ನವದೆಹಲಿ(ಏ.07): ಭಾರತದಲ್ಲಿ ಕೊರೋನಾ ಹರಡುವಿಕೆಯ ವೇಗ ಆತಂಕಕಾರಿಯಾಗಿದೆ. ಮುಂದಿನ ನಾಲ್ಕು ವಾರಗಳು ನಿರ್ಣಾಯಕ ಎಂದು ಕೇಂದ್ರ ಸರ್ಕಾರ ಮಂಗಳವಾರ ಎಚ್ಚರಿಕೆ ನೀಡಿದೆ. ಇದೇ ವೇಳೆ ಕೊರೋನಾ 2ನೇ ಅಲೆ ನಿಗ್ರಹಕ್ಕೆ ಸಾರ್ವಜನಿಕರ ಸಹಭಾಗಿತ್ವ ತೀರಾ ಅಗತ್ಯ ಎಂದು ಒತ್ತಿ ಹೇಳಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ| ವಿ.ಕೆ.ಪೌಲ್‌ ಅವರು, ‘ದೇಶದಲ್ಲಿ ಸಾಂಕ್ರಾಮಿಕ ರೋಗದ ಸ್ಥಿತಿ ಗಂಭೀರವಾಗಿದೆ. ಸೋಂಕಿತರ ಸಂಖ್ಯೆ ಮತ್ತು ಸಾವು ಎರಡೂ ಏರುಗತಿಯಲ್ಲಿದೆ. ದೇಶದ ಜನಸಂಖ್ಯೆಯ ದೊಡ್ಡ ಭಾಗ ಸೋಂಕಿಗೆ ಒಳಗಾಗುವ ಭೀತಿ ಇದೆ. ಆದರೆ ವೈರಸ್‌ ವಿರುದ್ಧದ ನಮ್ಮ ಸಾಧನಗಳು ಬದಲಾಗಿಲ್ಲ. ಹಾಗಾಗಿ ಕೊರೋನಾ ಮಾರ್ಗಸೂಚಿ ಪಾಲನೆ, ಪರೀಕ್ಷೆ ಹೆಚ್ಚಳ, ಆರೋಗ್ಯ ಮೂಲ ಸೌಕರ‍್ಯಗಳನ್ನು ಹೆಚ್ಚಿಸಬೇಕಾದ ತುರ್ತು ಇದೆ’ ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಆರೋಗ್ಯ ಕಾರ‍್ಯದರ್ಶಿ ರಾಜೇಶ್‌ ಭೂಷಣ್‌ ಮಾತನಾಡಿ, ‘ಅತಿ ಹೆಚ್ಚು ಸಕ್ರಿಯ ಕೇಸ್‌ ಇರುವ ಮತ್ತು ಅತಿ ಹೆಚ್ಚು ದೈನಂದಿನ ಕೇಸ್‌ ದಾಖಲಾಗುತ್ತಿರುವ ಟಾಪ್‌ 10 ಜಿಲ್ಲೆಗಳ ಪೈಕಿ ಬೆಂಗಳೂರು, ಮುಂಬೈ ಸಹ ಸೇರಿವೆ’ ಎಂದು ತಿಳಿಸಿದರು.