ಬೆಂಗಳೂರು(ಮಾ.10): ಸಿಮ್‌ ಕಾರ್ಡ್‌ ಪಡೆಯಲು ಸಣ್ಣ-ಪುಟ್ಟಅಂಗಡಿಗಳಿಗೆ ಹೋಗಿ ಬೆರಳಚ್ಚು, ಆಧಾರ್‌ ಕಾರ್ಡ್‌ ದಾಖಲೆ ಕೊಟ್ಟರೆ ಜೋಕೆ..! ನಿಮ್ಮ ಆಧಾರ್‌ ಕಾರ್ಡ್‌ ದಾಖಲೆ ಅಥವಾ ಬೆರಳಚ್ಚು ಮುದ್ರೆಯ ದಾಖಲೆಯಿಂದ ವಿದೇಶಿ ಪ್ರಜೆಗಳು ಮೊಬೈಲ್‌ ಸಂಖ್ಯೆ ಬಳಸುತ್ತಾರೆಂಬ ಆಘಾತಕಾರಿ ವಿಷಯ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಬೆಂಗಳೂರಿನ ಸ್ಥಳೀಯ ನಿವಾಸಿ ಸಯ್ಯದ್‌ ಸಿಬಗತ್‌ ಉಲ್ಲಾ ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರಲ್ಲಿ ರಸ್ತೆಬದಿ ತೆರೆದ ಆಹಾರ ಮಾರಾಟಕ್ಕೆ ಬ್ರೇಕ್‌

ಸಿಬಗತ್‌ ಉಲ್ಲಾ ನಗರದ ಎಚ್‌ಆರ್‌ಬಿಆರ್‌ ಲೇಔಟ್‌ನ 2ನೇ ಬ್ಲಾಕ್‌ನ ಸಿಎಂಆರ್‌ ರಸ್ತೆಯಲ್ಲಿ ‘ಬೆಸ್ಟ್‌ ಬೈ’ ಹೆಸರಿನಲ್ಲಿ ಮೊಬೈಲ್‌ ಅಂಗಡಿ ಇಟ್ಟುಕೊಂಡಿದ್ದ. ಆರೋಪಿ ಅಂಗಡಿಯಲ್ಲಿ ಮೊಬೈಲ್‌ ರಿಪೇರಿ ಮತ್ತು ಸಿಮ್‌ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದ. ಸಿಮ್‌ ಕಾರ್ಡ್‌ ಕೇಳಿ ಗ್ರಾಹಕರು ಅಂಗಡಿಗೆ ಬಂದರೆ ಗ್ರಾಹಕರಿಂದ ಆಧಾರ್‌ ಕಾರ್ಡ್‌ ದಾಖಲೆ ಪಡೆದುಕೊಳ್ಳುತ್ತಿದ್ದ. ಸಿಮ್‌ಕಾರ್ಡ್‌ ನೀಡಲು ಬೆರಳಚ್ಚು (ತಂಬ್‌ ಇಂಪ್ರೆಷನ್‌) ನೀಡಬೇಕಾಗುತ್ತದೆ. ಆರೋಪಿ ಮೊದಲು ಗ್ರಾಹಕರಿಂದ ಬೆರಳಚ್ಚು ದಾಖಲೆ ನಮೂದಿಸಿಕೊಳ್ಳುತ್ತಿದ್ದ. ಬಳಿಕ ಸರಿಯಾಗಿ ಬಂದಿಲ್ಲ ಎಂದು ಒಂದೆರೆಡು ಪುನಃ ಗ್ರಾಹಕರಿಂದ ಬೆರಳಚ್ಚು ಪಡೆದುಕೊಳ್ಳುತ್ತಿದ್ದ. ಕೂಡಲೇ ಇವರ ಹೆಸರಿನಲ್ಲಿ ಇನ್ನೆರಡು ಸಿಮ್‌ಗಳಿಗೆ ಆಧಾರ್‌ ದಾಖಲೆ ಲಿಂಕ್‌ ಮಾಡಿಕೊಳ್ಳುತ್ತಿದ್ದ. ಈ ಸಿಮ್‌ ಕಾರ್ಡ್‌ಗಳನ್ನು ವಿದೇಶಿ ಪ್ರಜೆಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

1 ಸಿಮ್‌ಗೆ 1 ಸಾವಿರ:

ಆರೋಪಿ ಸಯ್ಯದ್‌ ಒಂದೂವರೆ ತಿಂಗಳಿಂದ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈಗಾಗಲೇ 10 ಸಿಮ್‌ಗಳನ್ನು ವಿದೇಶಿಗಳಿಗೆ ಮಾರಾಟ ಮಾಡಿರುವ ಆರೋಪಿ ಈ ಪೈಕಿ 6 ಸಿಮ್‌ಗಳನ್ನು ಅರಬ್‌ ಪ್ರಜೆಗಳಿಗೆ ಮಾರಾಟ ಮಾಡಿದ್ದಾನೆ. ಒಂದೊಂದು ಸಿಮ್‌ಗೆ .1 ಸಾವಿರ ಪಡೆದು ಸಿಮ್‌ಕಾರ್ಡ್‌ ನೀಡಿದ್ದಾನೆ. ಇವರಿಂದ ಯಾವುದೇ ದಾಖಲೆಗಳನ್ನು ಪಡೆಯುತ್ತಿರಲಿಲ್ಲ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿಸಿ ಸಿಸಿಬಿ ಇನ್‌ಸ್ಪೆಕ್ಟರ್‌ ಲಕ್ಷ್ಮೇಕಾಂತಯ್ಯ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದರೆ ಅಥವಾ ಅಪರಾಧ ಕೃತ್ಯ ಎಸಗಲು ಈ ರೀತಿ ಸಿಮ್‌ ಕಾರ್ಡ್‌ ಪಡೆಯುತ್ತಾರೆ. ಕೆಲವರು ಆರೋಗ್ಯ ತಪಾಸಣೆ ದೃಷ್ಟಿಯಿಂದ ಬಂದು ತಾತ್ಕಲಿಕವಾಗಿ ಬಳಸಲು ಸಿಮ್‌ಕಾರ್ಡ್‌ ಬಳಸುತ್ತಾರೆ. ಹಲವು ವಿದೇಶಿಗರು ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದು, ತಮ್ಮ ದಾಖಲೆ ನೀಡಲು ಸಾಧ್ಯವಾಗದ ಕಾರಣ ಈ ರೀತಿ ಸಿಮ್‌ಕಾರ್ಡ್‌ ಪಡೆಯುತ್ತಿದ್ದಾರೆ.

ಕೊರೋನಾ ಭೀತಿ: ಪಾತಾಳಕ್ಕೆ ಕುಸಿದ ತರಕಾರಿ ಬೆಲೆ

ಸಾರ್ವಜನಿಕರು ಆಧಾರ್‌ ಸೇರಿದಂತೆ ಇತರೆ ದಾಖಲೆಗಳನ್ನು ಯಾರೊಬ್ಬರಿಗೂ ನೀಡಬಾರದು. ಸಿಮ್‌ ಬೇಕೆಂದರೆ ಆಯಾ ಕಂಪನಿಯ ಕಚೇರಿಗಳನ್ನು ಸಂಪರ್ಕಿಸುವುದು ಒಳಿತು. ಇದರಿಂದ ಇತರೆ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.