ಸೀಜೆಂಟಾ ಕಂಪನಿಯ ಬಿತ್ತನೆ ಬೀಜ ಮಾರಾಟಕ್ಕಿಲ್ಲ
* ಹವಾಮಾನ ವೈಪರೀತ್ಯದಿಂದ ಬೇಡಿಕೆಯಷ್ಟುಉತ್ಪಾದನೆಯಾಗಿಲ್ಲ
* ಬೇರೆ ತಳಿ ಬಿತ್ತನೆ ಬೀಜ ಖರೀದಿಸುವಂತೆ ಮನವಿ
* ಉತ್ಪಾದನೆಯಾದ ಪ್ರಮಾಣದಲ್ಲಿ ಶೇ. 80ರಷ್ಟು ಬಳ್ಳಾರಿ ಜಿಲ್ಲೆಗೆ ಈಗಾಗಲೇ ಪೂರೈಕೆ
ಬಳ್ಳಾರಿ(ಜೂ.21): ಸೀಜೆಂಟಾ ಕಂಪನಿಯ 5531 ಮತ್ತು 2043 ತಳಿಗಳ ಮೆಣಸಿನಕಾಯಿ ಬೀಜದ ತಳಿ ಲಭ್ಯವಿಲ್ಲದ ಕಾರಣ ಈ ಎರಡು ತಳಿಗಳನ್ನು ಹೊರತುಪಡಿಸಿ ಅದೇ ಕಂಪನಿಯ ಬೇರೆ ತಳಿ ಹಾಗೂ ಇತರೆ ಕಂಪನಿಯ ಹೆಚ್ಚಿನ ಇಳುವರಿ ಕೊಡುವ ಬೀಜದ ತಳಿಗಳನ್ನು ಖರೀದಿಸಿ ರೈತರು ಬೆಳೆಯಲು ಮುಂದಾಗಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಪ್ಪ ಭೋಗಿ ಮನವಿ ಮಾಡಿದ್ದಾರೆ.
ಸೀಜೆಂಟಾ ಕಂಪನಿಯ ಬಿತ್ತನೆ ಬೀಜ ಲಭ್ಯವಾದಲ್ಲಿ ಜೂ. 21ರಂದು ಆಯಾ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡುವುದಾಗಿ ಹೇಳಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಇದೀಗ ಬಿತ್ತನೆ ಬೀಜ ಲಭ್ಯವಾಗದ ಹಿನ್ನೆಲೆ ಬೇರೆ ಕಂಪನಿಯ ಬಿತ್ತನೆ ಬೀಜಗಳನ್ನು ಖರೀದಿಸಿಕೊಳ್ಳುವಂತೆ ಇಲಾಖೆ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸೀಜೆಂಟಾ ಕಂಪನಿಯವರು 2021- 22ನೇ ಸಾಲಿಗೆ ಅಗತ್ಯವಿರುವಷ್ಟು ಸದರಿ ತಳಿಗಳ ಬೀಜಗಳನ್ನು ಹವಾಮಾನ ಕಾರಣಗಳಿಂದ ನಿಗದಿತ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸಾಧ್ಯವಾಗಿಲ್ಲ. ಉತ್ಪಾದನೆಯಾದ ಪ್ರಮಾಣದಲ್ಲಿ ಶೇ. 80ರಷ್ಟು ಬಳ್ಳಾರಿ ಜಿಲ್ಲೆಗೆ ಈಗಾಗಲೇ ಪೂರೈಸಲಾಗಿದೆ. ಆದರೂ ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಉಳಿಕೆಯಾದರೆ, ಸದರಿ ತಳಿಗಳ ಬೀಜಗಳನ್ನು ಸಂಗ್ರಹಿಸಿ ಬಳ್ಳಾರಿಗೆ ಪೂರೈಸುವುದಾಗಿ ಸೀಜೆಂಟಾ ಕಂಪನಿಯವರು ತಿಳಿಸಿದ್ದರು. ತದನಂತರ ಮೆಣಸಿನಕಾಯಿ ಬೀಜದ ಸಿಜೆಂಟಾ ಕಂಪನಿಯ 5531 ಮತ್ತು 2043 ಬೀಜ ತಳಿಗಳು ಬೇರೆ ಎಲ್ಲ ಕಡೆಯೂ ಬೇಡಿಕೆ ಇರುವುದರಿಂದ ಎಲ್ಲಿಯೂ ಉಳಿಕೆಯಾಗಿರುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಬಳ್ಳಾರಿಗೆ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿಯವರು ತಿಳಿಸಿದ್ದು, ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಜೂ. 21ರಂದು ಸದರಿ ತಳಿಗಳ ಮಾರಾಟವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೀಘ್ರವೇ ಬಳ್ಳಾರಿ- ವಿಜಯನಗರ ಅನ್‌ಲಾಕ್..?
ಈ ತಳಿಗಳ ಬೀಜಗಳು ಯಾವುದೇ ಡಿಸ್ಟ್ರಿಬ್ಯೂಟರ್/ಡೀಲರ್‌ಗಳ ಹತ್ತಿರ ಇದ್ದಲ್ಲಿ ಯಾವುದೇ ಕಾರಣಕ್ಕೂ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಸೂಕ್ತ ಕಾನೂನಿನ ಕ್ರಮ ಜರುಗಿಸಲಾಗುವುದೆಂದು ಎಂದು ಎಚ್ಚರಿಕೆ ನೀಡಿದ್ದಾರೆ.
70 ಸಾವಿರ ಹೆಕ್ಟೇರ್ ವಿಸ್ತರಣೆ:
ಜಿಲ್ಲಾದ್ಯಂತ ಮುಂಗಾರು ಹಂಗಾಮಿನ ಚಟುವಟಿಕೆಗಳು ಈಗಾಗಲೇ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿ ಬೆಳೆಯು ವಾಣಿಜ್ಯ ಬೆಳೆಯಾಗಿದೆ. 2020- 21ನೇ ಸಾಲಿನಲ್ಲಿ 42,674 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸದರಿ ವರ್ಷದಲ್ಲಿ ವಿವಿಧ ಕಂಪನಿಗಳಿಂದ ಮೆಣಸಿನಕಾಯಿ ಬೀಜ ಹಂಚಿಕೆಯಾಗಿರುವ ಪ್ರಕಾರ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶ ವಿಸ್ತರಣೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಕಳೆದ 2 ವರ್ಷಗಳಲ್ಲಿ ಕೋವಿಡ್ ಸಂದಿಗ್ಧ ಪರಿಸ್ಥಿಯಲ್ಲಿಯೂ ಮೆಣಸಿನಕಾಯಿ ಬೆಳೆಗೆ ಉತ್ತಮ ಮಾರುಕಟ್ಟೆದೊರೆತಿದೆ. ಕಳೆದ ಸಾಲಿನಲ್ಲಿ ಸರಿ ಸುಮಾರು 18 ಸಾವಿರ ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳೆದಿದ್ದು, ಸದರಿ ಬೆಳೆಯೂ ರೋಗಕ್ಕೆ ತುತ್ತಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯದಿರುವ ಬಗ್ಗೆ ರೈತರಿಂದ ಮಾಹಿತಿ ತಿಳಿದು ಬಂದಿದೆ. ಅದ್ದರಿಂದ ಹತ್ತಿ ಬೆಳೆ ಬೆಳೆಯುವ ರೈತರು ಸದರಿ ವರ್ಷದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲು ಮುಂದಾಗಿರುವ ಕಾರಣ ಮೆಣಸಿನಕಾಯಿ ಬೆಳೆ ಪ್ರದೇಶ ಹೆಚ್ಚಾಗುವ ಸಂಭವವಿರುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಕಂಪನಿಯ ಬೀಜಗಳು ಸಾಕಷ್ಟುಲಭ್ಯವಿರುತ್ತದೆ. ಆದರೂ ಸಿಜೆಂಟಾ ಕಂಪನಿಯ ತಳಿಗಳಾದ 5531 ಮತ್ತು 2043ಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.
ಮೇ 25ರವರೆಗೆ ಡೀಲರ್‌ಗಳ ಮೂಲಕ 3200 ಕೆಜಿ ಬಿತ್ತನೆ ಬೀಜ ಮಾರಾಟವಾಗಿದೆ. ನಂತರ ಸಿಜೆಂಟಾ ಕಂಪನಿಯ ಮೆಣಸಿನಕಾಯಿ ಬೆಳೆಯ ತಳಿಗಳಾದ 5531, 2043 ಬಿತ್ತನೆ ಬೀಜಗಳನ್ನು ನಿಗದಿತ(ಎಂಆರ್‌ಪಿ) ದರಕ್ಕಿಂತ ಹೆಚ್ಚಾಗಿ ಮಾರಾಟ ಮಾಡುತ್ತಿರುವುದಾಗಿ ದೂರುಗಳು ಬಂದಿದ್ದು, ಈ ಹಿನ್ನೆಲೆ ನಮ್ಮ ಕಚೇರಿಯಿಂದ ತಂಡಗಳಾಗಿ ರಚನೆ ಮಾಡಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾರಾಟ ಮಾಡಿರುವ ಬೀಜಗಳ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದ್ದರು.