ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಬೀದರ್ ಮೂಲದ 80 ವರ್ಷದ ರಹಮತ್ ಬಿ ಮೃತಪಟ್ಟಿದ್ದಾರೆ. ಮೆಕ್ಕಾ-ಮದೀನಾ ಯಾತ್ರೆಗೆ ತೆರಳಿದ್ದಾಗ ಈ ದುರಂತ ಸಂಭವಿಸಿದ್ದು, ಮೃತದೇಹವನ್ನು ಗುರುತಿಸಲು ಮತ್ತು ತಾಯ್ನಾಡಿಗೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.
ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಬೀದರ್ ಜಿಲ್ಲೆಯ ಮೈಲೂರು ನಗರ ಸಿಎಮ್‌ಸಿ ಕಾಲೋನಿಯ ಮೂಲದ ರಹಮತ್ ಬಿ (80) ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಮೂಲಕ ಅಫಘಾತದಲ್ಲಿ ಮೃತಪಟ್ಟ ಕನ್ನಡಿಗರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಅಬ್ದುಲ್ ಗಣಿ ಶಿರಹಟ್ಟಿ ಎಂಬುವವರು ಮೃತಪಟ್ಟಿದ್ದಾರೆ. ಮೆಕ್ಕಾ–ಮದೀನಾ ಯಾತ್ರೆಗೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿತ್ತು. ಒಟ್ಟು 45 ಮಂದಿ ಈ ದುರಂತದಲ್ಲಿ ಮೃತಪಟ್ಟಿದ್ದು, ಹೈದರಾಬಾದ್ ನಿಂದ ಪ್ರಯಾಣ ಬೆಳೆಸಿದ್ದ ಮೂರು ತಲೆ ಮಾರಿನ ಒಂದೇ ಕುಟುಂಬದ 18 ಮಂದಿ ಮೃತಪಟ್ಟಿದ್ದರು.
ಹೈದ್ರಾಬಾದ್ ಮೂಲಕ ಸೌದಿಗೆ ಪ್ರಯಾಣಿಸಿದ ರಹಮತ್
ರಹಮತ್ ಬಿ ಅವರು ನವೆಂಬರ್ 9ರಂದು ಬೀದರ್‌ನಿಂದ ಹೈದ್ರಾಬಾದ್‌ಗೆ ತೆರಳಿ, ಅಲ್ಲಿರುವ ತಮ್ಮ ಸಂಬಂಧಿಯೊಂದಿಗೆ ಮೆಕ್ಕಾ ಯಾತ್ರೆಗೆ ಹೊರಟಿದ್ದರು. ಹೈದ್ರಾಬಾದ್‌ನಿಂದ ವಿಮಾನದಲ್ಲಿ ಸೌದಿ ಅರೇಬಿಯಾಕ್ಕೆ ಆಗಮಿಸಿ, ಮೆಕ್ಕಾದಲ್ಲಿ ಸುಮಾರು 8 ದಿನ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದ್ದರು. ಅನಂತರ ಮದೀನಾಗೆ ಭೇಟಿ ನೀಡಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ನಮ್ಮ ಅಜ್ಜಿಯ ಮೃತದೇಹದ ಮಾಹಿತಿ ಸಿಗುತ್ತಿಲ್ಲ
ರಹಮತ್ ಬಿಯವರ ಮರಣವಾರ್ತೆಯ ತಿಳಿಯುತ್ತಿದ್ದಂತೆಯೇ ಬೀದರ್‌ನ ಮೈಲೂರು ನಗರದ ಅವರ ನಿವಾಸದಲ್ಲಿ ಶೋಕ ಮಡಗಟ್ಟಿದೆ. ಕುಟುಂಬಸ್ಥರು ಅಜ್ಜಿಯ ಶವದ ಕುರಿತು ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ ಎಂದು ಆರೋಪಿಸಿ ಕಣ್ಣೀರಿಡುತ್ತಿದ್ದಾರೆ. ಹಜ್ ಸಚಿವ ರಹೀಂಖಾನ್ ವಿರುದ್ಧ ಕುಟುಂಬದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಜ್ ಸಚಿವರೇ ಬೀದರ್ ಜಿಲ್ಲೆಯವರಾಗಿದ್ದರೂ, ನಮ್ಮ ಮನೆಗೆ ಭೇಟಿ ನೀಡಿಲ್ಲ. ಮೃತದೇಹ ತರಿಸುವ ವಿಷಯದಲ್ಲಿ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ಇಡೀ ದಿನ ಬೀದರ್ ಪ್ರವಾಸ ಕೈಗೊಂಡಿದ್ದರೂ, ನಮ್ಮ ಕುಟುಂಬದ ಬಳಿ ಬರದಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ನಮ್ಮ ಮನೆ ಸದಸ್ಯರನ್ನು ಸೌದಿಗೆ ಕಳುಹಿಸಿ, ರಹಮತ್ ಬಿಯವರ ಮೃತದೇಹ ತರಿಸಿಕೊಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ರಹಮತ್ ಬಿಯವರ ಮನೆ ಮುಂದೆ ಜನಸಂದಣಿ ಹೆಚ್ಚಿದೆ. ಶವ ಗುರುತು ಪಡೆಯಲು ಹಾಗೂ ದೇಶಕ್ಕೆ ತರಲು ಎಷ್ಟು ಸಮಯ ಬೇಕಾಗುತ್ತದೆ ಎಂಬ ಸ್ಪಷ್ಟತೆ ಇಲ್ಲದಿರುವುದರಿಂದ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.
ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಬಸ್
ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಬಸ್, ಮದೀನಾದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಹೋಗುತ್ತಿದ್ದಾಗ ಟ್ಯಾಂಕರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಯಿತು. ಈ ದುರಂತದಲ್ಲಿ 45 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ರಹಮತ್ ಬಿಯವರೂ ಅವರಲ್ಲೊಬ್ಬರು. ಅಪಘಾತದ ಭೀಕರತೆ ಎಷ್ಟರ ಮಟ್ಟಿಗೆ ದೊಡ್ಡದು ಎನ್ನುವುದಕ್ಕೆ, ಅನೇಕ ಶವಗಳನ್ನು ಗುರುತಿಸಲಾಗದ ರೀತಿಯಲ್ಲಿ ಸುಟ್ಟು ಕರಕಲಾಗಿತ್ತು.
ಸುಮಾರು 50 ಕುಟುಂಬಸ್ಥರು ಗಲ್ಫ್ ರಾಷ್ಟ್ರಕ್ಕೆ ತೆರಳಲು ಸಿದ್ಧತೆ
ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಹೈದರಾಬಾದ್ ಯಾತ್ರಾರ್ಥಿಗಳ ಸುಮಾರು 50 ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಗಲ್ಫ್ ರಾಷ್ಟ್ರಕ್ಕೆ ತೆರಳಲು ಸಿದ್ಧರಾಗಿದ್ದಾರೆ ಎಂದು ತೆಲಂಗಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತ್ಯಕ್ರಿಯೆ ಗುರುವಾರ ನಡೆಯುವ ಸಾಧ್ಯತೆ ಇದೆ. ತೆಲಂಗಾಣದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮೊಹಮ್ಮದ್ ಅಜರುದ್ದೀನ್ ನೇತೃತ್ವದ ಸರ್ಕಾರಿ ತಂಡ ಸೌದಿ ಅರೇಬಿಯಾಗೆ ತಲುಪಿದೆ. ಅಂತ್ಯಕ್ರಿಯೆ ವ್ಯವಸ್ಥೆ ಹಾಗೂ ಪರಿಹಾರ ಕಾರ್ಯಗಳನ್ನು ಏರ್ಪಡಿಸುವ ಕೆಲಸ ನಡೆಯುತ್ತಿದೆ. ಗುರುತಿಸಲಾಗದ ಶವಗಳನ್ನು ಸಂರಕ್ಷಿಸಲಾಗಿದ್ದು, ಡಿಎನ್ಎ ಪರೀಕ್ಷೆ ಮೂಲಕ ಗುರುತಿಸುವ ಪ್ರಕ್ರಿಯೆ ಮುಂದುವರೆಯಲಿದೆ. ಡಿಎನ್ಎ ಹೊಂದಾಣಿಕೆಯಾದಾಗ ಮಾತ್ರ ಮರಣ ಪ್ರಮಾಣಪತ್ರ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ
- ತೆಲಂಗಾಣ ಸರ್ಕಾರ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದೆ.
- ಸೌದಿ ಸರ್ಕಾರವೂ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನೀಡುವ ಸಾಧ್ಯತೆಯಿದೆ.
- ಮರಣ ಪ್ರಮಾಣಪತ್ರ ಹೊರಡಿಸಲು ಕಂದಾಯ ಇಲಾಖೆ ಸಂಬಂಧಿತ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ.


