ಸಚಿವ ಶಿವಲಿಂಗೇಗೌಡರು ತಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಸನಾಂಬೆಯ ದರ್ಶನ ಮಾಡಿಸಲು 5 ಲಕ್ಷ ರೂ. ಮೌಲ್ಯದ 500 ಟಿಕೆಟ್ಗಳನ್ನು ಖರೀದಿಸಿದ್ದಾರೆ. ಜನಸಾಮಾನ್ಯರಿಗೆ ತೊಂದರೆಯಾಗದಿರಲು ಗೋಲ್ಡನ್ ಕಾರ್ಡ್ ಬದಲಿಗೆ ಟಿಕೆಟ್ ಖರೀದಿಸುವ ನಿರ್ಧಾರ ಮಾಡಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ವಿಶೇಷ ಪ್ಯಾಕೇಜ್ ಟೂರ್ ಕೂಡ ಘೋಷಿಸಿದೆ.
ಹಾಸನ ( ನವೆಂಬರ್ 3) : ತಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಸನಾಂಬೆಯ ದರ್ಶನ ಮಾಡಿಸಲು ಸಚಿವ ಶಿವಲಿಂಗೇಗೌಡರು ಬರೋಬ್ಬರಿ ಐದು ಲಕ್ಷ ರೂಪಾಯಿ ನೀಡಿ ಟಿಕೆಟ್ ಖರೀದಿಸಿದ್ದಾರೆ.
ತಮ್ಮ ಆಪ್ತರು ಹಾಗೂ ಕಾರ್ಯರ್ತರಿಗಾಗಿ ಟಿಕೆಟ್ ಖರೀದಿ ಮಾಡಿದ್ದಾರೆ. ಸಾವಿರ ರೂಪಾಯಿ ಮೌಲ್ಯದ ಒಟ್ಟು 500 ಟಿಕೆಟ್ ಖರೀದಿ ಮಾಡಿದ್ದಾರೆ. ಕಾರ್ಯಕರ್ತರಿಗೆ ಗೋಲ್ಡನ್ ಕಾರ್ಡ್ ಹೆಚ್ಚುವರಿಯಾಗಿ ಪ್ರಿಂಟ್ ಮಾಡಿಸದೇ ಟಿಕೆಟ್ ಖರೀದಿ ಮಾಡಿದ್ದಾರೆ. ಗೋಲ್ಡನ್ ಕಾರ್ಡ್ ಹೆಚ್ಚುವರಿಯಾಗಿ ಪ್ರಿಂಟ್ ಮಾಡಿಸಿದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸಚಿವರು ಈ ನಿಧಾರ ಮಾಡಿದ್ದಾರೆ.
ಟಿಕೆಟ್ ಖರೀದಿಸಿದ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಅವರಿಗೆ ಅವುಗಳನ್ನು ಹಸ್ತಾಂತರ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದವರಿಂದ ಟಿಕೆಟ್ ಕೊಡಿಸುವಂತೆ ಸಚಿವರಿಗೆ ಒತ್ತಾಯ ಇತ್ತು. ಈ ಹಿನ್ನೆಲೆಯಲ್ಲಿ ಸಚಿವರು ಐದು ಲಕ್ಷ ನೀಡಿ ಟಿಕೆಟ್ ಖರೀದಿಸಿದ್ದಾರೆ.
ವರ್ಷಕ್ಕೊಮ್ಮೆ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವ ಹಾಸನಾಂಬೆಯ ದರ್ಶನ ಅಕ್ಟೋಬರ್ 29 ರಿಂದ ಆರಂಭವಾಗಿದೆ. ಈ ಐತಿಹಾಸಿಕ ಉತ್ಸವ ಅಕ್ಟೋಬರ್ 29ರಿಂದ ನವೆಂಬರ್ 8ರವರೆಗೆ ಒಟ್ಟು 11 ದಿನಗಳ ಕಾಲ ನಡೆಯಲಿದೆ. ದೇವಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
ಸಂಪ್ರದಾಯದಂತೆ ಮೊದಲ ಮತ್ತು ಕೊನೆಯ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಭಕ್ತರಿಗೆ ದೇವಿಯ ಉಚಿತ ದರ್ಶನದ ಅವಕಾಶವಿದ್ದು, ಸುಗಮ ದರ್ಶನ ಬಯಸುವ ಭಕ್ತರಿಗಾಗಿ ವಿಶೇಷ ದರ್ಶನದ ವ್ಯವಸ್ಥೆ ಇರುತ್ತದೆ. ಭಕ್ತರು ಬಯಸಿದಲ್ಲಿ 1000, 300 ರು.ಗಳ ದರ್ಶನ ಟಿಕೆಟ್, ಲಾಡು ಟಿಕೆಟ್,ಇ-ಹುಂಡಿ ಹಾಗೂ ದೇಣಿಗೆ ಕಾಣಿಕೆಯನ್ನು ಆನ್ಲೈನ್ ಮುಖಾಂತರ https://srihassanaambatemple.com/ ವಾಟ್ಸಾಪ್ ಸಂಖ್ಯೆ 73539 39611 ಮುಖಾಂತರ ಬುಕ್ ಮಾಡಬಹುದು.
ಗೋಲ್ಡ್ಕಾರ್ಡ್ ದರ್ಶನ ಸಮಯ: ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ, ಪ್ರೋಟೋಕಾಲ್ ದರ್ಶನದ ಸಮಯ: ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಅವಕಾಶವಿದೆ.
ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ದಿವ್ಯಾಂಗರ ಅನುಕೂಲಕ್ಕಾಗಿ ಉಚಿತ ಬಸ್ ಸೇವೆಯನ್ನು ಕಲ್ಪಿಸಲಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಿದೆ
ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನ ಭಕ್ತಾದಿಗಳು ಸುಲಭವಾಗಿ ಮತ್ತು ಯಾವುದೇ ಆಯಾಸವಿಲ್ಲದೆ ದೇವಿಯ ದರ್ಶನ ಪಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರಿಗೆ ವ್ಯವಸ್ಥೆ ಮಾಡಿದೆ. 'ಭಕ್ತಿಯ ಹೆಜ್ಜೆಗಳಿಗೆ ಕೆಎಸ್ಆರ್ಟಿಸಿ ಜೊತೆಯಾಗಲಿದೆ' ಎಂಬ ಪರಿಕಲ್ಪನೆಯೊಂದಿಗೆ ನಿಗಮವು ನೂತನ 'ಅಶ್ವಮೇಧ'ಬಸ್ಗಳ ಮೂಲಕ ವಿಶೇಷ ‘ಶ್ರೀ ಹಾಸನಾಂಬ ಪ್ಯಾಕೇಜ್ ಟೂರ್’ ಘೋಷಿಸಿದೆ. ಈ ಪ್ಯಾಕೇಜ್ನ ಪ್ರಮುಖ ಆಕರ್ಷಣೆಯೆಂದರೆ, ಇದರಲ್ಲಿ ಹಾಸನಾಂಬೆಯ ₹1,000 ಮೌಲ್ಯದ ವಿಶೇಷ (VIP) ದರ್ಶನ ಟಿಕೆಟ್ ಕೂಡ ಒಳಗೊಂಡಿರುತ್ತದೆ ಎಂದು ತಿಳಿಸಿದೆ.






