ಚೀನಾ to ಲೆಬನಾನ್ ಹಡಗು ಮಂಗ್ಳೂರಿಗೆ ಬಂದಿದ್ದೇಕೆ?: ಕರಾವಳಿ ಸಮುದ್ರದಲ್ಲಿ ಹೈ ಅಲರ್ಟ್..!
* ವಿದೇಶಿ ವ್ಯಾಪಾರಿ ಹಡಗು ಮಂಗಳೂರು ಸಮುದ್ರ ಪ್ರವೇಶ ಮಾಡಿದ್ದು ಯಾಕೆ?
* ಮಂಗಳೂರು ಸಮುದ್ರದಲ್ಲಿ ಹಡಗು ಮುಳುಗಡೆ
* ತೈಲ ಸೋರಿಕೆ ಆತಂಕ
ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಜೂ.26): ಮಂಗಳೂರಿನ ಉಚ್ಚಿಲ ಸಮುದ್ರ ತೀರದ ಕೆಲವೇ ಮೈಲುಗಳ ದೂರದಲ್ಲಿ ವಿದೇಶಿ ಸರಕು ಸಾಗಣೆ ಹಡಗು ಮುಳುಗಡೆ ಬೆನ್ನಲ್ಲೇ ಭಾರೀ ಅನುಮಾನವೊಂದು ಎದ್ದಿದ್ದು, ಮಂಗಳೂರಿನ ಜೊತೆ ಸಂಪರ್ಕವೇ ಇಲ್ಲದ ವಿದೇಶಿ ವ್ಯಾಪಾರಿ ಹಡಗು ಮಂಗಳೂರು ಸಮುದ್ರ ಪ್ರವೇಶ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳು ಎದ್ದಿವೆ.
ಮೂಲತಃ ಸಿರಿಯಾ ದೇಶದ ಹಡಗು ಇದಾಗಿದ್ದು, ಚೀನಾದಿಂದ ಲೆಬನಾನ್‌ಗೆ ಸರಕು ಸಾಗಾಟ ನಡೆಸುತ್ತಿತ್ತು. ಆದರೆ ಈ ದಾರಿಯ ಮಧ್ಯೆ ಚೀನಾದ ಸರಕು ಹಡಗು ಮಂಗಳೂರು ಸಮುದ್ರ ಪ್ರವೇಶಿಸಿದ್ದೇಕೆ? ಎಂಬ ಅನುಮಾನ ಮೂಡಿದೆ. ಚೀನಾದ ಟಿಯಾಂಜಿನ್‌ನಿಂದ ಲೆಬನಾನ್‌ಗೆ ಸಾಗುತ್ತಿದ್ದ ಎಂ.ಬಿ.ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಸಮುದ್ರದ ಮಧ್ಯೆ ಸಾಗಬೇಕಾಗಿದ್ದು, ಅದನ್ನ ಬಿಟ್ಟು ಉಚ್ಚಿಲ ಸಮುದ್ರ ತೀರ ಪ್ರವೇಶದ ಕಾರಣ ನಿಗೂಢವಾಗಿದೆ. ಯಾವುದೇ ಸರಕು ಸಂಪರ್ಕ ಇಲ್ಲದೇ ಇದ್ರೂ ಮಂಗಳೂರಿಗೆ ಹಡಗು ಬಂದಿದ್ದೇಕೆ? ಎಂಬ ಬಗ್ಗೆ ಕೇಂದ್ರದ ತನಿಖಾ ದಳದಿಂದ ಹಡಗು ಮಂಗಳೂರು ಕಡಲ ತೀರ ಪ್ರವೇಶದ ಬಗ್ಗೆ ತನಿಖೆ ಶುರುವಾಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಜೊತೆ ಕೇಂದ್ರದ ಇತರೆ ತನಿಖಾ ದಳದಿಂದ ತನಿಖೆ ಆರಂಭವಾಗಿದ್ದು, 32 ವರ್ಷ ಹಳೆಯದಾದ ಸಿರಿಯಾ ದೇಶಕ್ಕೆ ಸೇರಿದ ಹಡಗು ಇದಾಗಿದೆ.
ಮಂಗಳೂರು: ಸುಳ್ಯದಲ್ಲೂ ಕಂಪಿಸಿದ ಭೂಮಿ, ಗೋಡೆಗಳಲ್ಲಿ ಬಿರುಕು..!
ತೈಲ ಸೋರಿಕೆ ಆತಂಕ!
ವಿದೇಶಿ ಹಡಗು ಮುಳುಗಡೆ ಬೆನ್ನಲ್ಲೇ ಕರಾವಳಿ ಸಮುದ್ರದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಮಂಗಳೂರು ಸಮುದ್ರದಲ್ಲಿ ಭಾರೀ ಪ್ರಮಾಣದ ತೈಲ ಸೋರಿಕೆ ಆತಂಕ ಎದುರಾಗಿದ್ದು, ವಿದೇಶಿ ಸರಕು ಸಾಗಾಣೆ ಹಡಗಿನಲ್ಲಿ ಬರೋಬ್ಬರಿ 220 ಮೆಟ್ರಿಕ್ ಟನ್ ತೈಲ ಸೋರಿಕೆ ಆತಂಕ ಇದೆ. ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಕಡಲ ತೀರದಲ್ಲಿ ಹಡಗು ಮುಳುಗಡೆಯಾಗಿದ್ದು, ಚೀನಾದಿಂದ ಲೆಬನಾನ್‌ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು ಎನ್ನಲಾಗಿದೆ.
ತಾಂತ್ರಿಕ ಕಾರಣದಿಂದ ಹಡಗಿನಲ್ಲಿ ರಂಧ್ರ ಕಾಣಿಸಿಕೊಂಡು ಮಂಗಳೂರು ಸಮುದ್ರದಲ್ಲಿ ಹಡಗು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 15 ಸಿಬ್ಬಂದಿ ರಕ್ಷಣೆ ಮಾಡಿರುವ ಇಂಡಿಯನ್ ಕೋಸ್ಟ್ ಗಾರ್ಡ್, ಪೊಲೀಸರಿಗೆ ಒಪ್ಪಿಸಿದೆ. ಹಡಗಿನ ತೈಲ ಸೋರಿಕೆಯಾದ್ರೆ ಮತ್ಸ್ಯ ಸಂಕುಲ ನಾಶ ಮತ್ತು ಮೀನುಗಾರರಿಗೆ ಆಘಾತ ಎದುರಾಗಿದ್ದು, ತೈಲ ಸೋರಿಕೆ ಆತಂಕ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್, ದ.ಕ ಜಿಲ್ಲಾಡಳಿತ ಅಲರ್ಟ್ ಆಗಿದೆ. ಕೋಸ್ಟ್ ಗಾರ್ಡ್‌ಶಿಪ್, ಎನ್ ಡಿಆರ್‌ಎಫ್ ಮೂಲಕ ಅಲರ್ಟ್ ಮಾಡಲಾಗಿದ್ದು, ತೈಲ ಸೋರಿಕೆಯಾದ್ರೆ ಮುಂದಿನ ಕ್ರಮಗಳ ಬಗ್ಗೆ ದ.ಕ ಡಿಸಿ ಡಾ.ರಾಜೇಂದ್ರ ಮಾನಿಟರ್ ಮಾಡುತ್ತಿದ್ದಾರೆ.