ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಸ್ಥಳದಲ್ಲಿ ವಾನರ ಸೇನೆ ಕಾಣಿಸಿಕೊಂಡು ಕುತೂಹಲ ಮೂಡಿಸಿದೆ. ಈ ಉತ್ಖನನದಲ್ಲಿ ಚಾಲುಕ್ಯ ಶೈಲಿಯ ತಾಮ್ರದ ಶಿವಲಿಂಗ, ನಾಗನ ಕಲ್ಲುಗಳು ಸೇರಿದಂತೆ ಹಲವು ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ.
ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ಸ್ಥಳದಲ್ಲಿ ವಾನರ ಸೇನೆಯ ಲಗ್ಗೆಯಿಂದಾಗಿ ಸ್ಥಳೀಯರಲ್ಲಿ ಕುತೂಹಲ ಮೂಡಿತು. ಇಷ್ಟು ದಿನ ಹಾವು ಪ್ರತ್ಯಕ್ಷವಾದ ಬಗ್ಗೆ ವರದಿ ಇತ್ತು. ಇದೀಗ ದಿಢೀರ್ ವಾನರ ಸೇನೆ ಪ್ರತ್ಯಕ್ಷವಾಗಿದೆ.ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಸಮೀಪದಲ್ಲಿ ನಡೆಯುತ್ತಿರುವ ಉತ್ಖನನ ಪ್ರದೇಶದ ಸುತ್ತಮುತ್ತ ದೊಡ್ಡ ಸಂಖ್ಯೆಯಲ್ಲಿ ಮಂಗಗಳು ಓಡಾಡುತ್ತಿರುವುದು ಕಂಡುಬಂದಿದೆ.
ಮಂಗಗಳಿಂದ ಎಚ್ಚರಿಕೆ ಅಗತ್ಯ
ಉತ್ಖನನ ಜಾಗಯ ಪಕ್ಕದಲ್ಲೇ ಗುಂಪು ಗುಂಪಾಗಿ ಸಂಚರಿಸುತ್ತಿರುವ ಮಂಗಗಳು, ತಂಡವಾಗಿ ಬಂದು ದೇವಸ್ಥಾನದ ಅಂಗಳ, ಕೋಟೆಯ ಗೋಡೆ ಹಾಗೂ ಸುತ್ತಲಿನ ಆವರಣದಲ್ಲಿ ಮುಕ್ತವಾಗಿ ಓಡಾಡುತ್ತಿವೆ. ಕೆಲವೊಮ್ಮೆ ಏಕಾಏಕಿ ಲಗ್ಗೆ ಇಡುವ ಮಂಗಗಳ ಚಟುವಟಿಕೆಗಳು ಉತ್ಖನನ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿ ಮತ್ತು ಕಾರ್ಮಿಕರಲ್ಲಿ ಭಯ ಹುಟ್ಟಿಸಿದೆ. ಐತಿಹಾಸಿಕ ಮಹತ್ವ ಹೊಂದಿರುವ ಕೋಟೆ ವೀರಭದ್ರೇಶ್ವರ ದೇವಸ್ಥಾನ ಹಾಗೂ ಅದರ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯಕ್ಕೆ ಮಂಗಗಳ ಹಾವಳಿ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ, ಪುರಾತತ್ವ ತಜ್ಞರು ಮತ್ತು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಇಲ್ಲಿವರೆಗೆ ಏನು ಸಿಕ್ಕಿದೆ?
ಐತಿಹಾಸಿಕ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯಿಂದ ನಡೆಯುತ್ತಿರುವ ಉತ್ಖನನ ಮುಂದುವರೆದಿದ್ದು, 6ನೇ ದಿನ ಬುಧವಾರ ಹಲವು ಕುರುಹುಗಳು ಪತ್ತೆಯಾಗಿದೆ. ಇಂದು ಮಣ್ಣಿನ ಬಿಲ್ಲೆಗಳು, ನಾಗನ ಕಲ್ಲುಗಳು ಪತ್ತೆಯಾಗಿದೆ. ಚಾಲುಕ್ಯ ಶೈಲಿಯ ಕೆತ್ತನೆ ಇರುವ ತಾಮ್ರದ ಶಿವಲಿಂಗ, ಗಂಟೆ ಲಭ್ಯವಾಗಿವೆ. ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಪ್ರಾಚೀನ ಕಾಲದ ತ್ರಿಕೋನಾಕಾರದ ಆಯುಧ, ಶಿಲಾಯುಗದ ಆಯುಧ ಮಾದರಿಯ ಕಲ್ಲು. ಶಿವಲಿಂಗವನ್ನು ಇಡುವ ಶಿಲೆಯ ಗೋಪುರ, ವಿವಿಧ ಗಾತ್ರದ ಮತ್ತು ವಿನ್ಯಾಸದ ಮಣ್ಣಿನ ಪಾತ್ರೆಗಳ ಅವಶೇಷಗಳು ಇದುವರೆಗೂ ಪತ್ತೆಯಾಗಿವೆ.


