ಹಾಲು ಉತ್ಪಾದಕರಿಗೆ ಪ್ರತಿ ಲೀ.ಗೆ 2 ರೂ ಹೆಚ್ಚಳ: ಕನ್ನಡ ರಾಜ್ಯೋತ್ಸವ ಅಂಗವಾಗಿ ಶಿಮುಲ್ ಕೊಡುಗೆ
ಹಾಲು ಉತ್ಪಾದಕರಿಗೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟ( ಶಿಮುಲ್) ಕನ್ನಡ ರಾಜ್ಯೋತ್ಸವದ ಬಂಪರ್ ಕೊಡುಗೆ ನೀಡಿದ್ದು, ನ.1ರಿಂದ ಜಾರಿಗೆ ಬರುವಂತೆ ಶಿಮುಲ್ ರೈತರಿಂದ ಕೊಳ್ಳುವ ಪ್ರತಿ ಲೀಟರ್ ಹಾಲಿಗೆ 2 ಹೆಚ್ಚುವರಿಯಾಗಿ ನೀಡಲಿದೆ.
ಶಿವಮೊಗ್ಗ (ಅ.28): ಹಾಲು ಉತ್ಪಾದಕರಿಗೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟ (ಶಿಮುಲ್) ಕನ್ನಡ ರಾಜ್ಯೋತ್ಸವದ ಬಂಪರ್ ಕೊಡುಗೆ ನೀಡಿದ್ದು, ನ.1ರಿಂದ ಜಾರಿಗೆ ಬರುವಂತೆ ಶಿಮುಲ್ ರೈತರಿಂದ ಕೊಳ್ಳುವ ಪ್ರತಿ ಲೀಟರ್ ಹಾಲಿಗೆ 2 ಹೆಚ್ಚುವರಿಯಾಗಿ ನೀಡಲಿದೆ. ಇದರಿಂದ ಈವರೆಗೆ ಹಾಲು ಉತ್ಪಾದಕರಿಗೆ ಪ್ರತಿ ಲೀ. ಹಾಲಿಗೆ ಸಿಗುತ್ತಿದ್ದ 28.20 ಬದಲಿಗೆ 30.29 ಸಿಗಲಿದೆ. ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಿಮುಲ್ ಅಧ್ಯಕ್ಷ ಶ್ರೀಪಾದ ರಾವ್ ಅವರು, ಹಾಲು ಉತ್ಪಾದಕರ ಖರ್ಚು- ವೆಚ್ಚಗಳನ್ನು ಪರಿಗಣಿಸಿ ಮತ್ತು ಶಿಮುಲ್ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಶಿಮುಲ್‌ಗೆ 10 ಕೋಟಿ ಆರ್ಥಿಕ ಹೊರೆಬೀಳಲಿದೆ ಎಂದು ಹೇಳಿದರು.
ಒಕ್ಕೂಟದ ವ್ಯಾಪ್ತಿಯಲ್ಲಿ ಅಸ್ವಾಭಾವಿಕ ಮಳೆಯಿಂದಾಗಿ ಮೇವಿನ ಕೊರತೆ ಎದುರಾಗಿತ್ತು. ಜೊತೆಗೆ ಉತ್ಪಾದನಾ ವೆಚ್ಚ, ಹಿಂಡಿ ದರದಲ್ಲಿ ಹೆಚ್ಚಳ, ಹೈನು ರಾಸುಗಳಲ್ಲಿ ಕಂಡುಬಂದಿರುವ ಚರ್ಮಗಂಟು ರೋಗ ಮುಂತಾದವುಗಳಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಖರೀದಿ ದರ ಪರಿಷ್ಕರಿಸಲಾಗಿದೆ. ರೈತರ ಜೊತೆಗೆ ಹಾಲು ಒಕ್ಕೂಟಗಳಿಗೆ ಕೂಡ ಲಾಭ ವರ್ಗಾಯಿಸಲಾಗಿದೆ. ಹಾಲು ಒಕ್ಕೂಟಗಳಿಗೆ ಪ್ರತಿ ಲೀ.ಗೆ .30.06 ನೀಡುತ್ತಿದ್ದು, ಇದನ್ನು .32.15ಕ್ಕೆ ಹೆಚ್ಚಿಸಿದೆ. ಆದರೆ ಗ್ರಾಹಕರಿಗೆ ಮಾತ್ರ ಹಾಲಿನ ಮಾರಾಟ ದರ ಹೆಚ್ಚಿಸಿಲ್ಲ ಎಂದರು.
ಶಿವಮೊಗ್ಗದಲ್ಲಿ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ, ಮೃತ ಹರ್ಷನ ಕುಟುಂಬಸ್ಥರಿಗೆ ಬೆದರಿಕೆ!
2022ರ ಜನವರಿ 1ರ ಹೊತ್ತಿಗೆ 16 ಕೋಟಿ ನಷ್ಟದಲ್ಲಿದ್ದ ಒಕ್ಕೂಟವು ಆಡಳಿತ ಮಂಡಳಿಯ ಸಕಾಲಿಕ ನಿರ್ಣಯಗಳಿಂದಾಗಿ ಮಾಚ್‌ರ್ ಮಾಸಾಂತ್ಯಕ್ಕೆ 19 ಕೋಟಿಗಳ ಲಾಭ ಹಾಗೂ ಅಕ್ಟೋಬರ್ ಮಾಸಾಂತ್ಯದಲ್ಲಿ 6.50 ಕೋಟಿ ಲಾಭ ಗಳಿಸಿದೆ. ಇದನ್ನು ಉತ್ಪಾದಕರಿಗೆ ವರ್ಗಾಯಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಮುಲ್‌ನ ಅನಗತ್ಯ ಖರ್ಚು ವೆಚ್ಚಗಳನ್ನು ಕಡಿತ ಮಾಡಿದ್ದು, ಲಾಭ ಹೆಚ್ಚಿಸುವತ್ತ ಗಮನ ಹರಿಸಲಾಗಿತ್ತು. ಇದರಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.
ಶಿಮುಲ್ ಹೋಳಿಗೆ: ಈಗಾಗಲೇ ಶಿಮುಲ್ ಮೈಸೂರ್ ಪಾಕ್ ಸೇರಿದಂತೆ ಹಾಲಿನಿಂದ ಹಲವಾರು ಸಿಹಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಇದೀಗ ಹೊಸ ಉತ್ಪನ್ನವಾಗಿ ಮುಂದಿನ ದಿನಗಳಲ್ಲಿ ಹೋಳಿಗೆಯನ್ನು ಪರಿಚಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಶಿಮುಲ್ ಪ್ರತಿದಿನ 6.20 ಲಕ್ಷ ಲೀ. ಹಾಲು ಉತ್ಪಾದಿಸುತ್ತಿದ್ದು, ಸುಮಾರು 3 ಲಕ್ಷ ಲೀ. ಹಾಲನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜೊತೆಗೆ ಗುಲ್ಬರ್ಗ, ಬೀದರ್ ಮತ್ತಿತರ ಹಾಲು ಒಕ್ಕೂಟಗಳಿಗೆ ಹಾಲು ಪೂರೈಸಲಾಗುತ್ತಿದೆ ಎಂದರು.
ಹಾಲಿನ ಗುಣಮಟ್ಟದಲ್ಲಿ ರಾಜ್ಯದಲ್ಲಿಯೇ ಅಗ್ರಸ್ತಾನದಲ್ಲಿರುವ ಶಿವಮೊಗ್ಗ ಹಾಲು ಒಕ್ಕೂಟವು ಲಾಭದಲ್ಲಿ ಮುನ್ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ನಂದಿನಿ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ. ಇನ್ನೂ 4 ಲಕ್ಷ ಲೀ. ಹಾಲು ಉತ್ಪಾದನೆಯಾದರೂ ಅದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ನಂದಿನ ಹಾಲಿನ ಮಾರಾಟ ವ್ಯವಸ್ಥೆಯನ್ನು ಇನ್ನಷ್ಟುವಿಸ್ತಾರಗೊಳಿಸಲು ಉದ್ದೇಶಿಸಿದ್ದು, ನಂದಿನನ ಮಾರಾಟ ಮಳಿಗೆಯನ್ನು ಆರಂಭಿಸಲು ಇಚ್ಚಿಸುವ ಆಸಕ್ತರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ ಎಂದು ತಿಳಿಸಿದರು.
ಒಕ್ಕೂಟದ ವ್ಯಾಪ್ತಿಗೆ ಒಳಪಡುವ ದಾವಣಗೆರೆ ಹಾಲಿನ ಘಟಕಕ್ಕೆ ಉತ್ಕಷ್ಟ ಗುಣಮಟ್ಟ ಹಾಗೂ ಆಹಾರ ಸುರಕ್ಷತೆಯ ಪ್ರತೀಕವಾಗಿ ನೀಡಲಾಗುವ ಎಫ್.ಎಸ್.ಎಸ್.ಸಿ. 22000- ವಿ 5.1, ಮಾನ್ಯತೆ ದೊರೆತಿದೆ. ಕಳೆದ ಸಾಲಿನಲ್ಲಿ ಶಿವಮೊಗ್ಗ ಘಟಕವು ಇದೇ ಮಾನ್ಯತೆಯನ್ನು ಹೊಂದಿತ್ತು ಎಂದವರು ನುಡಿದರು. ಒಕ್ಕೂಟದ ವ್ಯಾಪ್ತಿಯಲ್ಲಿ ಶೇ. 25ರ ಸಹಾಯಧನದಲ್ಲಿ ಒಟ್ಟು 25,000 ಹಾಲು ಉತ್ಪಾದಕರಿಗೆ ರಬ್ಬರ್ ಮ್ಯಾಟ್‌ಗಳನ್ನು ನೀಡಲಾಗಿದೆ. ಅಲ್ಲದೇ 325 ಕ್ಕೂ ಹೆಚ್ಚಿನ ಮಂದಿಗೆ ಮೇವು ಕಟಾವು ಯಂತ್ರಗಳನ್ನು ಕೊಡಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮುರಳೀಧರ್, ವೇದಮೂರ್ತಿ ಉಪಸ್ಥಿತರಿದ್ದರು.
ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ, ಮೊದಲೇ ಕ್ರಮ ಕೈಗೊಂಡ್ರೆ ಮುಂದಾಗುವ ಅನಾಹುತ ತಡೆಯಬಹುದು
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ತಾನು ಕೂಡ ಉತ್ಸುಕರಾಗಿದ್ದೇನೆ. ಆದರೆ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ. ಪಕ್ಷ ಹೇಳಿದರೆ ಸಾಗರ ಅಥವಾ ಸೊರಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ಪಕ್ಷದ ವೇದಿಕೆಯಲ್ಲಿ ಕೂಡ ಈ ವಿಚಾರ ಹಂಚಿಕೊಂಡಿದ್ದೇನೆ. ಅಂತಿಮವಾಗಿ ನಾಯಕರು ನಿರ್ಧರಿಸಬೇಕು
- ಶ್ರೀಪಾದ ರಾವ್, ಅಧ್ಯಕ್ಷ, ಶಿಮುಲ್