ಬೆಂಗಳೂರು[ಅ.26]: ರಾಜ್ಯದಲ್ಲಿ ಮೂರು ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅನುಮತಿ ಸಿಕ್ಕಿದ್ದು, ಇದರಿಂದ ಬರುವ ವರ್ಷದಿಂದ ರಾಜ್ಯದ ಪಾಲಿಗೆ 450 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗುವುದು ಖಚಿತವಾಗಿದೆ.

ಚಿಕ್ಕಮಗಳೂರು, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲು ಎಂಸಿಐ ಅನುಮತಿ ಸಿಕ್ಕಿದ್ದು, ಪ್ರತಿ ಕಾಲೇಜಿನಿಂದ 150 ಸೀಟುಗಳಂತೆ ಒಟ್ಟು 450 ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ.

ಮೂರು ಹೊಸ ಕಾಲೇಜುಗಳಿಗೆ ಎಂಸಿಐ ಅನುಮತಿ ಸಿಕ್ಕಾಗಿದೆ. ಇದರ ಜತೆಗೆ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಹೊಸ ಕಾಲೇಜು ಆರಂಭಕ್ಕೆ ಕರ್ನಾಟಕ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕಾರಣಾಂತರಗಳಿಂದ ಮರು ಮಂಡನೆ ಮಾಡುವಂತೆ ಸೂಚಿಸಿದೆ ಎಂಬ ಮಾಹಿತಿ ಇದೆ. ಚಿಕ್ಕಬಳ್ಳಾಪುರದಲ್ಲೂ ಮತ್ತೊಂದು ಕಾಲೇಜು ಸ್ಥಾಪನೆಗೆ ಅವಕಾಶ ಸಿಕ್ಕರೆ ಒಟ್ಟು 600 ವೈದ್ಯಕೀಯ ಸೀಟುಗಳು ರಾಜ್ಯಕ್ಕೆ ಹೆಚ್ಚುವರಿಯಾಗಿ ದೊರೆಯಲಿವೆ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಹೊಸ ಕಾಲೇಜುಗಳ ನಿರ್ಮಾಣಕ್ಕೆ 325 ಕೋಟಿ ರು. ವೆಚ್ಚವಾಗಲಿದ್ದು, ಇದರಲ್ಲಿ 60:40ರ ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಬಿಡುಗಡೆ ಮಾಡಲಿವೆ.

ಚಿಕ್ಕಮಗಳೂರು, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಎಂಸಿಐ ಅನುಮತಿ ನೀಡಿದೆ. ಇದರಿಂದ ಮುಂದಿನ ವರ್ಷದಿಂದ ಪ್ರತಿ ಕಾಲೇಜಿನಿಂದ ತಲಾ 150 ಸೀಟಿನಂತೆ ಒಟ್ಟು 450 ಸೀಟುಗಳು ಹೆಚ್ಚುವರಿಯಾಗಿ ರಾಜ್ಯಕ್ಕೆ ಸಿಗಲಿವೆ.

- ಡಾ.ಸಚ್ಚಿದಾನಂದ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ