ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ 2021-22ನೇ ಸಾಲಿನಿಂದ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಗಳು ಮತ್ತು ಅಕ್ರಮಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರವು ತನಿಖಾ ಸಮಿತಿಯನ್ನು ರಚಿಸಿದೆ. ನಿವೃತ್ತ ಸಕ್ಕರೆ ಆಯುಕ್ತ ಶೇಖರ್ ಗಾಯಕ್‌ವಾಡ್ ಅಧ್ಯಕ್ಷತೆಯ ಈ ಸಮಿತಿಯು  15 ದಿನಗಳಲ್ಲಿ ವರದಿ ಸಲ್ಲಿಸಲಿದೆ.

ಮಂಡ್ಯ: ಮಂಡ್ಯದ ಮೈಷುಗರ್ ಕಾರ್ಖಾನೆಯಲ್ಲಿ 2021–22ನೇ ಸಾಲಿನಿಂದ ಇದುವರೆಗೆ ನಡೆದಿದೆ ಎನ್ನಲಾದ ಆರ್ಥಿಕ ಅವ್ಯವಹಾರಗಳು, ನಿಯಮಬಾಹಿರ ಚಟುವಟಿಕೆಗಳು, ಕಂಪನಿಗೆ ಉಂಟಾಗಿದೆ ಎನ್ನಲಾದ ಭಾರೀ ನಷ್ಟ, ಅಕ್ರಮ ನೇಮಕಾತಿ ಸೇರಿದಂತೆ ವಿವಿಧ ಗಂಭೀರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ತನಿಖಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದೆ.

ತನಿಖಾ ಸಮಿತಿಯಲ್ಲಿ ಯಾರಿದ್ದಾರೆ?

ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತರಾದ ಶೇಖರ್ ಗಾಯಕ್‌ವಾಡ್ ಅವರ ಅಧ್ಯಕ್ಷತೆಯಲ್ಲಿ ಈ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಮಹಾರಾಷ್ಟ್ರದ ಪುಣೆಯಲ್ಲಿರುವ ವಸಂತದಾದ ಷುಗರ್ ಇನ್‌ಸ್ಟಿಟ್ಯೂಟ್‌ನ ಷುಗರ್ಸ್ ಎಂಜಿನಿಯರಿಂಗ್ ಮತ್ತು ರಿನೀವೆಬಲ್ ಎನರ್ಜಿ ವಿಭಾಗದ ಮುಖ್ಯಸ್ಥ ರಾಜೇಂದ್ರ ಚಾಂದಗುಡೆ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಬಿ.ಎಸ್. ರಾಜಗೋಪಾಲ್, ಅದೇ ಸಂಸ್ಥೆಯ ತಾಂತ್ರಿಕ ಸಲಹೆಗಾರ ಸಿ.ಬಿ. ಪಾಟೀಲ್, ಲಾತೂರ್‌ನ ಮುಜಾವರ ಬಹದೂರಲಿ ಇಬ್ರಾಹಿಂ ಅವರನ್ನು ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ.

ಮೈಷುಗರ್ ಕಾರ್ಖಾನೆಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಪ್ಪಾಸಾಹೇಬ್ ಪಾಟೀಲ್, ಎಂ.ಆರ್. ರವಿಕುಮಾರ್, ಡಾ. ಎಚ್.ಎಲ್. ನಾಗರಾಜು, ಹಾಗೂ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್, ವ್ಯವಸ್ಥಾಪಕ (ತಾಂತ್ರಿಕ) ಅಪ್ಪಾಸಾಹೇಬ್ ಪಾಟೀಲ್, ಕಬ್ಬು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ತೇಜಸ್ವಿನಿ ಮತ್ತು ರಮೇಶ್ ಚೆಲ್ಲಾಪುರ್ ಅವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತಂತೆ ಸಮಿತಿ ತನಿಖೆ ನಡೆಸಲಿದೆ.

ಕ್ಷೇತ್ರ ಸಹಾಯಕರ ಆಯ್ಕೆ ಪ್ರಕ್ರಿಯೆ, ಕಬ್ಬು ಕಟಾವಿಗೆ ಮುಂಗಡ ಹಣ ಪಾವತಿ, ಕಬ್ಬು ಕಟಾವು ಮತ್ತು ಸಾಗಣೆ, ಕಬ್ಬಿನ ತೂಕದ ಅಳತೆ ಹಾಗೂ ಹಣ ಪಾವತಿ, ಹೊರಗುತ್ತಿಗೆ ನೌಕರರ ನೇಮಕಾತಿ, ಸಕ್ಕರೆ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು, ಕಾರ್ಖಾನೆ ಆವರಣದಲ್ಲಿನ ಮರಗಳ ಕಟಾವು, ಕಾಮಗಾರಿಗಳ ನಿರ್ವಹಣೆ, ನಿವೃತ್ತ ಹಾಗೂ ಸ್ವಯಂ ನಿವೃತ್ತಿ ಪಡೆದ ನೌಕರರನ್ನು ಮರುನೇಮಕ ಮಾಡಿರುವುದು, ಕರ್ತವ್ಯನಿರ್ಲಕ್ಷ್ಯತೆ, ಕಂಪನಿಗೆ ಸೇರಿದ ಖಾಲಿ ಜಾಗವನ್ನು ಗುತ್ತಿಗೆ ನೀಡಿರುವುದು ಸೇರಿದಂತೆ ಹಲವು ನಿಯಮಬಾಹಿರ ಚಟುವಟಿಕೆಗಳಿಂದ ಕಂಪನಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಆರೋಪಗಳೇನು?

ಇದಲ್ಲದೆ, ಸಭಾ ನಡವಳಿಕೆಗಳಿಗೆ ನಿಯಮಬಾಹೀರವಾಗಿ ಸಹಿ ಹಾಕಿರುವುದು, ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳ ಉಲ್ಲಂಘನೆ, 2023–24ನೇ ಸಾಲಿನಲ್ಲಿ ಕಾರ್ಖಾನೆಯ ಸಕ್ಕರೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿರುವ ಆರೋಪ, ಕೋಣನಹಳ್ಳಿ ಕೆರೆಯಿಂದ ಕಾರ್ಖಾನೆಗೆ ನೀರು ಸರಬರಾಜು ಮಾಡುವ ಸಲುವಾಗಿ ಪೈಪ್‌ಲೈನ್ ಅಳವಡಿಸಿರುವ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು, ಮೈಷುಗರ್ ಕಂಪನಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಗುತ್ತಿಗೆ ನೀಡಿ ಕಾರ್ಖಾನೆಗೆ ತುಂಬಲಾರದ ನಷ್ಟ ಉಂಟುಮಾಡಿರುವ ಆರೋಪಗಳೂ ಸಮಿತಿಯ ತನಿಖೆಯ ವ್ಯಾಪ್ತಿಗೆ ಒಳಪಟ್ಟಿವೆ.

ಈ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕಂಪನಿಗೆ ಉಂಟಾದ ನಷ್ಟವನ್ನು ವಸೂಲಿ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟು ಅನೇಕ ದೂರುಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ.

ತನಿಖಾ ಸಮಿತಿಯು ಮೈಷುಗರ್ ಕಾರ್ಖಾನೆಗೆ ಭೇಟಿ ನೀಡಿ ಪ್ರತಿಯೊಂದು ದೂರುಗಳ ಕುರಿತು ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ 15 ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಸಮಿತಿಗೆ ಅಗತ್ಯ ದಾಖಲೆಗಳು, ಮಾಹಿತಿಗಳು, ಸ್ಥಳಾವಕಾಶ ಹಾಗೂ ಸಿಬ್ಬಂದಿಯನ್ನು ಕಂಪನಿಯೇ ಒದಗಿಸಬೇಕು. ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಪ್ರಯಾಣ ಮತ್ತು ವಸತಿ ವೆಚ್ಚಗಳನ್ನೂ ಕಂಪನಿಯೇ ಭರಿಸಬೇಕೆಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಸಕ್ಕರೆ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಾರಾಮ ತಿಳಿಸಿದ್ದಾರೆ.