟವಶಾತ್ ಮೆಗ್ಗಾನ್ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಹೃದಯಾಘಾತದಿಂದ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ನಿಖರ ಕಾರಣ ವೈದ್ಯಕೀಯ ಪರಿಶೀಲನೆಯ ಬಳಿಕ ಸ್ಪಷ್ಟವಾಗಬೇಕಿದೆ.

ಅಜ್ಜನ ಮನೆಯಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದ ವಿನಯ್

ಮೃತ ವಿನಯ್ ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ತಮ್ಮಡಿಹಳ್ಳಿಯಲ್ಲಿರುವ ಅಜ್ಜನ ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಶಾಲೆಯಲ್ಲಿ ಸಹಪಾಠಿಗಳೊಂದಿಗೆ ನಗುತ್ತಾ, ಕಲಿಯುತ್ತಾ ಇರಬೇಕಾಗಿದ್ದ ಬಾಲಕ ಹಠಾತ್‌ ಆಗಿ ಇಹಲೋಕ ತ್ಯಜಿಸಿರುವುದು ಕುಟುಂಬಸ್ಥರು, ಶಿಕ್ಷಕರು ಹಾಗೂ ಸಹಪಾಠಿಗಳಿಗೆ ಆಘಾತವನ್ನುಂಟು ಮಾಡಿದೆ. ಮಗನನ್ನು ಕಳೆದುಕೊಂಡ ಕುಟುಂಬದ ನೋವು ಹೇಳತೀರದಂತಾಗಿದೆ.

ಈ ಸಂಬಂಧ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹದಿನೈದು ವರ್ಷ ಎನ್ನುವುದು ಕನಸುಗಳನ್ನು ಕಾಣಬೇಕಾದ ವಯಸ್ಸು. ಆದರೆ, ಶಾಲೆಯಲ್ಲೇ ಸಹಪಾಠಿಗಳೊಂದಿಗೆ ಸಾಮಾನ್ಯ ಕ್ಷಣ ಕಳೆಯುತ್ತಿದ್ದ ವಿನಯ್‌ ಅವರ ಬದುಕು ಹಠಾತ್‌ ಅಂತ್ಯಗೊಂಡಿರುವುದು ಎಲ್ಲರನ್ನೂ ದುಃಖದ ಮಡುವಿಗೆ ತಳ್ಳಿದೆ.