ಬೆಳಗಾವಿ(ಆ.23): ಭೀಕರ ಮಳೆ ಹಾಗೂ ನೆರೆ ಹಾವಳಿಯಿಂದ ಹುಕ್ಕೇರಿ ತಾಲೂಕಿನಲ್ಲಿ ಸಂಭವಿಸಿದ ಹಾನಿ ಸಮೀಕ್ಷೆಯಲ್ಲಿ ನಿರ್ಲಕ್ಷ್ಯ ಹಾಗೂ ರಾಜಕಾರಣ ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು  ಹುಕ್ಕೇರಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಸಿದರು.

ತಾಲೂಕಿನ ಕೊಟಬಾಗಿ ಗ್ರಾಮದ ಪ್ರವಾಹಪೀಡಿತ ಪ್ರದೇಶಗಳನ್ನು ಗುರುವಾರ ವೀಕ್ಷಿಸಿ ಬಳಿಕ ಸಂತ್ರಸ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಹುಕ್ಕೇರಿ ತಾಲೂಕಿನಲ್ಲಿ ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಘಟಪ್ರಭಾ ನದಿಗಳು ಉಕ್ಕಿ ಹರಿದು ಹಾಗೂ ಸತತ ಸುರಿದ ಧಾರಾಕಾರ ಮಳೆಗೆ ಸಾಕಷ್ಟುಹಾನಿಯಾಗಿದೆ. ಸಂತ್ರಸ್ತರಿಗೆ ಆಗಿರುವ ಬೆಳೆ ಹಾನಿ, ನೆಲಸಮವಾದ ಮನೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು ಅಧಿಕಾರಿಗಳು ಮಾನವೀಯತೆ ಮೈಗೂಡಿಸಿಕೊಂಡು ಈ ಕರ್ತವ್ಯ ನಿಭಾಯಿಸಬೇಕು. ಒಂದು ವೇಳೆ ನೆರೆ ಸಂತ್ರಸ್ತರಿಗೆ ಅನ್ಯಾಯ ಆಗಿರುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗುಡುಗಿದರು.

ಶಾಶ್ವತ ಪರಿಹಾರದ ಭರವಸೆ:

ನಿರಾಶ್ರಿತರ ನೆರವಿಗೆ ಸರ್ಕಾರ ಸದಾಕಾಲ ಬದ್ಧವಿದ್ದು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಈಗಾಗಲೇ ಅಗತ್ಯ ವಸ್ತುಗಳ ಖರೀದಿಗೆ 10 ಸಾವಿರ ಪರಿಹಾರ ಧನ, ಆಹಾರ ಧಾನ್ಯಗಳ ಕಿಟ್‌ ವಿತರಣೆ, ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ 50 ಸಾವಿರ, ಬಾಡಿಗೆ ಮನೆ ಮಾಡಿದರೆ ಪ್ರತಿ ತಿಂಗಳು 5 ಸಾವಿರಗಳಂತೆ 10 ತಿಂಗಳ ಕಾಲ, ಸಂಪೂರ್ಣ ಮನೆ ನೆಲಸಮವಾದರೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ಹೀಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೊದಲ ಸಂಪುಟ ಸಭೆಯಲ್ಲಿಯೇ ನೆರೆಪೀಡಿತ ಪ್ರದೇಶಗಳನ್ನು ವೀಕ್ಷಿಸಿ ಸಮಗ್ರ ವರದಿ ಒಪ್ಪಿಸುವಂತೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಚಿಕ್ಕೋಡಿ ಉಪವಿಭಾಗದ ಎಲ್ಲ ತಾಲೂಕಿನ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಿ ಮಾಹಿತಿ ಕ್ರೋಢೀಕ​ರಿ​ಸ​ಲಾ​ಗು​ತ್ತಿದೆ. ಒಂದೆರೆಡು ದಿನಗಳಲ್ಲಿ ಈ ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು.

ಬೆಳಗಾವಿ: ಪ್ರವಾಹಕ್ಕೆ ತತ್ತರಿಸಿದ 4 ಗ್ರಾಮ ಶಾಶ್ವತ ಸ್ಥಳಾಂತ​ರ

ಮಾಜಿ ಸಚಿವ ಶಶಿಕಾಂತ ನಾಯಿಕ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನ್ನವರ, ಜಿಪಂ ಉಪಕಾರ್ಯದರ್ಶಿ ಎಸ್‌.ಬಿ. ಮುಳ್ಳಳ್ಳಿ, ತಹಸೀಲ್ದಾರ್‌ ರೇಷ್ಮಾ ತಾಳಿಕೋಟಿ, ವಿಶೇಷ ಅಧಿಕಾರಿ ಎನ್‌.ಬಿ. ಪಾಟೀಲ, ತಾಪಂ ಇಒ ಎಂ.ಎಸ್‌. ಬಿರಾದಾರಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಮುಖಂಡ ಡಾ. ರಾಜೇಶ ನೇರ್ಲಿ, ಕಂದಾಯ ನಿರೀಕ್ಷಕ ಪ್ರವೀಣ ಮಾಳಾಜ, ಪಿಡಿಒ ನಿರಂಜನ ಕುರಬೇಟ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಮತ್ತಿತರರು ಇದ್ದರು.