ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಉಮ್ರಾ ಯಾತ್ರೆಗೆ ತೆರಳಿದ್ದ ಹುಬ್ಬಳ್ಳಿಯ ಅಬ್ದುಲ್ ಗಣಿ ಶಿರಹಟ್ಟಿ ಎಂಬುವವರು ಮೃತಪಟ್ಟಿದ್ದಾರೆ. ಮೆಕ್ಕಾ-ಮದೀನಾ ಮಾರ್ಗದಲ್ಲಿ ನಡೆದ ಈ ದುರಂತದಲ್ಲಿ 45ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ರಣ ಭೀಕರ ಅಪಘಾತದಲ್ಲಿ ಕರ್ನಾಟಕದ ಓರ್ವ ವ್ಯಕ್ತಿ ಸಾವನ್ನಪ್ಪಿರುವ ವರದಿ ಬಂದಿದೆ. ಹುಬ್ಬಳ್ಳಿಯ ಮೂಲದ ಗಣೇಶ ಪೇಟೆ ನಿವಾಸಿ ಅಬ್ದುಲ್ ಗಣಿ ಶಿರಹಟ್ಟಿ(52) ಮೃತಪಟ್ಟ ದುರ್ದೈವಿ ಆಗಿದ್ದಾರೆ. ಹಲವು ವರ್ಷಗಳಿಂದ ದುಬೈನಲ್ಲಿಯೇ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಗಣಿ ಶಿರಹಟ್ಟಿ ದುಬೈ ನಿಂದ ಉಮ್ರಾ ಯಾತ್ರೆ ಕೈಗೊಂಡು ಭಾರತೀಯಯರಿದ್ದ ಬಸ್ ನಲ್ಲಿಯೇ ತೆರಳಿದ್ದರು. ಕಳೆದ ದಿನ ಮೆಕ್ಕಾನಿಂದಾ ಮಧೀನಾಗೆ ತೆರಳುವ ರಸ್ತೆ ಮಧ್ಯ ಡಿಸೆಲ್ ಟ್ಯಾಂಕರ್ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಮೃತ ಅಬ್ದುಲ್ ಗಣಿ ಓರ್ವ ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಅಪಘಾತದ ಸುದ್ದಿ ತಿಳಿದು ಹುಬ್ಬಳ್ಳಿಯ ಗಣೇಶ ಪೇಟೆಯಲ್ಲಿರುವ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ . ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಮನೆಗೆ ಭೇಟಿ ನೀಡಿದ್ದು, ಸಹಾಯ ಮಾಡುವಂತೆ ಕಾರ್ಮಿಕ ಸಚಿವ ಸಂತೋಷ ಲಾಡ್ ಗೆ ಮನವಿ ಮಾಡಿದ್ದಾರೆ.
ಅಬ್ದುಲ್ ಗಣಿ ನವೆಂಬರ್ 9 ರಂದು ದುಬೈನಿಂದ ಸೌದಿಗೆ ಪ್ರವಾಸ ಹೋಗಿದ್ದರು. ತೆಲಂಗಾಣ ಸ್ನೇಹಿತರು ಉಮ್ರಾಗೆ ಕರೆದ ಕಾರಣ ಅವರೊಟ್ಟಿಗೆ ಬಸ್ ನಲ್ಲಿ ಪ್ರಯಾಣ ಮಾಡಿದ್ದರು. ಮೃತನ ಅಂತ್ಯಸಂಸ್ಕಾರ ಮದೀನಾದಲ್ಲೇ ಮಾಡಲು ನಿರ್ಧಾರ ಮಾಡಲಾಗಿದ್ದು, ಮೃತನ ಕುಟುಂಬಸ್ಥರಿಗೆ ಸಚಿವ ಜಮೀರ್ ವಿಮಾನಯಾನದ ವ್ಯವಸ್ಥೆ ಮಾಡಿದ್ದಾರೆ. ಮೃತನ ಪತ್ನಿ ಹಾಗೂ ಮಕ್ಕಳಿಗೆ ಫ್ಲೈಟ್ ಟಿಕೆಟ್ ಹಾಗೂ ಅಂತ್ಯಸಂಸ್ಕಾರಕ್ಕೆ ಬೇಕಾದ ವ್ಯವಸ್ಥೆ ಮಾಡಿಸಿದ್ದಾರೆ. ಅಬುಧಾಬಿಯ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಡ್ರೈವರ್ ಆಗಿದ್ದ ಅಬ್ದುಲ್ ಗಣಿ ಯಾತ್ರೆಗೆಂದು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕಿಡಾಗಿ ಮೃತಪಟ್ಟಿದ್ದಾರೆ.
45 ಭಾರತೀಯರು ಸಾವು!
ಸೌದಿ ಅರೇಬಿಯಾದ ಮದೀನಾ ಬಳಿ ಸೋಮವಾರ ಬಸ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 45 ಭಾರತೀಯ ಉಮ್ರಾ ಯಾತ್ರಿಕರು ಸಾವನ್ನಪ್ಪಿದ್ದಾರೆ. ಬಸ್ ಬೆಂಕಿಗೆ ಆಹುತಿಯಾದಾಗ ಬಲಿಯಾದವರು ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದರು. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಪ್ರಾಣ ಕಳೆದುಕೊಂಡವರನ್ನು ಗುರುತಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ರಕ್ಷಣಾ ತಂಡಗಳು ಮಾಹಿತಿ ನೀಡಿವೆ. ಮೊಹಮ್ಮದ್ ಅಬ್ದುಲ್ ಶೋಯಬ್ ಎಂಬ ವ್ಯಕ್ತಿ ಬದುಕುಳಿದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಸೌದಿ ಅರೇಬಿಯಾದಲ್ಲಿ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟವರಲ್ಲಿ ಹೈದರಾಬಾದ್ ನಿಂದ ತೆರಳಿದ ಯಾತ್ರಿಕರೇ ಅತೀ ಹೆಚ್ಚು ಬಲಿಯಾಗಿದ್ದು, ಹೈದರಾಬಾದ್ ಮೂಲದ ಒಂದೇ ಕುಟುಂಬದ 18 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಉಮ್ರಾ ಯಾತ್ರಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮೊಹಮ್ಮದ್ ಅಜರುದ್ದೀನ್ ನೇತೃತ್ವದ ಸರ್ಕಾರಿ ಪ್ರತಿನಿಧಿಗಳ ನಿಯೋಗವನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಲು ನಿರ್ಧರಿಸಿದ್ದು, ನಿಯೋಗದಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ನ ಶಾಸಕರು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಯೂ ಇರಲಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸೌದಿ ಅರೇಬಿಯಾದಲ್ಲಿ ಅವರ ಧಾರ್ಮಿಕ ಸಂಪ್ರದಾಯಗಳ ಪ್ರಕಾರ ನಡೆಸಬೇಕೆಂದು ಸಂಪುಟ ನಿರ್ಧರಿಸಿದೆ ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಜೆಡ್ಡಾದ ಭಾರತೀಯ ಕಾನ್ಸುಲೇಟ್ ಜನರಲ್ 24x7 ಸಹಾಯವಾಣಿ 8002440003 ತೆರೆದಿದೆ. ಮೃತ ಕುಟುಂಬಗಳಿಗೆ ನೆರವಾಗಲು +91 7997959754 ಮತ್ತು +91 9912919545 ಸಹಾಯವಾಣಿ ಕೂಡ ನೀಡಲಾಗಿದೆ. ಈ ಭೀಕರ ಅಪಘಾತಕ್ಕೆ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಅನೇಕ ಸಚಿವರು ಸಂತಾಪ ಸೂಚಿಸಿದ್ದಾರೆ.
