ಮಂಗಳೂರು: ಮುಳುಗಿದ ನೌಕೆ, ತೈಲ ಬೇರ್ಪಡಿಸಲು ಗುಜರಾತ್‌ನಿಂದ ನೌಕೆ ಆಗಮನ

*  ಅನಿವಾರ್ಯವಾದರೆ ತೈಲ ಹೊರತೆಗೆಯುವ ಕಾರ್ಯಾಚರಣೆ, ನೌಕೆ ಹೊರ ತೆಗೆಯಲೂ ಚಿಂತನೆ
*  ತಳಭಾಗ ಸಿಕ್ಕಿದ ಕಾರಣ ನೌಕೆ ಮುಳುಗಿಲ್ಲ?
*  ಮುಳುಗಿರುವ ನೌಕೆಯ ಬಗ್ಗೆ ಕೋಸ್ಟ್‌ಗಾರ್ಡ್‌ ನೌಕೆ ಹಾಗೂ ಹೆಲಿಕಾಪ್ಟರ್‌ಗಳ ಕಣ್ಗಾವಲು 
 

Ship Arrival From Gujarat To Separate Oil in Mangaluru Sea grg

ಮಂಗಳೂರು(ಜೂ.26): ಉಳ್ಳಾಲ ಸಮುದ್ರ ತೀರದ 1.5 ನಾಟಿಕಲ್‌ ಮೈಲ್‌ ದೂರದ ಕಡಲಿನಲ್ಲಿ ಮುಳುಗಿರುವ ಪ್ರಿನ್ಸೆಸ್‌ ಮಿರಾಲ್‌ ಸರಕು ನೌಕೆಯಿಂದ ತೈಲ ಸೋರಿಕೆ ಭೀತಿ ಹಿನ್ನೆಲೆಯಲ್ಲಿ ಗುಜರಾತ್‌ನಿಂದ ಸಮುದ್ರ ಪಾವಕ್‌ ಎಂಬ ವಿಶೇಷ ತಂತ್ರಜ್ಞ ನೌಕೆ ಶನಿವಾರ ಮಂಗಳೂರಿಗೆ ಆಗಮಿಸಿದೆ.

ಗುಜರಾತ್‌ನ ಪೋರ್‌ಬಂದರ್‌ನಿಂದ ಈ ನೌಕೆಯನ್ನು ಕರೆಸಲಾಗಿದ್ದು, ಇದು ಸಂಪೂರ್ಣ ಸುಸಜ್ಜಿತ ಮಾಲಿನ್ಯ ನಿಯಂತ್ರಣ ನೌಕೆಯಾಗಿದೆ. ಈ ನೌಕೆಯನ್ನು ಬಳಸಿಕೊಂಡು ಹೆಲಿಕಾಪ್ಟರ್‌ ಹಾಗೂ ಇತರೆ ನೌಕೆಗಳ ಸಹಾಯದಲ್ಲಿ ಮುಳುಗಿರುವ ಪ್ರಿನ್ಸೆಸ್‌ ಮಿರಾಲ್‌ ನೌಕೆಯಿಂದ ತೈಲ ಹೊರತೆಗೆಯಲು ಪ್ರಯತ್ನ ನಡೆಸಲಿದೆ.

ಚೀನಾ to ಲೆಬನಾನ್ ಹಡಗು ಮಂಗ್ಳೂರಿಗೆ ಬಂದಿದ್ದೇಕೆ?: ಕರಾವಳಿ ಸಮುದ್ರದಲ್ಲಿ ಹೈ ಅಲರ್ಟ್‌..!

ಸಮುದ್ರ ಪಾವಕ್‌ ನೌಕೆ ಶನಿವಾರ ಮುಳುಗಿದ ನೌಕೆಯ ಪ್ರದೇಶವನ್ನು ಸುತ್ತುಹಾಕಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದೆ. ಸದ್ಯ ಪ್ರಿನ್ಸೆಸ್‌ ಮಿರಾಲ್‌ ನೌಕೆ ಪೂರ್ತಿಯಾಗಿ ಮುಳುಗಿಲ್ಲ. ಆದ್ದರಿಂದ ತಕ್ಷಣದಲ್ಲಿ ಅದರಲ್ಲಿರುವ 150 ಮೆಟ್ರಿಕ್‌ ಟನ್‌ ತೈಲ ಹೊರಚೆಲ್ಲುವ ಸಾಧ್ಯತೆ ಇಲ್ಲ. ಆದರೂ ಸಮುದ್ರ ಪ್ರಕ್ಷುಬ್ಧಗೊಂಡು ನೌಕೆ ಸಂಪೂರ್ಣ ಮುಳುಗಡೆಯಾದರೆ ತೈಲ ಸೋರಿಕೆಯ ಸಂಭವನೀಯತೆಯನ್ನು ಅಲ್ಲಗಳೆಯಲಾಗದು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ತೈಲ ಹೊರಗೆ ತೆಗೆಯುವ ಬಗ್ಗೆ ಪರಾಮರ್ಶೆ ನಡೆಸಲಿದೆ ಎಂದು ಕೋಸ್ಟ್‌ಗಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಮುಳುಗಿರುವ ನೌಕೆಯ ಬಗ್ಗೆ ಕೋಸ್ಟ್‌ಗಾರ್ಡ್‌ ನೌಕೆ ಹಾಗೂ ಹೆಲಿಕಾಪ್ಟರ್‌ಗಳು ಕಣ್ಗಾವಲು ಇರಿಸಿವೆ. ಒಂದು ವೇಳೆ ತೈಲ ಮಾಲಿನ್ಯ ಉಂಟಾದರೆ ಕೈಗೊಳ್ಳಬೇಕಾದರೆ ಕ್ರಮಗಳ ಬಗ್ಗೆ ಸಮುದ್ರ ಪಾವಕ್‌ ವಿಶೇಷ ನೌಕೆಯ ತಂತ್ರಜ್ಞರ ಜತೆ ದ.ಕ. ಜಿಲ್ಲಾಡಳಿತ ಸಮಾಲೋಚನೆ ನಡೆಸಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಶನಿವಾರ ಕೋಸ್ಟ್‌ಗಾರ್ಡ್‌, ಕರಾವಳಿ ಕಾವಲು ಪೊಲೀಸ್‌, ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮೀನುಗಾರ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ. ತೈಲ ಸೋರಿಕೆ ಕಂಡುಬಂದರೆ ವಿಶೇಷ ನೌಕೆಯ ತಂತ್ರಜ್ಞರು ಕೂಡ ಸೋರಿಕೆ ತಡೆ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರುವುದಾಗಿ ಹೇಳಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಮುಳುಗಿದ ನೌಕೆಯ ಸುತ್ತ ಗಾಳಿ ತುಂಬಿದ ಬೂಮ್‌ಗಳನ್ನು ಬಳಸಿ ಬ್ಯಾರಿಕೇಡ್‌ ರಚಿಸಲಾಗಿದೆ. ಈಗಾಗಲೇ ಕೋಸ್ಟ್‌ಗಾರ್ಡ್‌ ನೌಕೆ, 9 ಹಡಗು, 3 ಕೋಸ್ಟ್‌ಗಾರ್ಡ್‌ ಹೆಲಿಕಾಪ್ಟರ್‌ಗಳು ಮುಳುಗಿದ ನೌಕೆಯ ಸುತ್ತ ಪರಿವೀಕ್ಷಣೆ ನಡೆಸುತ್ತಿವೆ.

ತಳಭಾಗ ಸಿಕ್ಕಿದ ಕಾರಣ ನೌಕೆ ಮುಳುಗಿಲ್ಲ?

ಪ್ರಿನ್ಸೆಸ್‌ ಮಿರಾಲ್‌ ಸರಕು ನೌಕೆ ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿ ಶನಿವಾರಕ್ಕೆ ಐದು ದಿನ ಕಳೆದಿದೆ. ಆದರೂ ನೌಕೆ ಪೂರ್ತಿಯಾಗಿ ಮುಳುಗಿಲ್ಲ. ಬಹುಶಃ ತಳಭಾಗದಲ್ಲಿ ಭೂಮಿಯಂತಹ ಕೆಸರಿನ ಭಾಗ ಸಿಲುಕಿ ನೌಕೆ ಸಂಪೂರ್ಣ ಮುಳುಗಡೆಯಾಗಿಲ್ಲ ಎನ್ನುವ ತರ್ಕವನ್ನು ಕೋಸ್ಟ್‌ಗಾರ್ಡ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ಸಾಮಾನ್ಯವಾಗಿ ನೌಕೆಗಳು ನಾಲ್ಕೈದು ದಿನಗಳ ವರೆಗೆ ಹಾಗೆಯೇ ಇರುವುದಿಲ್ಲ. ಈ ನೌಕೆಯ ತಳಭಾಗದಲ್ಲಿ ಮೂರು ರಂಧ್ರ ಉಂಟಾಗಿ ಅದರಿಂದ ನೀರು ಒಳನುಗ್ಗುತ್ತಿತ್ತು. ಹಾಗಾಗಿ ಅದರಲ್ಲಿದ್ದ 15 ಮಂದಿಯನ್ನು ಕೋಸ್ಟ್‌ಗಾರ್ಡ್‌ ತಂಡ ಕಾರ್ಯಾಚರಣೆ ನಡೆಸಿ ರಕ್ಷಿಸಿತ್ತು. ರಂಧ್ರದಿಂದ ನೀರು ನುಗ್ಗಿದ ಕಾರಣ ನೌಕೆ ಶೇ.90ರಷ್ಟು ಮುಳುಗಡೆಯಾಗಿದೆ. ಇನ್ನೂ ಶೇ.10 ಭಾಗ ಕಳೆದ ಎರಡು ದಿನಗಳಿಂದ ಹಾಗೆಯೇ ಇದೆ. ಪೂರ್ತಿಯಾಗಿ ಮುಳುಗದೇ ಇರಲು ತಳಭಾಗ ಕೆಸರಿನ ಭಾಗದಲ್ಲಿ ಸ್ಪರ್ಶಿಸಿರಬೇಕು ಎಂದು ನಂಬಲಾಗಿದೆ. ಸಮುದ್ರ ಪ್ರಕ್ಷುಬ್ಧ ಇರುವುದರಿಂದ ಮುಳುಗಿದ ನೌಕೆಯ ಬಳಿಗೆ ತೆರಳಿ ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲ.

ಮಂಗಳೂರು: ಸುಳ್ಯದಲ್ಲೂ ಕಂಪಿಸಿದ ಭೂಮಿ, ಗೋಡೆಗಳಲ್ಲಿ ಬಿರುಕು..!

ನೌಕೆ ಮೇಲೆತ್ತಲು ಸಾಧ್ಯವೇ?:

ಪೂರ್ತಿಯಾಗಿ ಮುಳುಗದೇ ಇರುವುದರಿಂದ ನೌಕೆಯನ್ನು ಮೇಲೆತ್ತುವ ಸಾಧ್ಯತೆಯ ಬಗ್ಗೆ ಮುಂಬೈ ಬಂದರಿನ ವಿಶೇಷ ತಂತ್ರಜ್ಞರು ಚಿಂತನೆ ನಡೆಸುತ್ತಿದ್ದಾರೆ. ಈ ವಿಶೇಷ ತಂತ್ರಜ್ಞರ ಜತೆ ಕೋಸ್ಟ್‌ಗಾರ್ಡ್‌ ಹಾಗೂ ಜಿಲ್ಲಾಡಳಿತ ಸಮಾಲೋಚನೆ ನಡೆಸುತ್ತಿದೆ. ಆದರೆ ಮುಳುಗಡೆಯಾಗಿರುವ 35 ವರ್ಷದ ಈ ಹಳೆ ನೌಕೆಯ ಬಗ್ಗೆ ಅದರ ಮಾಲೀಕರು ಹೆಚ್ಚಿನ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಆದರೂ ಸಮುದ್ರ ಮಾಲಿನ್ಯ ತಡೆಗಟ್ಟುವ ದಿಶೆಯಲ್ಲಿ ಜಿಲ್ಲಾಡಳಿತವೇ ಮುತುವರ್ಜಿ ವಹಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಮುಳುಗಿದ ನೌಕೆಯಿಂದ ತೈಲ ಸೋರಿಕೆ ತಡೆಗಟ್ಟಲು ಗುಜರಾತ್‌ನಿಂದ ವಿಶೇಷ ನೌಕೆಯನ್ನು ತರಿಸಲಾಗಿದೆ. ಅದರಲ್ಲಿನ ತಂತ್ರಜ್ಞರು ತೈಲ ಸೋರಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಿದ್ದಾರೆ. ಅನಿವಾರ್ಯವಾದರೆ ಕಾರ್ಯಾಚರಣೆ ನಡೆಸಿ ತೈಲವನ್ನು ನೌಕೆಯಿಂದ ಹೊರಗೆ ತೆಗೆಯಲಿದ್ದಾರೆ. ಯಾವುದಕ್ಕೂ ಪರಿಸ್ಥಿತಿಯ ಅವಲೋಕನ ನಡೆಸಲಾಗುತ್ತಿದೆ ಅಂತ  ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios