ಸ್ಮಾರ್ಟ್ ಕ್ಲಾಸ್ ಆಗಲಿದೆ ಕೆಎಸ್‌ಆರ್‌ಟಿಸಿ ‘ಸ್ಕ್ರಾಪ್ ಬಸ್’!
ತದ್ರೂಪಿ ಬಸ್ ನಿರ್ಮಿಸಿ ಸುದ್ದಿಯಾಗಿದ್ದ ಪ್ರಶಾಂತ್ ಆಚಾರ್ ಮನವಿಯಂತೆ ಇದೀಗ ಉಡುಪಿಯಲ್ಲಿ ಸ್ಕ್ರಾಪ್ ಕೆಎಸ್‌ಆರ್‌ಟಿಸಿ ಬಸ್ ಸ್ಮಾರ್ಟ್ ಕ್ಲಾಸ್ ಆಗಲಿದೆ.
ಕುಂದಾಪುರ (ಡಿ.05): ಇಲ್ಲಿನ ಬಗ್ವಾಡಿಯ ಯುವಕ, ತದ್ರೂಪಿ ಸರ್ಕಾರಿ ಬಸ್ ರಚಿಸುವ ಕಲಾವಿದ ಪ್ರಶಾಂತ್ ಆಚಾರ್ ಅವರಿಗೆ ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿ ನೀಡಿರುವ ಭರವಸೆಯಂತೆ, ಗುರುವಾರ ಕೆಎಸ್‌ಆರ್‌ಟಿಸಿ ಬಸ್ಸೊಂದು ಬಗ್ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದೆ.
ಕೊರೋನಾ ಮುಗಿದು ತರಗತಿಗಳು ಆರಂಭವಾದರೆ ಈ ಬಸ್ಸಿನಲ್ಲಿ ಈ ಶಾಲೆಯ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಆರಂಭವಾಗಲಿದೆ. ಇದರೊಂದಿಗೆ ಪ್ರಶಾಂತ್ ಆಚಾರ್ ಅವರ ಕನಸು ನನಸಾಗುತ್ತದೆ.
ಆಚಾರ್ ಕನಸೇನು?: ಕೆಎಸ್‌ಆರ್‌ಟಿಸಿ ಬಸ್ಸುಗಳ ಮೇಲೆ ವಿಪರೀತ ಅಭಿಮಾನ ಹೊಂದಿರುವ ಪ್ರಶಾಂತ್ ಆಚಾರ್ ಅವರು ಫೋಮ್ ಶೀಟ್‌ನಲ್ಲಿ ಕೆಎಸ್‌ಆರ್‌ಟಿಸಿ, ಐರಾವತ ಬಸ್ಸುಗಳ ತದ್ರೂಪಿ ಮಿನಿ ಪ್ರತಿಕೃತಿಗಳನ್ನು ತಯಾರಿಸಿದ್ದು, ಇದನ್ನು ‘ಕನ್ನಡಪ್ರಭ’ ಮೊದಲ ಬಾರಿಗೆ ವರದಿ ಮಾಡಿತ್ತು. ಕನ್ನಡಪ್ರಭ ವರದಿಯನ್ನು ನೋಡಿ ಸಚಿವರು, ಪ್ರಶಾಂತ್ ಆಚಾರ್ ಅವರನ್ನು ಬೆಂಗಳೂರಿಗೆ ಕರೆಸಿ ಗೌರವಿಸಿದ್ದರು. ಈ ಸಂದರ್ಭ, ತಮ್ಮೂರಿನಲ್ಲಿ ಕೆ.ಜಿ. ತರಗತಿಗಳನ್ನು ನಡೆಸುವುದಕ್ಕೆ ಇಲಾಖೆಯ ಹಳೆಯ ಬಸ್ಸು ನೀಡುವಂತೆ ಮನವಿ ಮಾಡಿದ್ದರು.
ಗುಡ್ ನ್ಯೂಸ್ : KSRTC ಪ್ರಯಾಣ ದರ ಭರ್ಜರಿ ಇಳಿಕೆ ...
ಇದಕ್ಕೆ ಸ್ಪಂದಿಸಿದ ಸಚಿವರು ಇದೀಗ ಇಲಾಖೆಯ ಹಳೆಯ ಬಸ್ಸೊಂದನ್ನು ಕಳುಹಿಸಿಕೊಟ್ಟಿದ್ದಾರೆ, ಇದರೊಳಗೀಗ ತಮ್ಮೂರಿನ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ನಡೆಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸುವ ತಯಾರಿಯಲ್ಲಿದ್ದಾರೆ. 96 ವರ್ಷಗಳ ಇತಿಹಾಸ ಇರುವ, ಪ್ರಸ್ತುತ 85 ವಿದ್ಯಾರ್ಥಿಗಳಿರುವ ಬಗ್ವಾಡಿ ಸರ್ಕಾರಿ ಶಾಲೆಯನ್ನು ಉಳಿಸುವುದಕ್ಕೆ, ಇನ್ನೂ ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯುವುದಕ್ಕೆ ಪ್ರಶಾಂತ ಆಚಾರ್ ಮತ್ತವರ ಅಣ್ಣ ಪ್ರಕಾಶ್ ಆಚಾರ್ ಈ ಬಸ್ ಸ್ಮಾರ್ಟ್ ಕ್ಲಾಸ್ ಐಡಿಯಾ ಮಾಡಿದ್ದಾರೆ.
ಈ ಯೋಜನೆಯನ್ನು ಮೆಚ್ಚಿರುವ ಸಾರಿಗೆ ಸಚಿವರು, ಇಲ್ಲಿ ಯಶಸ್ವಿಯಾದರೆ ತಮ್ಮ ಇಲಾಖೆಯಲ್ಲಿ ಗುಜರಿ ಸೇರಿ ವ್ಯರ್ಥವಾಗುವ ಇತರ ಬಸ್ಸುಗಳನ್ನು ರಾಜ್ಯದ ಬೇರೆ ಸರ್ಕಾರಿ ಶಾಲೆಗೆ ನೀಡುವ ಬಗ್ಗೆ ಯೋಚನೆ ಮಾಡುವುದಾಗಿಯೂ, ಅವರನ್ನು ಭೇಟಿಯಾದಾಗ ತಿಳಿಸಿದ್ದಾರೆ.
ಕೆ.ಜಿ.ಯಿಂದ 7ನೇ ತರಗತಿಯ ವಿದ್ಯಾರ್ಥಿಗಳು ದಿನಕ್ಕೊಂದು ಗಂಟೆ ಕಾಲ ಈ ಬಸ್ಸೊಳಗೆ ಆಡಿಯೋ ವಿಶ್ಯುವಲ್ ಮಾಧ್ಯಮದಲ್ಲಿ ಪಾಠಗಳನ್ನು ಕೇಳುವುದಕ್ಕೆ ಅನುಕೂಲವಾಗುವಂತೆ ಬಸ್ಸನ್ನು ಪರಿವರ್ತಿಸುವುದಕ್ಕೆ ಆಚಾರ್ ಸಹೋದರರು ಯೋಜನೆ ಹಾಕಿಕೊಂಡಿದ್ದಾರೆ.
ಈ ಸಹೋದರರ ಈ ಯೋಜನೆ ಯೋಚನೆಗೆ ಶಾಲಾ ಮುಖ್ಯಶಿಕ್ಷಕಿ ಶೈಲಜಾ ಟೀಚರ್ ಮತ್ತು ಸಹದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಹೀಗಿರಲಿದೆ ಬಸ್‌ಸ್ಮಾರ್ಟ್ ಕ್ಲಾಸ್
ಸಾಕಷ್ಟುಉದ್ದವಿರುವ ಈ ಬಸ್ಸಿನ ಮೇಲೆ ಸೌರ ಫಲಕಗಳನ್ನು ಅಳವಡಿಸಿ, ಅದರಿಂದ ದೀಪ, ಫ್ಯಾನುಗಳನ್ನು ನಡೆಸಲಾಗುತ್ತದೆ, ಒಳಗಿರುವ ಹಳೆಯ ಸೀಟುಗಳನ್ನು ತೆಗೆದು, ಮಕ್ಕಳಿಗೆ ತರಗತಿಗೆ ಅನುಕೂಲವಾಗುವಂತೆ ಸೀಟುಗಳನ್ನು ಹಾಕಲಾಗುತ್ತದೆ. ಪ್ರೊಜೆಕ್ಟರ್ - ಪರದೆ ಹಾಕಿ ದೃಶ್ಯ ಶ್ರವಣ ಮಾಧ್ಯಮದ ಮೂಲಕ ಪಾಠಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಸ್ಸಿನ ಹಿಂದಿನ ಭಾಗದಲ್ಲಿ ಸಣ್ಣ ಪ್ರಯೋಗಾಲಯವನ್ನೂ ಮಾಡುವ ಯೋಚನೆ ಇದೆ. ಒಟ್ಟಿನಲ್ಲಿ ಈ ಬಸ್ಸು ಮಕ್ಕಳಸ್ನೇಹಿಯಾಗಿರಬೇಕು ಎನ್ನುತ್ತಾರೆ ಪ್ರಶಾಂತ್ - ಪ್ರಕಾಶ್ ಸಹೋದರರು.