ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆಯಡಿ ನಡೆಸಿದ 3D ಲೇಸರ್ ಸ್ಕ್ಯಾನಿಂಗ್ ಸರ್ವೇಯಲ್ಲಿ, ರಾಜ್ಯದ 848 ಸಂರಕ್ಷಿತ ಸ್ಮಾರಕಗಳ ಪೈಕಿ 314 ಕಣ್ಮರೆಯಾಗಿರುವುದು ಬಹಿರಂಗವಾಗಿದೆ.
ಬೆಂಗಳೂರು (ಆ.10): ಕರ್ನಾಟಕದ ಅಧಿಕೃತ ಸಂರಕ್ಷಿತ ಪಟ್ಟಿಯಲ್ಲಿದ್ದ ನೂರಾರು ಐತಿಹಾಸಿಕ ಸ್ಮಾರಕಗಳು ಭೂಪಟದಿಂದಲೇ ಸಂಪೂರ್ಣವಾಗಿ ಕಣ್ಮರೆಯಾಗಿವೆ. ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಅಧಿಸೂಚಿಸಲ್ಪಟ್ಟಿದ್ದ ಒಟ್ಟು 848 ಸ್ಮಾರಕಗಳ ಪೈಕಿ, 'ಕರ್ನಾಟಕ ಡಿಜಿಟಲ್ ಹೆರಿಟೇಜ್' ಯೋಜನೆಗಾಗಿ ಜಿಯೋ-ಕೋಆರ್ಡಿನೇಟ್‌ಗಳೊಂದಿಗೆ ನಡೆಸಲಾದ 3D ಲೇಸರ್ ಸ್ಕ್ಯಾನಿಂಗ್ ಮತ್ತು ಡಿಜಿಟಲ್ ಮ್ಯಾಪಿಂಗ್ ಸರ್ವೇ ವೇಳೆ ಕೇವಲ 534 ಸ್ಮಾರಕಗಳನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಿದೆ. ಉಳಿದ ಬರೋಬ್ಬರಿ 314 ಸಂರಕ್ಷಿತ ಸ್ಮಾರಕಗಳ ಕುರುಹುಗಳೇ ಸಿಗದೆ ನಾಪತ್ತೆಯಾಗಿವೆ.
ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜ್ ಮಾಹಿತಿ ನೀಡಿ, "ಸ್ವಾತಂತ್ರ್ಯಕ್ಕಿಂತ ಮೊದಲು ಜಾರಿಯಲ್ಲಿದ್ದ ಮೂರು ಪ್ರಮುಖ ಕಾಯ್ದೆಗಳಾದ – 'ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ 1904', 'ಹೈದರಾಬಾದ್ ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ 1337F (1927)' ಮತ್ತು 'ಮೈಸೂರು ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ 1925' ರ ಅಡಿಯಲ್ಲಿ ಈ ಸ್ಮಾರಕಗಳನ್ನು ಸಂರಕ್ಷಿತ ತಾಣಗಳೆಂದು ಘೋಷಿಸಲಾಗಿತ್ತು. ನಂತರ 1961 ರಲ್ಲಿ 'ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ನಿವೇಶನಗಳು ಮತ್ತು ಅವಶೇಷಗಳ ಕಾಯ್ದೆ' ಜಾರಿಗೆ ಬಂತು. ಹಿಂದಿನ ಕಾಯ್ದೆಗಳಡಿ ಘೋಷಿತವಾದ ಸ್ಮಾರಕಗಳು ಸಂರಕ್ಷಿತ ಸ್ಮಾರಕಗಳಾಗಿಯೇ ಮುಂದುವರಿಯುತ್ತವೆ ಎಂದು ಇದರಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಆ ಸಮಯದಲ್ಲಿ ಯಾವುದೇ ಭೌತಿಕ ಪರಿಶೀಲನೆಯನ್ನು (Physical verification) ನಡೆಸಿರಲಿಲ್ಲ," ಎಂದು ವಿವರಿಸಿದ್ದಾರೆ.
ಆದ್ದರಿಂದ, ಪ್ರಸ್ತುತ 3D ಲೇಸರ್ ಸ್ಕ್ಯಾನಿಂಗ್ ಮತ್ತು ಡಿಜಿಟಲ್ ಮ್ಯಾಪಿಂಗ್ ನಡೆಸಿದಾಗ 314 ಅಧಿಸೂಚಿತ ಸ್ಮಾರಕಗಳು ಅಸ್ತಿತ್ವದಲ್ಲೇ ಇಲ್ಲದಿರುವುದು ಗೊತ್ತಾಗಿದೆ. ಜೊತೆಗೆ, ಹಳೆಯ ಕಾಯ್ದೆಗಳಲ್ಲಿ ಕೇವಲ ಗ್ರಾಮಗಳ ಹೆಸರುಗಳನ್ನು ಮಾತ್ರ ಉಲ್ಲೇಖಿಸಲಾಗಿದೆಯೇ ಹೊರತು ನಿಖರವಾದ ಸ್ಥಳದ ವಿವರಗಳಿರಲಿಲ್ಲ. ಹೀಗಾಗಿ 100 ವರ್ಷಕ್ಕಿಂತ ಹಳೆಯದಾದ ದೇವಸ್ಥಾನ, ಮಸೀದಿ, ಚರ್ಚ್, ಸಮಾಧಿ, ಗೋರಿ, ಕೋಟೆ, ಅರಮನೆ, ದ್ವಾರ, ಕಂಬ, ವಸತಿ ಕಟ್ಟಡ, ಬಾವಿ, ಸೇತುವೆ, ಗುಹೆ, ಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳು, ಸ್ತೂಪಗಳು ಮತ್ತು ಉದ್ಯಾನವನಗಳನ್ನು ಒಳಗೊಂಡ ಸ್ಮಾರಕಗಳನ್ನು ಶೋಧಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ.
ಸ್ಮಾರಕಗಳು ಕಣ್ಮರೆಯಾಗಲು ಪ್ರಮುಖ ಕಾರಣಗಳು
ಈ ಐತಿಹಾಸಿಕ ಪರಂಪರೆಗಳು ನಾಶವಾಗಲು ನಗರೀಕರಣ ಮತ್ತು ಸ್ಥಳಾಂತರ ಸೇರಿದಂತೆ ಹಲವು ಕಾರಣಗಳಿವೆ. ಸ್ಥಳೀಯ ಗ್ರಾಮಸ್ಥರಿಗೂ ಈ ಸ್ಮಾರಕಗಳ ಅಸ್ತಿತ್ವದ ಬಗ್ಗೆ ಮಾಹಿತಿ ಇಲ್ಲ. "ಪ್ರಸ್ತುತ ಇಲಾಖೆಯು 534 ಸ್ಮಾರಕಗಳ ನಿಖರ ಸ್ಥಳದ ಮಾಹಿತಿಯೊಂದಿಗೆ ಡಿಜಿಟಲ್ ಮ್ಯಾಪಿಂಗ್ ಪೂರ್ಣಗೊಳಿಸಿರುವುದರಿಂದ, ಇವುಗಳನ್ನು ಕಳೆದುಕೊಳ್ಳುವ ಅಪಾಯವಿಲ್ಲ," ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಆದರೆ, ಹಿರಿಯ ಹಳೆಯ ಶಿಲಾಯುಗ ಪುರಾತತ್ವಜ್ಞ ರವಿ ಕೋರಿಸೆಟ್ಟರ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಮಹತ್ವದ ಸ್ಮಾರಕಗಳ ಮಾಹಿತಿಯನ್ನು ಸರ್ವೇಕ್ಷಣಾ ತಂಡಕ್ಕೆ ನೀಡಬೇಕು. ಅಧಿಸೂಚಿತ ಸ್ಮಾರಕಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ನನಗನಿಸುವುದಿಲ್ಲ, ಬದಲಿಗೆ ಅವು ಬೆಳಕಿಗೆ ಬಂದಿಲ್ಲ ಅಷ್ಟೇ. ಜನರು ಅವುಗಳನ್ನು ಯಾವುದೋ ಒಂದು ರೂಪದಲ್ಲಿ ಬಳಸುತ್ತಿರಬಹುದು," ಎಂದು ಅವರು ತಿಳಿಸಿದ್ದಾರೆ.
ಇಲಾಖೆಯ ಮೂಲಗಳ ಪ್ರಕಾರ, ಹಲವು ಪುರಾತತ್ವ ನಿವೇಶನಗಳು ಈಗ ಕೃಷಿ ಭೂಮಿಗಳಾಗಿ ಪರಿವರ್ತನೆಯಾಗಿವೆ. ಜಲಾಶಯಗಳ ನಿರ್ಮಾಣದಂತಹ ಬೃಹತ್ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವಾಗ ಕೆಲವು ಸ್ಮಾರಕಗಳು ಮುಳುಗಡೆಯಾಗಿರಬಹುದು. ಕೆಲವು ಹಳ್ಳಿಗಳಲ್ಲಿ ಐತಿಹಾಸಿಕ ದೇವಸ್ಥಾನಗಳನ್ನು ಗ್ರಾಮಸ್ಥರೇ ಟ್ರಸ್ಟ್ ಮಾಡಿ ನಡೆಸುತ್ತಿದ್ದಾರೆ. ಇನ್ನು ಕೆಲವು ಕಡೆ ಐತಿಹಾಸಿಕ ಕಲ್ಲುಗಳನ್ನು ಜಾನುವಾರುಗಳನ್ನು ಕಟ್ಟಲು ಬಳಸಲಾಗುತ್ತಿರುವುದು ಕಂಡುಬಂದಿದೆ.
ಪ್ರಾದೇಶಿಕ ನಿರ್ಲಕ್ಷ್ಯ ಮತ್ತು ತಜ್ಞರ ಕಳವಳ
ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆಯ ಸಹವರ್ತಿ ಸಂಜೀವ್ ಕುಮಾರ್ ಪಿ. ಅವರು ಮಾತನಾಡಿ, "ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಸ್ಮಾರಕಗಳನ್ನು ಉತ್ತಮವಾಗಿ ಸಂರಕ್ಷಿಸಲಾಗಿದೆ. ಆದರೆ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಇವು ನಿರ್ಲಕ್ಷ್ಯಕ್ಕೆ ಒಳಗಾಗಿವೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯ ಕೇಂದ್ರ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ವೆಂಕಟರಾವ್ ಪಲಾಟಿ ಮಾತನಾಡಿ, "ಅರಿವಿನ ಕೊರತೆಯಿಂದಾಗಿ ಈ ಭಾಗದಲ್ಲಿ ಐತಿಹಾಸಿಕ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ನಿಜ. ಈ ಭಾಗದಲ್ಲೂ ಸರ್ವೇ ನಡೆಸಲು ಅನುಮತಿ ಕೋರಿ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಅವುಗಳನ್ನು ಸಂರಕ್ಷಿಸಬಹುದು. ಸ್ಥಳಾಂತರಿಸಬಹುದಾದ ಸ್ಮಾರಕಗಳನ್ನು ವಿಶ್ವವಿದ್ಯಾಲಯದಲ್ಲಿ ಸಂರಕ್ಷಿಸಬಹುದು ಅಥವಾ ಪುರಾತತ್ವ ಇಲಾಖೆಗೆ ಹಸ್ತಾಂತರಿಸಬಹುದು," ಎಂದಿದ್ದಾರೆ.
2019 ರಲ್ಲಿ ಪ್ರಾರಂಭವಾದ ಈ ಡಿಜಿಟಲೀಕರಣ ಕಾರ್ಯವು 2024 ರಲ್ಲಿ ಪೂರ್ಣಗೊಂಡಿದೆ. ಪ್ರಸ್ತುತ ತಂಡವು ಕರ್ನಾಟಕದಲ್ಲಿರುವ ಅಧಿಸೂಚಿತ 18 ಸಂಗ್ರಹಾಲಯಗಳ (ಮ್ಯೂಸಿಯಂ) ಡಿಜಿಟಲೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಟ್ಯಾಕ್ (INTACH) ಸಂಸ್ಥೆಯ ಮೀರಾ ಅಯ್ಯರ್ ಮಾತನಾಡಿ, "ಇತ್ತೀಚಿನ ವರ್ಷಗಳಲ್ಲಿ ಅನಿಯಂತ್ರಿತ ನಗರೀಕರಣದಿಂದಾಗಿ ಹಲವು ಸ್ಮಾರಕಗಳು ನಾಶವಾಗಿವೆ. ಹೀಗಿದ್ದೂ, ಸ್ಮಾರಕಗಳನ್ನು ಡಿಜಿಟಲೀಕರಣಗೊಳಿಸುತ್ತಿರುವುದು ಬಹಳ ಒಳ್ಳೆಯ ಉಪಕ್ರಮವಾಗಿದೆ," ಎಂದು ಶ್ಲಾಘಿಸಿದ್ದಾರೆ.


