ಬೆಂಗಳೂರು, (ಏ.07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು, ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

ರಾಜ್ಯ ಸರ್ಕಾರ ಸೂಚನೆಯಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬುಧವಾರದಿಂದ ಬೆಂಗಳೂರು ನಗರದಾದ್ಯಂತ ಸೆಕ್ಷನ್ 144 ಜಾರಿಗೊಳಿ ಆದೇಶ ಹೊರಡಿಸಿದ್ದಾರೆ.

ಕೊರೋನಾ ವೇಗ ಹೆಚ್ಚಿದೆ, 4 ವಾರ ನಿರ್ಣಾಯಕ: ಕೇಂದ್ರದಿಂದ ಎಚ್ಚರಿಕೆ!

ಏಪ್ರಿಲ್ 7ರಿಂದ  ಏ.20ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಯಾವುದೇ ಗುಂಪು ಅಥವಾ ಪ್ರತಿಭಟನೆ ಮಾಡುವಂತಿಲ್ಲ. ರೋಡ್‌ಶೋ, ಧರಣಿ, ಪ್ರತಿಭಟನೆ, ಮುಷ್ಕರ ನಡೆಸುವಂತಿಲ್ಲ. ಯಾವುದೇ ಸಂದರ್ಭದಲ್ಲೂ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಒಂದು ವೇಳೆ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಕೋವಿಡ್ ಸೋಂಕು ಹರಡುವುದನ್ನು ನಿಲ್ಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಸರ್ಕಾರವು ನಗರದ ಸ್ವಿಮ್ಮಿಂಗ್ ಪೂಲ್, ಜಿಮ್, ಅಪಾರ್ಟ್ಮೆಂಟ್, ಪಾರ್ಟಿ ಹಾಲ್ ಗಳಿಗೆ ನಿರ್ಬಂಧ ಹೇರಿದೆ.

ಇನ್ನು ರಾಜ್ಯದಲ್ಲಿ ನಿನ್ನೆ (ಏ.06) ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚಳವಾಗಿದ್ದು, ಬರೋಬ್ಬರಿ 6150 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 45104 ಕ್ಕೆ ಏರಿಕೆಯಾಗಿತ್ತು.

ಇನ್ನು ಇಂದು ಒಂದೇ ದಿನ ರಾಜ್ಯದಲ್ಲಿ 39 ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆ 12696ಕ್ಕೆ ಏರಿಕೆಯಾಗಿತ್ತು.