ಎಸ್ಸಿ, ಎಸ್ಟಿ ಮೀಸಲಾತಿ: ನಾಳೆ ಉಪ್ಪಾರ ಸಮಾಜದಿಂದ ಬೃಹತ್ ಹೋರಾಟ
- ಎಸ್ಸಿ, ಎಸ್ಟಿಮೀಸಲಿಗಾಗಿ ನಾಳೆ ಬೃಹತ್ ಹೋರಾಟ
- ಉಪ್ಪಾರ ಸಮಾಜದವರಿಂದ ಕಾಲ್ನಡಿಗೆಯಲ್ಲಿ ಪ್ರತಿಭಟನಾ ಮೆರವಣಿಗೆ
- ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸಾರಥ್ಯ
ದಾವಣಗೆರೆ (ನ.6) : ಉಪ್ಪಾರ ಸಮಾಜವನ್ನು ಪರಿಶಿಷ್ಟಜಾತಿ ಅಥವಾ ಪಂಗಡಕ್ಕೆ ಸೇರ್ಪಡೆಗೆ ಒತ್ತಾಯಿಸಿ ನ.7ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಪ್ಪಾರ ಎಸ್ಸಿ-ಎಸ್ಟಿಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಎಚ್.ತಿಪ್ಪಣ್ಣ ತುರ್ಚಘಟ್ಟತಿಳಿಸಿದರು.
ದಾವಣಗೆರೆಯಿಂದ ‘ಮೀಸಲಾತಿ ಸುಂಟರಗಾಳಿ’ ಶುರು
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 11ಕ್ಕೆ ಡಾ.ಅಂಬೇಡ್ಕರ್ ವೃತ್ತದಿಂದ ಉಪ್ಪಾರ ಸಮಾಜದ ಗುರುಗಳಾದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸಾರಥ್ಯದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಎಲ್ಲಾ ತಾಲೂಕುಗಳಿಂದ ಸುಮಾರು 5-6 ಸಾವಿರಕ್ಕೂ ಅಧಿಕ ಉಪ್ಪಾರ ಸಮಾಜದವರು ಬೃಹತ್ ಕಾಲ್ನಡಿಗೆಯಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಉಪ್ಪಾರ ಸಮಾಜ ಅತ್ಯಂತ ಹಿಂದುಳಿದಿದೆ. ಈವರೆಗೆ ಉಪ್ಪಾರ ಸಮಾಜಕ್ಕೆ ನೀಡಬೇಕಾಗಿದ್ದ ಮೀಸಲಾತಿಯನ್ನು ಆಳಿದ ಸರ್ಕಾರಗಳು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯವನ್ನು ಪರಿಶಿಷ್ಟಜಾತಿ ಅಥವಾ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಸರ್ಕಾರವು 1978ರಲ್ಲಿ ರಚಿಸಿದ್ದ ಎಲ್.ಜಿ.ಹಾವನೂರು ಆಯೋಗದ ವರದಿ, 1986ರಲ್ಲಿ ವೆಂಕಟಸ್ವಾಮಿ ಆಯೋಗದ ವರದಿ, 1990ರಲ್ಲಿ ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗ ವರದಿ ಸೇರಿ ಅನೇಕ ಆಯೋಗಗಳು, ಸಮಿತಿಗಳು ಉಪ್ಪಾರ ಸಮಾಜದ ಬಗ್ಗೆ ಸಮಗ್ರ ಅಧ್ಯಯನ ಮಾಡಿ, ವರದಿ ಸಲ್ಲಿಸಿದ್ದರೂ ಸರ್ಕಾರಗಳು ಮಾತ್ರ ಉಪ್ಪಾರ ಬಾಂಧವರಿಗೆ ಪರಿಶಿಷ್ಟಜಾತಿ-ಪಂಗಡಗಳ ಮೀಸಲಾತಿ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
35ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕ:
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಬಿ.ಪಿ.ಮಂಡಲ್ ವರದಿಗಳಿಂದಲೂ ಉಪ್ಪಾರ ಸಮಾಜ ಶೈಕ್ಷಣಿಕ, ರಾಜಕೀಯ ಸಹಾಯವಿಲ್ಲದೇ, ಎಷ್ಟೇ ಒಗ್ಗಟ್ಟಾಗಿ ಪ್ರಯತ್ನಿಸಿದರೂ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಟಜಾತಿ, ಪಂಗಡಗಳ ಸಾಮಾಜಿಕ ಹಿನ್ನೆಲೆಗಿಂತಲೂ ಕನಿಷ್ಟವಾಗಿರುವುದು ಕಂಡು ಬಂದಿದ್ದನ್ನು ಒತ್ತಿ ಹೇಳಿದ್ದಾರೆ. ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಹಿಂದುಳಿದ ವರ್ಗಗಳ 2ನೇ ಅತೀ ದೊಡ್ಡ ಸಮಾಜ ನಮ್ಮದು ಎಂದರು. ಉಪ್ಪಾರರು ಕನಿಷ್ಟ35ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ ಉಪ್ಪಾರ ಚರಿತಾಮೃತ ಮತ್ತು ಉಪ್ಪಾರ ಹಣತೆ ಪುಸ್ತಕದಲ್ಲಿರುವ ಅಂಕಿ ಅಂಶ ಸ್ಪಷ್ಟವಾಗಿ ಉಪ್ಪಾರ ಸಮಾಜವು ಅತ್ಯಂತ ಹಿಂದುಳಿದಿರುವುದು ಸಾಕ್ಷ್ಯ, ದಾಖಲೆ ಸಹಿತ ಸರ್ಕಾರದ ಗಮನಕ್ಕೂ ತಂದಿದೆ. ಈ ಹಿನ್ನೆಲೆಯಲ್ಲಿ ಉಪ್ಪಾರರಿಗೆ ಎಸ್ಸಿ-ಎಸ್ಟಿಮೀಸಲಾತಿ ನೀಡಲಿ ಎಂದು ತಿಪ್ಪಣ್ಣ ತುರ್ಚಘಟ್ಟಒತ್ತಾಯಿಸಿದರು.
ಸಮಾಜದ ಮುಖಂಡ ಭರತ್ ಮೈಲಾರ ಮಾತನಾಡಿ, ಕಳೆದ 4 ವರ್ಷದಿಂದ ಉಪ್ಪಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆದಿದೆ. ಅದರಂತೆ ನಮಗೆ ಎಸ್ಸಿ-ಎಸ್ಟಿಮೀಸಲಾತಿ ನೀಡಬೇಕು. ಇದೀಗ ಸರ್ಕಾರ ನಮ್ಮ ಬೇಡಿಕೆ ಈಡೇರಿಸಲು ದೊಡ್ಡ ಮಟ್ಟದ ಹೋರಾಟ ನಡೆಸಿದ್ದೇವೆ ಎಂದರು.
ಸಮಾಜದ ಹಿರಿಯ ಮುಖಂಡರು, ವಕೀಲರಾದ ಮತ್ತಿ ಹನುಮಂತಪ್ಪ, ಎ.ವೈ.ಪ್ರಕಾಶ, ಪಾಲಿಕೆ ಸದಸ್ಯೆ, ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ, ಮಾಜಿ ಉಪ ಮೇಯರ್ ಮಂಜುಳಮ್ಮ, ಎಚ್.ಡಿ.ಮಾರುತಿ, ಎನ್.ಬಿ.ಲೋಕೇಶ, ಗಿರೀಶ ಹೊಸನಾಯಕನಹಳ್ಳಿ, ಹಾಲೇಶ, ಕೆ.ಬಿ.ಗಿರೀಶ, ರಮೇಶ, ರಾಜಪ್ಪ, ನಾಗರಾಜ, ಈಶ್ವರಪ್ಪ, ರಮೇಶ, ಈಶ್ವರಪ್ಪ ಇತರರು ಇದ್ದರು.
ಮೀಸಲಾತಿ ಘೋಷಣೆ ನಂತರ ಯುದ್ಧೋತ್ಸಾಹದಲ್ಲಿ ಬಿಜೆಪಿ..!
ದೂಡಾ ಅಧ್ಯಕ್ಷ ಸ್ಥಾನ ಉಪ್ಪಾರರಿಗೆ ಕೊಡಿ
ಉಪ್ಪಾರರಿಗೆ ಪಾಲಿಕೆ, ಜಿಪಂ, ತಾಪಂ, ನಗರಸಭೆ, ಪುರಸಭೆ, ಪಪಂನಂತಹ ಟಿಕೆಟ್ ನೀಡುವುದಕ್ಕೂ ರಾಜಕೀಯ ಪಕ್ಷಗಳ ನಾಯಕರು ಮೀನಾ-ಮೇಷ ಎಣಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಸದ್ಯ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಉಪ್ಪಾರ ಸಮಾಜವನ್ನು ಪರಿಗಣಿಸುವಂತೆ ಆಡಳಿತ ಪಕ್ಷದ ಮುಖಂಡರು, ವರಿಷ್ಠರಿಗೆ ಒತ್ತಾಯಿಸುತ್ತಿದ್ದೇವೆ. ಶೀಘ್ರವೇ ಎಲ್ಲಾ ಮುಖಂಡರನ್ನು ಭೇಟಿ ಮಾಡಲಿದ್ದೇವೆ ಎಂದು ಜಿಲ್ಲಾ ಉಪ್ಪಾರ ಎಸ್ಸಿ-ಎಸ್ಟಿಮೀಸಲಾತಿ ಹೋರಾಟ ಸಮಿತಿಯ ಭರತ್ ಮೈಲಾರ ಹೇಳಿದರು.