Asianet Suvarna News Asianet Suvarna News

ಯಾದಗಿರಿ ಮೆಡಿಕಲ್ ಕಾಲೇಜು ಕನಸಿಗೆ ಮೂಡಿದ ರೆಕ್ಕೆ: ಸಂತಸದಲ್ಲಿ ಜನತೆ

ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ| ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ವಿಶೇಷ ಅಧಿಕಾರಿಯಾಗಿ ಡಾ.ಶಂಕರಗೌಡ ಐರೆಡ್ಡಿ ನಿಯೋಜನೆ| ಜಿಲ್ಲೆಯಲ್ಲಿ 300 ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧ| ಸದ್ಯಕ್ಕೆ ಇದರಲ್ಲೇ ಮೆಡಿಕಲ್ ಕಾಲೇಜು ಆರಂಭಿಸಲು ಸಿದ್ಧತೆ|

Shankargouda Ireddy is Deployment of Special Officer for Yadagir Medical Sciences Institute
Author
Bengaluru, First Published Jan 4, 2020, 1:26 PM IST
  • Facebook
  • Twitter
  • Whatsapp

ಯಾದಗಿರಿ(ಜ.04): ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆಯಾಗಿರುವ ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿರುವುದು ತಿಳಿದ ವಿಚಾರ. 

ಈಗ ಉದ್ದೇಶಿತ ಯಾದಗಿರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿಯಾಗಿ ರಾಯಚೂರು ವೈದ್ಯ ಕೀಯ ಕಾಲೇಜು ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ.ಶಂಕರಗೌಡ ಐರೆಡ್ಡಿ ಅವರನ್ನು ನಿಯೋಜಿಸಿರುವುದು ವೈದ್ಯಕೀಯ ಕಾಲೇಜು ಕನಸಿಗೆ ರೆಕ್ಕೆ ಮೂಡಿದಂತಾಗಿದೆ.

ಕರ್ನಾಟಕಕ್ಕೆ 3 ಹೊಸ ವೈದ್ಯಕೀಯ ಕಾಲೇಜು!

ಯಾದಗಿರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿಯಾಗಿ ಡಾ.ಶಂಕರಗೌಡ ಐರೆಡ್ಡಿ ಅವರು ಗುರುವಾರ ಅಧಿಕಾರ ವಹಿಸಿಕೊಂಡು, ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾರಾವ್ ಅವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ 300 ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಸಿದ್ಧವಾಗಿದ್ದು, ಸದ್ಯಕ್ಕೆ ಇದರಲ್ಲೇ ಮೆಡಿಕಲ್ ಕಾಲೇಜನ್ನು ಶೀಘ್ರದಲ್ಲಿ ಆರಂಭಿಸಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಆಸ್ಪತ್ರೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿ (ಮುಖ್ಯರಸ್ತೆ)ಯಿಂದ ಸಂಪರ್ಕ ಕಲ್ಪಿಸುವ ರಸ್ತೆಯು ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. 

ಜಿಲ್ಲಾಸ್ಪತ್ರೆಗೆ ಮಾನವ ಸಂಪನ್ಮೂಲ ವಾರ್ಷಿಕ ವೆಚ್ಚ 50 ಕೋಟಿ ರೂಪಾಯಿ ಆಗಲಿದ್ದು, ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಜೊತೆಗೆ ಪೀಠೋಪಕರಣ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಲು ಟೆಂಡರ್ ಕರೆಯಲಾಗಿದೆ. ನೂತನ ಜಿಲ್ಲಾಸ್ಪತ್ರೆ ಕಾರ್ಯರೂಪಕ್ಕೆ ಬಂದಲ್ಲಿ, ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಕೂಡ ಆರಂಭಿಸಲು ಅನುಕೂಲವಾಗಲಿದೆಎಂದು ಡಿಸೆಂಬರ್ ನಲ್ಲಿ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ. ವಿಜಯ್ ಭಾಸ್ಕರ್ ತಿಳಿಸಿದ್ದರು. ಅಲ್ಲದೇ, ರಾಜ್ಯ ಮಟ್ಟದಲ್ಲಿ ಚರ್ಚಿಸಿ ವೈದ್ಯಕೀಯ ಕಾಲೇಜು ಶೀಘ್ರ ಆರಂಭಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರು. 

ಯಾದಗಿರಿ ಮೆಡಿಕಲ್ ಕಾಲೇಜು: ಸುವರ್ಣನ್ಯೂಸ್-ಕನ್ನಡಪ್ರಭ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಈ ಮೂಲಕ ಯಾದಗಿರಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭವಾಗುವ ಕನಸು ನನಸಾಗುವ ಮೊದಲ ಹಂತದ ಕಾರ್ಯಗಳು ಪ್ರಗತಿಯಲ್ಲಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳು ಜಿಲ್ಲೆಯಲ್ಲಿಯೇ ದೊರಕಲಿವೆ. ವಿಶೇಷ ಅಧಿಕಾರಿಯಾಗಿ ನೇಮಕವಾದ ಡಾ. ಶಂಕರಗೌಡ ಐರೆಡ್ಡಿ ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. 

ಡಾ.ಶಂಕರಗೌಡ ಐರೆಡ್ಡಿ ಅವರು ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದವರು. ಜಿಲ್ಲೆಯಲ್ಲಿ ನೂತನ ಜಿಲ್ಲಾಸ್ಪತ್ರೆ ಜೊತೆಗೆ ಮೆಡಿಕಲ್ ಕಾಲೇಜು ಪ್ರಾರಂಭಿಸುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವ್ಹಾಣ್ ಅವರ ಜೊತೆಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷಾಧಿಕಾರಿ ಡಾ. ಶಂಕರಗೌಡ ಐರೆಡ್ಡಿ ಅವರು ಮಾತುಕತೆ ನಡೆಸಲಿದ್ದು, ಈ ಬಗ್ಗೆ ಸಂಪೂರ್ಣ ವರದಿಯನ್ನು ಕೂಡ ಸಲ್ಲಿಸಲಿದ್ದಾರೆ. 

ವೈದ್ಯಕೀಯ ಕಾಲೇಜಿಗೆ ಸುಮಾರು 750 ಹಾಸಿ ಗೆಗಳ ಆಸ್ಪತ್ರೆ ಅಗತ್ಯವಿದೆ. ಸದ್ಯ 300 ಹಾಸಿಗೆಗಳ ಸುಸಜ್ಜಿತ ನೂತನ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿಯೇ ಮೆಡಿಕಲ್ ಕಾಲೇಜನ್ನು 2020-21 ನೇ ಸಾಲಿನಲ್ಲಿ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಪರಿಶೀಲನೆಗಾಗಿ ಭಾರತೀಯ ವೈದ್ಯಕೀಯ ಸಂಸ್ಥೆಗೆ ಪತ್ರ ಬರೆಯುತ್ತೇನೆ. ನಂತರ 2 ರಿಂದ 3 ತಿಂಗಳಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯ ತಂಡ ಆಗಮಿಸಿ ಜಿಲ್ಲಾಸ್ಪತ್ರೆಯನ್ನು ಪರಿವೀಕ್ಷಣೆ ಮಾಡಲಿದೆ. ಮೆಡಿಕಲ್ ಕಾಲೇಜು ಆರಂಭವಾದರೆ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಭಾಗ್ಯದ ಜೊತೆಗೆ ಆಸಕ್ತ ವಿದ್ಯಾರ್ಥಿಗಳಿಗೆ ಉನ್ನತ ವೈದ್ಯಕೀಯ ಶಿಕ್ಷಣ ದೊರಕಿದಂತಾಗುತ್ತದೆ ಎಂದು ಡಾ.ಶಂಕರಗೌಡ ಐರೆಡ್ಡಿ ತಿಳಿಸಿದ್ದಾರೆ.
 

Follow Us:
Download App:
  • android
  • ios