ಪಕ್ಷೇತರ ಅಭ್ಯರ್ಥಿಗಳಿಗೇ ಮಣೆ ಹಾಕಿದೆ ಶಿರಾ! ಮತ್ತೆ ಮರಳುತ್ತಾ ಇತಿಹಾಸ.?
ಶೀಘ್ರ ಶಿರಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದ್ದು, ಇತಿಹಾಸ ಮರಕಳಿಸುವ ಸಾಧ್ಯತೆ ಇದೆಯಾ?
ಉಗಮ ಶ್ರೀನಿವಾಸ್
ತುಮಕೂರು (ಸೆ.24): ಬಿ. ಸತ್ಯನಾರಾಯಣ ಅವರ ನಿಧನದಿಂದಾಗಿ ನಡೆಯಲಿರುವ ಉಪಚುನಾವಣೆಗೆ ಶಿರಾ ಸದ್ದಿಲ್ಲದೆ ಸಿದ್ಧವಾಗುತ್ತಿದ್ದು, ಈವರೆಗಿನ ಶಿರಾ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಭರ್ತಿ 4 ಬಾರಿ ಪಕ್ಷೇತರ ಅಭ್ಯರ್ಥಿಗಳಿಗೆ ಕ್ಷೇತ್ರದ ಜನತೆ ಮಣೆ ಹಾಕಿದ್ದಾರೆ.
1952 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎನ್. ರಾಮೇಗೌಡ ಅವರು ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ರಾಮೇಗೌಡ ಅವರು 11387 ಮತ ಪಡೆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಕ್ಷದಿಂದ ಸ್ಪರ್ಧಿಸಿದ್ದ ತಾರೇಗೌಡ 10401 ಮತಗಳನ್ನು ಪಡೆದಿದ್ದರು.
1957 ರಲ್ಲಿ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ ಶಿರಾ ದ್ವಿಸದಸ್ಯ ಕ್ಷೇತ್ರವಾಗಿತ್ತು. ಆಗ ದೇವಣಂ ಎ. ಸತ್ಯನಾರಾಯಣ ಅವರು 7022 ಮತಗಳನ್ನು ಪಡೆದು ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. ಬಿಜೆಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಂ. ಚಂದ್ರಶೇಖರಯ್ಯ ಅವರು 6972 ಮತಗಳನ್ನು ಪಡೆದು ಪರಾಭವಗೊಂಡರು.
ಶಿರಾ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ವಿರುದ್ಧ ದೂರು ..
1962 ರಲ್ಲಿ ನಡೆದ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸಿ.ಜೆ. ಮುಕ್ಕಣ್ಣಪ್ಪ ಅವರು 21746 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು. ಹಾಗೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾಲಿಮರಿಯಪ್ಪ ಅವರು 18 ಸಾವಿರದ 2 ಮತಗಳನ್ನು ಪಡೆದು ಪರಾಭವಗೊಂಡರು.
1983 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೂಡ್ಲೇಗೌಡ ಅವರು 42 ಸಾವಿರದ 15 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರು. ಹಾಗೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಎನ್. ಕೃಷ್ಣಯ್ಯ ಅವರು 14800 ಮತಗಳನ್ನು ಪಡೆದು ಪರಾಭವಗೊಂಡರು. ಇದಲ್ಲದೆ ಈವರೆಗಿನ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಸೋತರೂ ಗಣನೀಯ ಮತಗಳನ್ನು ಪಡೆದಿರುವುದು ಕೂಡ ವಿಶೇಷ.
ಈಗ ಬಿ. ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು ಸದ್ದಿಲ್ಲದೆ ಚುನಾವಣಾ ಅಖಾಡ ಸಜ್ಜಾಗಿದೆ.
ಕಳ್ಳಂಬೆಳ್ಳ ಕ್ಷೇತ್ರದಿಂದ ಈ ಮೊದಲು ಸ್ಪರ್ಧಿಸುತ್ತಿದ್ದ ಜಯಚಂದ್ರ ಅವರು ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಶಿರಾ ಕ್ಷೇತ್ರಕ್ಕೆ ಬಂದು ಸತತ ಎರಡು ಚುನಾವಣೆಯಲ್ಲಿ ಗೆದ್ದಿದ್ದರು. ಕಳೆದ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಜಯಚಂದ್ರ ಅವರಿಗೆ ಬಿ. ಸತ್ಯನಾರಾಯಣ ಅವರ ಪರ ಬಂದ ಅನುಕಂಪದ ಅಲೆ ಹಿನ್ನೆಲೆಯಲ್ಲಿ ಜಯಚಂದ್ರ ಪರಾಭವಗೊಂಡಿದ್ದರು. ಆಗ ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಬಿ. ಸತ್ಯನಾರಾಯಣ ಮಂತ್ರಿ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಜೆಡಿಎಸ್ ವರಿಷ್ಠರು ಸತ್ಯನಾರಾಯಣ ಬದಲಿಗೆ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್‌ಗೆ ಮಣೆ ಹಾಕಿದ್ದರು. ಸಚಿವ ಸ್ಥಾನದ ಬದಲಿಗೆ ಸತ್ಯನಾರಾಯಣ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಲಾಗಿತ್ತು.
ಆಪರೇಷನ್ ಕಮಲ ನಡೆಯುವ ಸಂದರ್ಭದಲ್ಲೆಲ್ಲಾ ಬಿ. ಸತ್ಯನಾರಾಯಣ್ ಬಿಜೆಪಿಗೆ ಹೋಗುತ್ತಾರೆ ಎಂಬ ಗಾಳಿ ಸುದ್ದಿಗಳು ಹಬ್ಬುತ್ತಿದ್ದವು. ಆದರೆ ಸತ್ಯನಾರಾಯಣ ಅವರು ಯಾವತ್ತೂ ಕೂಡ ಜೆಡಿಎಸ್ ಪಕ್ಷ ಹಾಗೂ ದೇವೇಗೌಡರ ನೆಚ್ಚಿನ ವ್ಯಕ್ತಿಯಾಗಿದ್ದರು. ಹೀಗಾಗಿ ಪಕ್ಷ ತೊರೆಯುವ ಗೋಜಿಗೆ ಹೋಗಲಿಲ್ಲ. ಸಚಿವ ಸ್ಥಾನ ಸಿಗದಿದ್ದಾಗಲೂ ಕೂಡ ವರಿಷ್ಠರೊಂದಿಗೆ ಅವರು ಮುನಿಸಿಕೊಂಡಿರಲಿಲ್ಲ. ಈಗ ಅವರ ನಿಧನದಿಂದ ಚುನಾವಣೆ ನಡೆಯಲಿದ್ದು ದಿನೇ ದಿನೇ ಶಿರಾ ರಂಗು ಪಡೆದುಕೊಳ್ಳುತ್ತಿದೆ.