ಹೊಸಕೋಟೆ (ಅ.17):  ಆಯುಷ್ಮಾನ್‌ ಭಾರತ್‌ ಯೋಜನೆ ಹಿಂದುಳಿದ ವರ್ಗದ ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಉಚಿತವಾಗಿ ಲಭ್ಯವಾಗಲೆಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ತಾಲೂಕು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಪಂ ವ್ಯಾಪ್ತಿಯ ಚಿಕ್ಕಕೊರಟಿ ಗ್ರಾಮದಲ್ಲಿ ಹಿಂದುಳಿದ ವರ್ಗದ ಬಡ 150 ಕುಟುಂಬಕ್ಕೆ ಉಚಿತವಾಗಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದರು.

ಸರ್ಕಾರಿ ಅಥವಾ ಸರ್ಕಾರದಿಂದ ನೋಂದಾಯಿಸಲ್ಪಟ್ಟಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವಾರ್ಷಿಕ ಪ್ರತಿ ಕುಟುಂಬ 5 ಲಕ್ಷ ರು.ಗಳ ವಿಮೆ ಪಡೆಯಬಹುದಾಗಿದೆ. ಗ್ರಾಮೀಣಾ ಪ್ರದೇಶದ ಜನರು ಅಯುಷ್ಮಾನ್‌ ಕಾರ್ಡ್‌ ಪಡೆಯಲು ತಾಲೂಕು ಕೇಂದ್ರಗಳಿಗೆ ತಿಂಗಳಾನುಗಟ್ಟಲೆ ಅಲೆದಾಡಬೇಕಾಗಿತ್ತು. ಪ್ರತಿ ಕುಟುಂಬಕ್ಕೂ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ಕಾರ್ಡ್‌ಗಳನ್ನು ಸಿದ್ಧಪಡಿಸಿ ವಿತರಣೆ ಮಾಡಲಾಗುತ್ತಿದೆ. ಸರ್ಕಾರದ ಯೋಜನೆಯನ್ನು ಪ್ರತಿಯೊಬ್ಬ ಸದಸ್ಯರು ಸದ್ಭಳಕೆ ಮಾಡಿಕೊಂಡು ಸದೃಢ ಆರೋಗ್ಯ ಹೊಂದಬೇಕು ಎಂದರು.

ಭಾರತೀಯ ರೈಲ್ವೇ ಬೋರ್ಡ್‌ ಸದಸ್ಯ ಇಟ್ಟಸಂದ್ರ ಗೋಪಾಲ್‌ ಮಾತನಾಡಿ, ಈ ಭಾಗದಲ್ಲಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಾಗ ಶಾಸಕರು ಸ್ವಂತ ಹಣದಲ್ಲಿ ಪ್ರತಿಯೊಂದು ಕುಟುಂಬಕ್ಕೂ ರಾರ‍ಯಂಡಮ್‌ ಪರೀಕ್ಷೆ ಮಾಡಿಸಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಗ್ರಾಮದ ಪ್ರತಿಯೊಂದು ಕುಟುಂಬಕ್ಕೂ ನಲ್ಲಿಗಳನ್ನು ಅಳವಡಿಸಿ ನೀರಿನ ಸಮಸ್ಯೆ ಪರಿಹರಿಸಿದ್ದು, ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿದ್ದು, ತ್ವರಿತವಾಗಿ ನೂತನ ಕೊಠಡಿಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.

ಕಗ್ಗಂಟಾದ ಶರತ್‌ ಬಚ್ಚೇಗೌಡ ರಾಜಕೀಯ : ಬಿತ್ತು ದೊಡ್ಡ ಬ್ರೇಕ್ .

ತಾಪಂ ಮಾಜಿ ಅಧ್ಯಕ್ಷ ಬಿ.ವಿ. ರಾಜಶೇಖರಗೌಡ, ಮಂಜುನಾಥಗೌಡ ನೆಲವಾಗಿಲು ಎಸ್‌.ಎಫ್‌.ಸಿ.ಎಸ್‌. ಅಧ್ಯಕ್ಷ ಶ್ರೀನಿವಾಸ್‌, ತಾಪಂ ಸದಸ್ಯ ಮನ್ಸೂರ್‌ ಆಲಿಖಾನ್‌, ಪಿಎಲ್‌ಡಿ ಬ್ಯಾಂಕ್‌ ಸದಸ್ಯ ನಾರಾಯಣಸ್ವಾಮಿ, ಯುವ ಮುಖಂಡ ಗುರು, ಮಾಜಿ ಮಂಡಲ ಪಂಚಾಯಿತಿ ಅಧ್ಯಕ್ಷ ಮಂಜುನಾಥ್‌, ಮಾಜಿ ಗ್ರಾಪಂ. ಸದಸ್ಯ ಪಿಳ್ಳಪ್ಪ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರಸ್ತಾಪ

ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕರಿಂದ ಪಕ್ಷ ಸೇರುವಂತೆ ಅಹ್ವಾನ ಬಂದಿರುವುದು ನಿಜ. ಕಾಂಗ್ರೆಸ್‌ ಸೇರುವ ಬಗ್ಗೆ ಇನ್ನು ತೀರ್ಮಾನ ಅಂತಿಮವಾಗಿಲ್ಲ. ಸೇರ್ಪಡೆಯಾಗುವ ಮುನ್ನ ಸ್ವಾಭಿಮಾನಿ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಸಾಧಕ-ಭಾಧಕಗಳನ್ನು ಚರ್ಚಿಸಿ, ಮೂಲ ಕಾಂಗ್ರೆಸ್ಸಿಗರ ಅಭಿಪ್ರಾಯ ಸಂಗ್ರಹಿಸಿ ಸಹಮತ ಪಡೆದು ತೀರ್ಮಾನಿಸಲಾಗುವುದು.

ಶರತ್‌ ಬಚ್ಚೇಗೌಡ, ಶಾಸಕ. ಹೊಸಕೋಟೆ