ಬೆಂಗಳೂರಲ್ಲಿ ರಸ್ತೆಬದಿ ತೆರೆದ ಆಹಾರ ಮಾರಾಟಕ್ಕೆ ಬ್ರೇಕ್
ಕೊರೋನಾ ಜತೆಗೆ ನಗರದಲ್ಲಿ ಕಾಲರಾ ಭೀತಿಯೂ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿ ತೆರೆದಿಟ್ಟಆಹಾರ ಪದಾರ್ಥ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ.
ಬೆಂಗಳೂರು(ಮಾ.10): ಕೊರೋನಾ ಜತೆಗೆ ನಗರದಲ್ಲಿ ಕಾಲರಾ ಭೀತಿಯೂ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗದಲ್ಲಿ ತೆರೆದಿಟ್ಟಆಹಾರ ಪದಾರ್ಥ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶಿಸಿದೆ.
ಕೊರೋನಾ ವೈರಸ್ ಹಾಗೂ ಕಾಲರಾ ರೋಗ ಮುನ್ನಚ್ಚರಿಕೆ ಕುರಿತು ಸೋಮವಾರ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರ ಅಧ್ಯಕ್ಷತೆಯಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳ ತುರ್ತು ಸಭೆ ನಡೆಸಲಾಯಿತು.
ಕೊರೋನಾ ಭೀತಿ: ಪಾತಾಳಕ್ಕೆ ಕುಸಿದ ತರಕಾರಿ ಬೆಲೆ
ಈ ವೇಳೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ನಗರದಲ್ಲಿ 17 ಕಾಲರಾ ಪ್ರಕರಣ ಕಂಡು ಬಂದಿರುವುದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಬದಿಯಲ್ಲಿ ತೆರೆದ ಆಹಾರ ಪದಾರ್ಥ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ರಸ್ತೆ ಬದಿ ತೆರೆದಿಟ್ಟಆಹಾರ, ಬಣ್ಣದ ನೀರಿನ ಪಾನೀಯ ಹಾಗೂ ಕತ್ತರಿಸಿಟ್ಟಹಣ್ಣು ಮಾರಾಟ ಮಾಡದಂತೆ ತಡೆಗಟ್ಟಬೇಕು ಎಂದು ತಾಕೀತು ಮಾಡಿದರು.
ಸ್ವಚ್ಛತೆಗೆ ಆದ್ಯತೆ ನೀಡಿ:
ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಕಡೆ ಸ್ವಚ್ಛತೆ ಕಾಪಾಡಿಕೊಳ್ಳುವುದು. ಆಹಾರ ತಯಾರಿಸುವ ಸ್ಥಳ ಮತ್ತು ಆಹಾರ ಪದಾರ್ಥ ಸಂಗ್ರಹಿಸುವ ಸ್ಥಳದಲ್ಲಿನ ಸ್ವಚ್ಛತೆ ಕಾಪಾಡುವುದು. ಗ್ರಾಹಕರಿಗೆ ಬಿಸಿ ನೀರು ದೊರೆಯಲಿದೆ ಎಂಬ ನಾಮಫಲಕ ಕಡ್ಡಾಯವಾಗಿ ಅಳವಡಿಸಬೇಕು, ಬಿಸಿನೀರಿನ ವ್ಯವಸ್ಥೆ ಮಾಡಬೇಕು. ವಾರಕ್ಕೊಮ್ಮೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು. ಅನುಮಾನ ಬಂದ ಕಡೆ ನೀರಿನ ಮಾದರಿ ಪರೀಕ್ಷೆಗೆ ಒಳಪಡಿಸಬೇಕು ಸೇರಿದಂತೆ ವಿವಿಧ ಕ್ರಮ ವಹಿಸುವಂತೆ ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನೀರಿನ ಪರೀಕ್ಷೆಗೆ ಸೂಚನೆ:
ಈಗಾಗಲೇ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರೊಂದಿಗೆ ಚರ್ಚಿಸಿದ್ದು, ಕೊಳವೆ ಮೂಲಕ ಸರಬರಾಜು ಮಾಡಲಾಗುತ್ತಿರುವ ಕುಡಿಯುವ ನೀರಿನ ಪರೀಕ್ಷೆ ಮಾಡುವಂತೆ ಪರೀಕ್ಷೆಗೆ ತಿಳಿಸಲಾಗಿದೆ. ಜಲಮಂಡಳಿ ಅಧಿಕಾರಿ ಸಿಬ್ಬಂದಿ ನೀರಿನ ಕೊಳವೆ ಸೋರಿಕೆ ಆಗುವ ಜಾಗ ಗುರುತಿಸಲು ಮುಂದಾಗಿದ್ದಾರೆ. ಇನ್ನು ಬೇಸಿಗೆ ಕಾಲದಲ್ಲಿ ಹೆಚ್ಚು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿನಲ್ಲಿ ಕ್ಲೋರಿನ್ ಪ್ರಮಾಣವನ್ನು ಹೆಚ್ಚಿಸಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಕಾಲರಾ ರೋಗ ಕಾಣಿಸಿಕೊಂಡ ಪ್ರದೇಶಗಳಿಗೆ ಆರೋಗ್ಯಾಧಿಕಾರಿಗಳ ತಂಡ ಭೀಟಿ ನೀಡಿ ಜನರಿಗೆ ನೀರನ್ನು ಕುಡಿಯುವ ಮುನ್ನ ಚನ್ನಾಗಿ ಕುದಿಸಿ ಕುಡಿಯುವಂತೆ ಜಾಗೃತಿ ಮೂಡಿಸಲು ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು: ಮೆಟ್ರೋಗಾಗಿ ಕಾಳಿ ದೇಗುಲ ತೆರವು!
ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಮಾತನಾಡಿ, ಒಂದು ವಾರದಲ್ಲಿ 17 ಕಾಲರಾ ಪ್ರಕರಣ ಪತ್ತೆಯಾಗಿವೆ. ಕಾಲರಾ ರೋಗ ಲಕ್ಷಣಗಳು ಪತ್ತೆಯಾದ ಪ್ರದೇಶಗಳಿಗೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ವರದಿಗೆ ಕಾಯುತ್ತಿದ್ದೇವೆ. ಕಾಲರಾ ಲಕ್ಷಣ ಕಂಡು ಬಂದ 17 ಮಂದಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ತಿಳಿಸಿದರು.
ಕಾಲರಾ ರೋಗಕ್ಕೆ ತುತ್ತಾದ ರೋಗಿಗಳನ್ನು ಭೇಟಿ ಮಾಡಿ ಅವರು ಎಲ್ಲೆಲ್ಲಿ ಆಹಾರ ಸೇವಿಸಿದ್ದಾರೆ. ಆ ಪ್ರದೇಶದ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಲಮಂಡಳಿಯ ಆಯಾ ಪ್ರದೇಶದ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದು ಸೋರಿಕೆ ಇರುವ ತಾಣಗಳ ತಪಾಸಣೆ ನಡೆಸಲು ಸೂಚಿಸಲಾಗಿದೆ. ನಾಗರಿಕರು ಪಾದಚಾರಿ ಮಾರ್ಗ, ತೆರದ ಪ್ರದೇಶದಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳು, ಹಣ್ಣುಗಳು, ಸಂಚಾರಿ ಕ್ಯಾಂಟೀನ್‌ಳಲ್ಲಿ ಆಹಾರ ಸೇವನೆ ಮಾಡಬಾರದು. ನೀರನ್ನು ಕುದಿಸಿ ಕುಡಿಯಬೇಕು. ಕಚೇರಿಗೆ ತೆರಳುವವರು ಮನೆಯಿಂದಲೇ ನೀರು ತೆಗೆದುಕೊಂಡು ಹೋಗುವುದು ಉತ್ತಮ ಎಂದು ತಿಳಿಸಿದರು.
ಪ್ರಕರಣ ಎಲ್ಲೆಲ್ಲಿ ಪತ್ತೆ?
ದಕ್ಷಿಣ ವಲಯದಲ್ಲಿ 7 ಪ್ರಕರಣ:
ಬಸವನಗುಡಿಯಲ್ಲಿ 2, ಪದ್ಮನಾಭನಗರದಲ್ಲಿ 3, ವಿಜಯನಗರ ಹಾಗೂ ಬಿಟಿಎಂ ಲೇಔಟ್‌ನಲ್ಲಿ ತಲಾ ಒಂದು ಕಾಲರಾ ಪ್ರಕರಣ ಪತ್ತೆಯಾಗಿವೆ.
ಪೂರ್ವ ವಲಯದಲ್ಲಿ 8 ಪ್ರಕರಣ:
ನೀಲಸಂದ್ರದಲ್ಲಿ 4, ಆರ್.ಟಿ.ನಗರದಲ್ಲಿ 2, ಎಲ್‌ಆರ್ ನಗರ ಹಾಗೂ ಸಗಾಯ್ ಪುರದಲ್ಲಿ ತಲಾ ಒಂದು ಕಾಲರಾ ಪ್ರಕರಣ ಪತ್ತೆಯಾಗಿದೆ.
ಪಶ್ಚಿಮ ವಲಯಲ್ಲಿ 2 ಪ್ರಕರಣ:
ಮಲ್ಲೇಶ್ವರ ಹಾಗೂ ಗೌರಿಪಾಳ್ಯದಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗುವೆ.
ಆರೋಗ್ಯಾಧಿಕಾರಿಗಳ ತಪಾಸಣೆ
ಶಾಂತಿನಗರ, ಎಂ.ಜಿ.ರಸ್ತೆ, ಬ್ರಿಗೆಡ್ ರಸ್ತೆ, ನಂಜಪ್ಪ ವೃತ್ತ, ವಿಜಯನಗರ, ಚಿಕ್ಕಪೇಟೆ, ಜಯನಗರ ಸೇರಿದಂತೆ ಹಲವು ಕಡೆದ ಪಾದಚಾರಿ ಮಾರ್ಗದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಮಳಿಗೆ, ಹೋಟೆಲ್ ಸೇರಿದಂತೆ ವಿವಿಧ ಕಡೆ ಸೋಮವಾರ ಬಿಬಿಎಂಪಿ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಆಹಾರ ಮಾರಾಟ ಮಾಡದಂತೆ ಸೂಚನೆ ನೀಡಿ ತೆರವುಗೊಳಿಸಲಾಗಿದೆ.