ದಾವಣಗೆರೆಯಿಂದ ‘ಮೀಸಲಾತಿ ಸುಂಟರಗಾಳಿ’ ಶುರು
- ದಾವಣಗೆರೆಯಿಂದ ‘ಮೀಸಲಾತಿ ಸುಂಟರಗಾಳಿ’ ಶುರು
- ಎಸ್ಸಿ-ಎಸ್ಟಿಮೀಸಲಾತಿ ಹೆಚ್ಚಳಕ್ಕೆ ಮಡಿವಾಳ, ಕುರುಬ ಸಮಾಜಗಳ ಸ್ವಾಗತ
- ಉಪ್ಪಾರ, ಪಂಚಮಸಾಲಿ ಇತರೆ ಸಮುದಾಯಗಳಿಂದ ಮೀಸಲಾತಿಗೆ ಧ್ವನಿ
ನಾಗರಾಜ ಎಸ್.ಬಡದಾಳ್
ದಾವಣಗೆರೆ (ಅ.13) : ಪರಿಶಿಷ್ಟಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸಿದ್ದರ ಜೊತೆಗೆ ಅದಕ್ಕೆ ಸಾಂವಿಧಾನಿಕ ರಕ್ಷಣೆ ನೀಡುವಂತೆ ಪರಿಶಿಷ್ಟಸಮುದಾಯಗಳಿಂದ ಒತ್ತಾಯ ವ್ಯಕ್ತವಾದ ಬೆನ್ನಲ್ಲೇ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಕ್ಕೆ ತಮ್ಮ ಸಮಾಜವನ್ನು ಸೇರ್ಪಡೆ ಮಾಡುವಂತೆ, ಕೇಂದ್ರದ ಒಬಿಸಿ ಮತ್ತು ರಾಜ್ಯ ಸರ್ಕಾರದ 2 ಎ ಮೀಸಲಾತಿ ಕಲ್ಪಿಸಬೇಕೆಂಬುದಾಗಿ ರಾಜ್ಯ ಸರ್ಕಾರಕ್ಕೆ ಒಂದೊಂದೇ ಸಮುದಾಯಗಳ ಒತ್ತಡ, ಕೂಗು ಕೇಳಿ ಬರುತ್ತಿದೆ.
ಮೀಸಲಾತಿ ಘೋಷಣೆ ನಂತರ ಯುದ್ಧೋತ್ಸಾಹದಲ್ಲಿ ಬಿಜೆಪಿ..!
ನ್ಯಾ.ನಾಗಮೋಹನ ದಾಸ್ ಸಮಿತಿಯ ಶಿಫಾರಸ್ಸಿನಂತೆ ಪರಿಶಿಷ್ಟಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪರಿಶಿಷ್ಟರು ಸ್ವಾಗತಿಸಿದ್ದಾರೆ. ಆದರೆ, ಈ ನಿರ್ಧಾರದ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು. ಸುಪ್ರೀಂಕೋರ್ಚ್ ತೀರ್ಪಿನಂತೆ ಒಟ್ಟು ಶೇ.50 ಮೀರುವಂತಿಲ್ಲ. ಆದರೆ, ಮೀಸಲಾತಿ ಹೆಚ್ಚಳದ ನಿರ್ಧಾರದಿಂದಾಗಿ ರಾಜ್ಯದ ಒಟ್ಟು ಮೀಸಲಾತಿ ಪ್ರಮಾಣ ಶೇ.56 ಆಗಲಿದೆ. ಇಂತಹ ಕಾನೂನು ಬಿಕ್ಕಟ್ಟಿನ ಬಗ್ಗೆ ಬಿಜೆಪಿ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಎಸ್ಸಿ ಮೀಸಲಾತಿಗೆ ಮಡಿವಾಳರ ಸೇರಿಸಿ:
ಪರಿಶಿಷ್ಟಜಾತಿಗೆ ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಸರ್ಕಾರ ಹೆಚ್ಚಿಸಿದೆ. ಈ ಮಧ್ಯೆ ಮೀಸಲಾತಿ ಹೆಚ್ಚಳಕ್ಕೆ ಸಾಂವಿಧಾನಿಕ ರಕ್ಷಣೆ ನೀಡಬೇಕು ಎಂಬುದಾಗಿ ಬಿಜೆಪಿಯ ಪರಿಶಿಷ್ಟಜಾತಿಯ ಮುಖಂಡರು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಮೀಸಲಾತಿ ಹೆಚ್ಚಳದ ಬೆನ್ನಲ್ಲೇ ಅನೇಕ ಸಮುದಾಯಗಳೂ ಎದ್ದು ಕುಳಿತಿವೆ. ಮಲ ಸ್ವಚ್ಛಗೊಳಿಸುವ ಮಡಿವಾಳ ಸಮಾಜವನ್ನು ಯಾಕೆ ಪರಿಶಿಷ್ಟಜಾತಿಗೆ ಸೇರಿಸಿಲ್ಲ? ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿರುವ ಸಮುದಾಯದ 50 ವರ್ಷದ ಬೇಡಿಕೆಗೆ ಯಾಕೆ ಯಾವೊಂದು ಸರ್ಕಾರವೂ ಸ್ಪಂದಿಸಿಲ್ಲವೆಂಬ ಪ್ರಶ್ನೆಯನ್ನು ಮಡಿವಾಳ ಸಮಾಜ ಸರ್ಕಾರದ ಮುಂದಿಟ್ಟಿದೆ.
ಉಪ್ಪಾರರನ್ನೂ ಪರಿಶಿಷ್ಟಜಾತಿಗೆ ಸೇರಿಸಲಿ
ಸುಮಾರು 33 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಉಪ್ಪಾರ ಸಮಾಜವೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ರಾಜಕೀಯವಾಗಿ ಹಿಂದುಳಿದಿದ್ದು, ನ್ಯಾ.ವೆಂಕಟಸ್ವಾಮಿ ಆಯೋಗ, ನ್ಯಾ.ಚಿನ್ನಪ್ಪ ರೆಡ್ಡಿ ಆಯೋಗ, ನ್ಯಾ.ಹಾವನೂರು ಆಯೋಗಗಳು ಉಪ್ಪಾರ ಸಮಾಜ ಪರಿಶಿಷ್ಟಜಾತಿ-ಪಂಗಡಕ್ಕಿಂತ ಶೋಚನೀಯ ಸ್ಥಿತಿಯಲ್ಲಿರುವ ಬಗ್ಗೆ ವರದಿ ನೀಡಿವೆ. ಕಲ್ಲು, ಗಾರೆ, ಮಣ್ಣು, ಕೂಲಿ ಕೆಲಸ ಮಾಡುವ ಈ ಸಮಾಜ ಕಡು ಬಡತನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಪ್ಪಾರರು ಪರಿಶಿಷ್ಟಜಾತಿಯಲ್ಲಿದ್ದು, ಸೌಲಭ್ಯ ಪಡೆಯುತ್ತಿದ್ದಾರೆ. ರಾಜ್ಯವ್ಯಾಪಿ ಉಪ್ಪಾರರನ್ನು ಪರಿಶಿಷ್ಟಜಾತಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂಬ ಬೇಡಿಕೆ ಇಡುತ್ತಿದೆ. ಈ ಬಗ್ಗೆ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಸರ್ಕಾರಕ್ಕೆ ಸಾಕಷ್ಟುಸಲ ಮನವಿ ಸಲ್ಲಿಸಿದೆ.
ಕುರುಬರ ಎಸ್ಟಿಗೆ ಸೇರ್ಪಡೆ ಮಾಡಿ:
ಇನ್ನು ಕುರುಬ ಸಮಾಜವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಂತೆ ಬೇಡಿಕೆ ವ್ಯಕ್ತವಾಗಿದೆ. ಕುಲಶಾಸ್ತ್ರೀಯ ಅಧ್ಯಯನ ವರದಿ ಅಂಗೀಕರಿಸಿ, ಕುರುಬರನ್ನು ಎಸ್ಟಿಗೆ ಸೇರಿಸಲು ಸರ್ಕಾರ ಮುಂದಾಗಬೇಕು. ರಾಯಚೂರು ಜಿಲ್ಲೆಯಿಂದ ಚಾಮರಾಜ ನಗರ ಜಿಲ್ಲೆವರೆಗೂ ರಾಜ್ಯ ಬುಡಕಟ್ಟು ಸಂಶೋಧನಾ ಇಲಾಖೆ ಅಧ್ಯಯನ ನಡೆಸಿದೆ. ದಾವಣಗೆರೆ ಜಿಲ್ಲೆ ಬೆಳ್ಳೂಡಿ ಗ್ರಾಮದ ಕನಕ ಗುರುಪೀಠದಲ್ಲಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಹಕ್ಕೊತ್ತಾಯ ಸಮಾವೇಶವನ್ನೂ ಮಾಡಿ, ಕುರುಬರನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಹಾಲುಮತ ಮಹಾಸಭಾ ಒತ್ತಾಯಿಸಿದೆ. ಸಾಮಾಜಿಕ ನ್ಯಾಯದಡಿ ಎಸ್ಸಿ-ಎಸ್ಟಿಮೀಸಲಾತಿ ಪ್ರಮಾಣ ಹೆಚ್ಚಿಸಲು ಮುಂದಾಗಿದ್ದು ಸ್ವಾಗತಾರ್ಹ. ಅದೇ ರೀತಿ ಕುರುಬರನ್ನು ಎಸ್ಟಿಗೆ ಸೇರಿಸಿ, ನಮ್ಮ ದಶಕದ ಕೂಗಿಗೆ ಸ್ಪಂದಿಸಲಿ ಎಂದು ಸರ್ಕಾರಕ್ಕೆ ಮಹಾಸಭಾ ಒತ್ತಾಯಿಸಿದೆ.
SC, ST ಮೀಸಲಾತಿ ಹೆಚ್ಚಳ ಅಸ್ತ್ರ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದುವೇ ಶಸ್ತ್ರ.?!
ಒಬಿಸಿ, 2ಎ ಮೀಸಲಾತಿಗೆ ಪಂಚಮಸಾಲಿ ಪಟ್ಟು
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಮತ್ತು ರಾಜ್ಯ ಸರ್ಕಾರದ 2 ಎ ಮೀಸಲಾತಿ ಕಲ್ಪಿಸಬೇಕು ಎಂಬ ಕೂಗು ಹರಿಹರದ ಪಂಚಮಸಾಲಿ ಪೀಠದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ಕೇಳಿ ಬಂದಿದೆ. ಕಾನೂನಾತ್ಮಕವಾಗಿ ಸಮಾಜ ಇಟ್ಟಿರುವ ಹೆಜ್ಜೆಗಳು ಹಾಗೂ ಮುಂದೆ ಮಾಡಬೇಕಾದ ಹೋರಾಟ, ಕಾರ್ಯಗಳ ರೂಪುರೇಷೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವ ಸಮಾಜವು ಶೀಘ್ರವೇ ಪಂಚಮಸಾಲಿ ಮೀಸಲಾತಿ ಜನ ಜಾಗೃತಿ ಯಾತ್ರೆ ನಡೆಸಲು ಸಂಕಲ್ಪ ಮಾಡಿದೆ. ಒಟ್ಟಾರೆ, ಜಿಲ್ಲೆಗೊಂದು ಸಚಿವ ಸ್ಥಾನ ಕೊಡಲಾಗದ ಸರ್ಕಾರದ ಬೇರುಗಳಿಗೆ ಕೈ ಹಾಕುವ ಕೆಲಸ ವಿವಿಧ ಸಮುದಾಯ, ಧಾರ್ಮಿಕ ಕೇಂದ್ರಗಳಿಂದ ಆಗುತ್ತಿದೆ. ಇನ್ನೇನು ಕೆಲವೇ ತಿಂಗಳಿಗೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಅಂತಹದ್ದರಲ್ಲಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಶುರುವಾದ ಸಣ್ಣ ಗಾಳಿ ಸುಂಟರಗಾಳಿಯಂತೆ ಸರ್ಕಾರವನ್ನು ಕಾಡುವ ದಿನಗಳೂ ದೂರವಿಲ್ಲವೆಂಬ ಮಾತು ಕೇಳಿ ಬರುತ್ತಿದೆ.