ಶಂಕುಸ್ಥಾಪನೆ ಮುಗಿದು ಎರಡು ವರ್ಷಕಳೆದರೂ ನಿರ್ಮಾಣಗೊಳ್ಳದ ಶಿರಸಿ ಬಸ್‌ಸ್ಟ್ಯಾಂಡ್!
ಬೇರೆ ಕಡೆ ಜನ ಬಸ್ಸಿಗೆ ಕಾಯ್ತಾ ಇದ್ರೆ ಶಿರಸಿಯ ಜನ ಬಸ್ ಸ್ಟ್ಯಾಂಡಿಗೆ ಕಾಯುತ್ತಿದ್ದಾರೆ ಇಂಥದೊಂದು ಟ್ರೋಲ್ ವಾಟ್ಸ್‌ಆ್ಯಪ್‌ಗಳಲ್ಲಿ ಓಡಾಡಿ ಎರಡು ವರ್ಷಗಳೇ ಕಳೆದುಹೋಗಿವೆ. ದುರಂತವೆಂದರೆ ಶಿರಸಿಯ ಜನರ ಬಸ್ ಸ್ಟ್ಯಾಂಡಿಗೆ ಕಾಯುವಿಕೆ ಇನ್ನೂ ಮುಂದುವರಿದಿದೆ.
ಶಿರಸಿ (ಜೂ.9) ಬೇರೆ ಕಡೆ ಜನ ಬಸ್ಸಿಗೆ ಕಾಯ್ತಾ ಇದ್ರೆ ಶಿರಸಿಯ ಜನ ಬಸ್ ಸ್ಟ್ಯಾಂಡಿಗೆ ಕಾಯುತ್ತಿದ್ದಾರೆ! ಇಂಥದೊಂದು ಟ್ರೋಲ್ ವಾಟ್ಸ್‌ಆ್ಯಪ್‌ಗಳಲ್ಲಿ ಓಡಾಡಿ ಎರಡು ವರ್ಷಗಳೇ ಕಳೆದುಹೋಗಿವೆ. ದುರಂತವೆಂದರೆ ಶಿರಸಿಯ ಜನರ ಬಸ್ ಸ್ಟ್ಯಾಂಡಿಗೆ ಕಾಯುವಿಕೆ ಇನ್ನೂ ಮುಂದುವರಿದಿದೆ.
ನಗರದ ಹೃದಯ ಭಾಗದಲ್ಲಿರುವ ಹಳೇ ಬಸ್ ನಿಲ್ದಾಣ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಅದನ್ನು ನೆಲಸಮ ಮಾಡಿ ಮೂರು ವರ್ಷ ಕಳೆದರೂ ಹೊಸ ಬಸ್ ನಿಲ್ದಾಣ ನಿರ್ಮಾಣ ವಾಗದೆ ಇರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ನಗರದ ಗಣೇಶ ನಗರದಲ್ಲಿ ಹೊಸ ಬಸ್ ನಿಲ್ದಾಣವಿದೆ. ಆದರೆ ಸಾರ್ವಜನಿಕರಿಗೆ ಹೊಸ ಬಸ್ ನಿಲ್ದಾಣದ ಸಂಪರ್ಕ ಅಷ್ಟೊಂದು ಇಲ್ಲ. ತರಕಾರಿ ಮಾರುಕಟ್ಟೆಸೇರಿ ಹಲವು ಮಾರುಕಟ್ಟೆಗಳು ಹಳೇ ಬಸ್ ನಿಲ್ದಾಣದ ಸಮೀಪವೇ ಇವೆ. ಪ್ರಯಾಣಿಕರು ಬಸ್‌ಗಾಗಿ ಹಳೇ ಬಸ್ ನಿಲ್ದಾಣವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ಮಳೆಗಾಲದಲ್ಲಿ ಪ್ರಯಾಣಿಕರು ಮಳೆಯಲ್ಲೇ ನಿಂತು ಬಸ್‌ಗಾಗಿ ಕಾಯುವ ಸ್ಥಿತಿ ಇದೆ.
ಭೀಮಣ್ಣನ ಮುಂದೆ ಜಾರಿಬಿದ್ದ ಕಾಗೇರಿ!
ಸುಮಾರು 8 ಕೋಟಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ಕಾಮಗಾರಿ ನಡೆಸಲಾಗುತ್ತಿದ್ದರೂ ಕಾಮಗಾರಿ ಮಾತ್ರ ವೇಗ ಕಂಡುಕೊಳ್ಳುತ್ತಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾದರೆ ಕಾಮಗಾರಿ ಸ್ಥಗಿತಗೊಳಿಸಲಾಗುತ್ತದೆ. ಮತ್ತೇ ಕಾಮಗಾರಿ ಪ್ರಾರಂಭವಾಗುವುದು ಮಳೆಗಾಲದ ನಂತರವೇ. ಅಲ್ಲಿಯವರೆಗೆ ಪ್ರಯಾಣಿಕರು ಪರದಾಡುವುದು ತಪ್ಪುವುದಿಲ್ಲ.
ಹಳೇ ಬಸ್ ನಿಲ್ದಾಣ ಕಾಮಗಾರಿ ಮುಗಿಯವರೆಗೂ ಪಕ್ಕದ ಟೆಂಪೋ ನಿಲ್ದಾಣವನ್ನು ಪಿಕಪ್ ಪಾಯಿಂಟ್ ಆಗಿ ಮಾಡಲಾಗಿದೆ. ಆದರೆ ಇಲ್ಲಿ ಸರಿಯಾದ ಆಸನದ ವ್ಯವಸ್ಥೆಯಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಯಾವುದೂ ಸಹ ಇಲ್ಲ. ಇದರಿಂದ ಪ್ರಯಾಣಿಕರು ದಿನನಿತ್ಯ ಪರದಾಡುತ್ತಿದ್ದಾರೆ. ನೂತನ ಬಸ್ ನಿಲ್ದಾಣ ನಿರ್ಮಾಣ ಆಗುವವರೆಗೆ ಪ್ರಯಾಣಿಕರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಸಾರಿಗೆ ಸಂಸ್ಥೆಗೆ ಆಗ್ರಹಿಸಿದ್ದಾರೆ.
ಆಸಕ್ತಿ ಕಳೆದುಕೊಂಡರು:
ಹಳೇ ಬಸ್ ನಿಲ್ದಾಣ ಶಿಥಿಲಗೊಂಡಿದೆ ಎಂದು ತರಾತುರಿಯಲ್ಲಿ ಕಟ್ಟಡವನ್ನು ಕೆಡವಿ ನೆಲಸಮ ಮಾಡಿದರು. ನಂತರ ಸ್ವತಃ ಸಾರಿಗೆ ಸಚಿವರಾಗಿದ್ದ ಶ್ರೀರಾಮುಲು ಅವರೇ ಶಿರಸಿಗೆ ಬಂದು ನೂತನ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೆಲವೇ ತಿಂಗಳುಗಳಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂಬ ವಿಶ್ವಾಸವನ್ನೂ ನೀಡಿದ್ದರು. ಆದರೆ ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷಗಳು ಕಳೆದರೂ ಸಹ ಶಿರಸಿ ಜನತೆಗೆ ನೂತನ ಬಸ್ ನಿಲ್ದಾಣದ ಭಾಗ್ಯ ಇನ್ನೂ ಸಿಕ್ಕಿಲ್ಲ. ಕೆಡುವುವಾಗ ಇದ್ದ ಆಸಕ್ತಿ ಕಟ್ಟುವಾಗ ಯಾಕಿಲ್ಲ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಮಳೆಗಾಲದಲ್ಲಿ ಹಳೇ ಬಸ್ ನಿಲ್ದಾಣದಲ್ಲಿ ನಿಂತು ಬಸ್‌ಗಾಗಿ ಕಾಯುವುದು ಬಹಳ ಕಷ್ಟವಾಗುತ್ತದೆ. ಆದ್ದರಿಂದ ಸಾರಿಗೆ ಸಂಸ್ಥೆ ಅಧಿಕಾರಿಗಳು ಪಿಕಪ್ ಪಾಯಿಂಟ್ ಮಾಡಿದ ಜಾಗದಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಶಿರಸಿ ಜನತೆಯ ಒತ್ತಾಯವಾಗಿದೆ.
ನಳನಳಿಸಲಿದೆ ಶಿರಸಿ ಜೈನ ಮಠದ ಕೆರೆ: 30 ಅಡಿ ಆಳದವರೆಗೆ ಹೂಳು ತೆರವು
ಮಳೆಗಾಲದಲ್ಲಿ ಹೊಸ ಬಸ್ ನಿಲ್ದಾಣದಿಂದಲೇ ಎಲ್ಲ ಬಸ್‌ಗಳು ಸಂಚಾರ ಮಾಡಲಿವೆ. ನಿಗದಿತ ಮಾರ್ಗದ ಬಸ್‌ಗಳು ಮಾತ್ರ ಹಳೇ ಬಸ್ ನಿಲ್ದಾಣಕ್ಕೆ ಬರಲಿವೆ. ಡಿಸೆಂಬರ್ ಅಂತ್ಯದೊಳಗೆ ಬಸ್ ನಿಲ್ದಾಣ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ.
ಶ್ರೀನಿವಾಸ, ವಿಭಾಗೀಯ ನಿಯಂತ್ರಣಾಧಿಕಾರಿ, ಶಿರಸಿ