ಬೆಂಗಳೂರು(ಮಾ.10): ನಗರದಲ್ಲಿ ತರಕಾರಿ ಬೆಲೆ ಗಣನೀಯವಾಗಿ ಇಳಿಕೆಯಾಗಿದ್ದು, ಗ್ರಾಹಕರಲ್ಲಿ ಮಂದಹಾಸ ಮೂಡಿಸಿದ್ದರೆ, ರೈತರಲ್ಲಿ ಆತಂಕ ಸೃಷ್ಟಿಸಿದೆ. ಮಾರುಕಟ್ಟೆಗೆ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿರುವುದು ಬೆಲೆ ಇಳಿಕೆಗೆ ಒಂದು ಕಾರಣವಾಗಿದ್ದರೆ, ಕೊರೋನಾ ವೈರಸ್‌ ಸೋಂಕಿನ ಭೀತಿಯಿಂದಾಗಿ ಮಾರುಕಟ್ಟೆಗಳತ್ತ ಆಗಮಿಸುವ ಜನರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ನಿತ್ಯ ಗಿಜಿಗುಡುತ್ತಿದ್ದ ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆಗಳು ಬಣಗುಡುತ್ತಿದ್ದು, ಇದಕ್ಕೆ ಕೊರೋನಾ ಆತಂಕವೇ ಕಾರಣ ಎನ್ನಲಾಗಿದ್ದು, ಈ ಎರಡು ಕಾರಣಗಳಿಂದ ತರಕಾರಿ ಬೆಲೆ ಭಾರೀ ಕುಸಿತಗೊಂಡಿದೆ.

ಮೂಟೆ ಹೂಕೋಸು .400!:

ಟೊಮೆಟೊ ಕೆ.ಜಿ.ಗೆ .12ರಿಂದ 10, ಈರುಳ್ಳಿ ಕೆ.ಜಿ. .20, ಬೀನ್ಸ್‌ .20, ಸೌತೆಕಾಯಿ ಕೆ.ಜಿ. .10, ಆಲೂಗಡ್ಡೆ .20, ಕ್ಯಾರೆಟ್‌ ಊಟಿ .60, ಕ್ಯಾರೆಟ್‌ .40, ಒಂದು ಮೂಟೆ ಹೂಕೋಸು 400 ರು. ಸೇರಿದಂತೆ ಬಹುತೇಕ ತರಕಾರಿಗಳು 20-40 ರು. ಒಳಗೆ ಮಾರಾಟವಾಗುತ್ತಿವೆ. ಇನ್ನು ಕೊತ್ತಂಬರಿ ಸೊಪ್ಪು , ಮೆಂತ್ಯೆ, ಪುದೀನಾ ಪ್ರತಿ ಕಟ್ಟಿಗೆ ತಲಾ .10ರಂತೆ ಮಾರಾಟ ಮಾಡಲಾಗುತ್ತಿದೆ. ಆದರೆ, ಹೂವು-ಹಣ್ಣಿನ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಶೇ.60ರಷ್ಟುವ್ಯಾಪಾರ ಕಡಿಮೆ:

ತಮಿಳುನಾಡು, ಕೇರಳ, ಆಂಧ್ರಕ್ಕೆ ಕಲಾಸಿಪಾಳ್ಯದಿಂದ ತರಕಾರಿ ಪೂರೈಕೆಯಾಗುತ್ತಿತ್ತು. ಆದರೆ, ಕಲಾಸಿಪಾಳ್ಯದಿಂದ ತೆಗೆದುಕೊಂಡು ಹೋಗಲು ಸಂಚಾರ ದಟ್ಟಣೆ ಜತೆಗೆ ಪೊಲೀಸರ ಕಾಟ ಸಹಿಸಿಕೊಳ್ಳಬೇಕು. ಹೀಗಾಗಿ ಕೋಲಾರ ಹಾಗೂ ಹೊಸೂರು ಮಾರುಕಟ್ಟೆಯತ್ತ ವ್ಯಾಪಾರಿಗಳು ಮುಖ ಮಾಡಿದ್ದಾರೆ. ಅಲ್ಲಿ ಸಂಚಾರ ದಟ್ಟಣೆಯೂ ಇರುವುದಿಲ್ಲ. ಇನ್ನು ಕಡಿಮೆ ಬೆಲೆಗೆ ತರಕಾರಿ ಸಿಗುತ್ತದೆ. ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಈ ಹಿಂದೆ 50ರಿಂದ 60 ಗಾಡಿ ಲೋಡ್‌ ತರಕಾರಿ ಹೊರ ರಾಜ್ಯಗಳಿಗೆ ಹೋಗುತ್ತಿತ್ತು. ಈಗ 10-20 ಗಾಡಿ ಲೋಡ್‌ ಹೋಗುವುದು ಕಷ್ಟವಾಗಿದೆ. ತಮಿಳುನಾಡಿಗೆ ಪ್ರತಿ ದಿನ 40 ಸಾವಿರ ಕೆ.ಜಿ. ತರಕಾರಿ ಪೂರೈಕೆಯಾಗುತ್ತದೆ. ಈಗ ಶೇ.60ರಷ್ಟುವ್ಯಾಪಾರ ಕಡಿಮೆಯಾಗಿದೆ ಎಂದು ಕಲಾಸಿಪಾಳ್ಯ ತರಕಾರಿ ಸರಬರಾಜುದಾರ ಗೋವಿಂದಸ್ವಾಮಿ ತಿಳಿಸಿದರು.

ಹಣ್ಣುಗಳಿಗೆ ಬೇಡಿಕೆ:

ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ರಾಶಿ ರಾಶಿ ಹಣ್ಣುಗಳು ಸರಬರಾಜಾಗಿದೆ. ಈ ಹಿಂದಿನ ದರವೇ ಈಗಲೂ ಯಥಾಸ್ಥಿತಿ ಕಾಯ್ದುಕೊಂಡಿದೆ. ಬಿಸಿಲಿನ ಝಳ ಹೆಚ್ಚಾದಲ್ಲಿ ದರ ಇನ್ನಷ್ಟುಹೆಚ್ಚಳವಾಗಬಹುದು ಎನ್ನಲಾಗುತ್ತಿದೆ.

ಕೋಳಿಗೆ 60 ರಿಂದ 65 ರೂಪಾಯಿ ಇಳಿತ..!

ರಾಜ್ಯದಲ್ಲೂ ಟೊಮೊಟೊ ಇಳುವರಿ ಚೆನ್ನಾಗಿದೆ. ಮಹಾರಾಷ್ಟ್ರದಿಂದಲೂ ಬೆಂಗಳೂರಿಗೆ ಸರಬರಾಜಾಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತರಕಾರಿ ಬೆಳೆ ಚೆನ್ನಾಗಿದೆ. ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳೂ ತರಕಾರಿ ಬೆಳೆಯುತ್ತಿವೆ. ಹೀಗಾಗಿ ಬೆಂಗಳೂರಿನಿಂದ ಹೊರ ರಾಜ್ಯಗಳು ಅಗತ್ಯವಿರುವ ತರಕಾರಿ ಮಾತ್ರ ತರಿಸಿಕೊಳ್ಳುತ್ತಿವೆ. ಎಲ್ಲೆಡೆ ತರಕಾರಿ ಉತ್ಪಾದನೆ ಹೆಚ್ಚಾದ ಹಿನ್ನೆಲೆ ಸಹಜವಾಗಿಯೇ ಬೆಲೆ ಕಡಿಮೆಯಾಗಿದೆ. ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟುತರಕಾರಿ ಪೂರೈಕೆಯಾಗುತ್ತಿದ್ದರೂ ಕೇಳುವವರೇ ಇಲ್ಲ. ವ್ಯಾಪಾರ ಸಂಪೂರ್ಣವಾಗಿ ಕುಗ್ಗಿದೆ ಎಂದು ಸಗಟು ತರಕಾರಿ ಮಾರಾಟಗಾರ ದೇವಿಗನ್‌ ತಿಳಿಸಿದ್ದಾರೆ.

ನೆಲ ಕಚ್ಚಿದ ನುಗ್ಗೇಕಾಯಿ

ಕಳೆದ ವರ್ಷ ಉತ್ತಮ ಮಳೆಯಾಗಿದೆ. ಅಂತರ್ಜಲ ಸಾಕಷ್ಟುಪ್ರಮಾಣದಲ್ಲಿ ಇರುವುದರಿಂದ ಬೆಳೆಗಳಿಗೆ ನೀರಿನ ಕೊರತೆಯಾಗಿಲ್ಲ. ಬೀಸ್ಸ್‌, ನುಗ್ಗೆಕಾಯಿ ದರವೂ ಕಡಿಮೆಯಾಗಿದೆ. ಸಗಟು ದರದಲ್ಲಿ ಬೀನ್ಸ್‌ ಕೆ.ಜಿ.ಗೆ 15-20 ರು. ಇದೆ. ನುಗ್ಗೆಕಾಯಿ ದರ ಸಂಪೂರ್ಣ ನೆಲಕಚ್ಚಿದೆ. ಎರಡು ತಿಂಗಳ ಹಿಂದೆ ಕೆ.ಜಿ. ನುಗ್ಗೆ 450 ರು. ಇದ್ದದು ಇದೀಗ 43ಕ್ಕೆ ಇಳಿದೆ. ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದು, ಬೆಲೆಗಳು ಇಳಿಕೆಯಾಗಿವೆ ಎಂದು ಹಣ್ಣು-ತರಕಾರಿ ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ಆರ್‌.ವಿ. ಗೋಪಿ ಹೇಳಿದ್ದಾರೆ.