ಬೆಳಗಾವಿ(ಫೆ.07): ಕೇಂದ್ರ ಸರ್ಕಾರದ ಸ್ಪಾನ್ಸರ್‌ನಿಂದಲೇ ಜ. 26ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಆರೋಪಿಸಿದ್ದಾರೆ.

ಇಂದು(ಭಾನುವಾರ೦ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬೆಂಬಲಿಗ ನಟನೋರ್ವ ಬಾವುಟ ಹಚ್ಚಿ ಇಷ್ಟೆಲ್ಲಾ ಸಮಸ್ಯೆಗೆ ಕಾರಣನಾಗಿದ್ದಾನೆ. ಉದ್ದೇಶ ಪೂರ್ವಕವಾಗಿ ರೈತರ ಹೋರಾಟ ದಿಕ್ಕು ತಪ್ಪಿಸಲು ಪ್ರಯತ್ನಪಟ್ಟಿದ್ದಾರೆ. ಆದರೂ ಯಶಸ್ವಿಯಾಗಿಲ್ಲ ಜನ ಅದಕ್ಕೆ ಸ್ಪಂದನೆ ಮಾಡಿಲ್ಲ. 100 ಪರ್ಸೆಂಟ್ ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದಲೇ ಹಿಂಸಾಚಾರ ನಡೆದಿದೆ ಎಂದು ಹೇಳಿದ್ದಾರೆ. 

ಪ್ರಧಾನಿ ಜೊತೆ ಆರೋಪಿತ ನಟನ ಫೋಟೋ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಆ ನಟ ಬಿಜೆಪಿ ಕಟ್ಟಾ ಕಾರ್ಯಕರ್ತರಾಗಿದ್ದಾನೆ. ಆತನೇ ಜನ ಕರೆದುಕೊಂಡು ಹೋಗಿ ಇದೆಲ್ಲಾ ಮಾಡಿದ್ದು, ರೈತರ ಹೋರಾಟ ದಿಕ್ಕು ತಪ್ಪಿಸಲು, ರೈತರ ಅಪಪ್ರಚಾರಕ್ಕೆ ಮಾಡಿದ ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ. 

ರೈತರ ಪ್ರತಿಭಟನೆ ಕುರಿತು ವಿದೇಶಿ ಸೆಲೆಬ್ರಿಟಿಗಳು ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ‌, ಬೇರೆ ದೇಶದಲ್ಲಿ ಅನ್ಯಾಯವಾದಾಗ ನಾವು ಧ್ವನಿ ಎತ್ತಿಲ್ವಾ?, ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ದೇಶದ ಸೈನಿಕರು ಹೋಗಿದ್ರು, ಬಾಂಗ್ಲಾದೇಶದಲ್ಲಿ ಅನ್ಯಾಯ ಆದಾಗ ಇಂದಿರಾ ಗಾಂಧಿ ಬೆಂಬಲಿಸಿ ದೇಶ ಸೆಪರೇಟ್ ಮಾಡಿದ್ರು, ಬೇರೆ ದೇಶಗಳಲ್ಲಿ ಅನ್ಯಾಯವಾದಾಗ ನಮ್ಮ ದೇಶದವರು ಸಪೋರ್ಟ್ ಮಾಡಿದ್ದಾರೆ. ನಮ್ಮ ಪ್ರಧಾನಿ ಟ್ರಂಪ್ ಪರವಾಗಿ ಕ್ಯಾನ್ವಾಸ್ ಮಾಡಿಲ್ವಾ?, ಬೇರೆ ದೇಶಕ್ಕೆ ಪ್ರಧಾನಿ ಮೋದಿ ಏಕೆ ಹೋಗಬೇಕು? ನಮ್ಮ ದೇಶದ ಕೆಲವರು ಒತ್ತಡದ ಮೇಲೆ ಟ್ವೀಟ್ ಮಾಡುತ್ತಿದ್ದಾರೆ. ನೀವು ಟ್ವೀಟ್ ಮಾಡಿ ಅಂತ ಕೇಂದ್ರ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಹೇಳಿದ್ದಾರೆ. 

ರೈತರ ಹೋರಾಟ ಪ್ರಾಯೋಜಕತ್ವದ ಹೋರಾಟ ಎಂದ ಬಿಜೆಪಿ ರಾಜ್ಯಸಭಾ ಸದಸ್ಯ

ಸಚಿನ್ ತೆಂಡೂಲ್ಕರ್ ಕಟೌಟ್‌ಗೆ ಮಸಿ ಬಳಿದು ಪ್ರತಿಭಟನೆ ನಡೆಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಸಚಿನ್ ತೆಂಡೂಲ್ಕರ್ ಭಾವಚಿತ್ರಕ್ಕೆ ಮಸಿ ಬಳೆದು ಪ್ರತಿಭಟನೆ ಮಾಡೋದು ಪರಿಹಾರವಲ್ಲ. ಏನಾದರೂ ಒತ್ತಡ ಬಂದ್ರೆ ತಮ್ಮ ಪ್ರಶಸ್ತಿಯನ್ನು ವಾಪಸ್ ಕೊಡಬೇಕು. ಸ್ವಯಂಪ್ರೇರಿತವಾಗಿ ತಮ್ಮ ಪ್ರಶಸ್ತಿಗಳನ್ನು ವಾಪಸ್ ಕೊಡಬೇಕು. ರೈತರು, ದೇಶಕ್ಕಿಂತ ಯಾವುದೇ ಪ್ರಶಸ್ತಿ ದೊಡ್ಡದಲ್ಲ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ಕೃಷಿ ಮಸೂದೆ ವಾಪಸ್‌ಗೆ ಆಗ್ರಹಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಇದಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ತಕ್ಷಣ ಸ್ಪಂದಿಸಬೇಕು. ದೇಶದ ರೈತರೆಲ್ಲರೂ ನೂತನ ಕೃಷಿ ಮಸೂದೆ ವಿರೋಧಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ಹಠ ಹಿಡಿಯುವುದು ಸರಿಯಲ್ಲ ಎಂದಿದ್ದಾರೆ. 

ಕಾಂಗ್ರೆಸ್ ಪ್ರಾಯೋಜಕತ್ವ ಹೋರಾಟ ಅಂತ ಬಿಜೆಪಿಗೆ ಒಂದು ನೆಪ ಅಷ್ಟೇ, ನಾವು ರೈತರ ಹೋರಾಟಕ್ಕೆ ಸಪೋರ್ಟ್ ಮಾಡಿದ್ದೀವಿ ಅಷ್ಟೇ, ಹೋರಾಟದ ರೂಪರೇಷೆ ಮಾಡಿದವರು ರೈತ ಸಂಘಟನೆಗಳು. ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ರೈತರು ಸುಮಾರು ದಿನಗಳಿಂದ ಹೋರಾಟ ಮಾಡ್ತಿದ್ದು, ನಾವು ಇತ್ತೀಚೆಗೆ ಸಪೋರ್ಟ್ ಮಾಡಿದ್ದೇವೆ. ರೈತ ಸಂಘಟನೆಗಳ ಸ್ವಂತ ನಿರ್ಧಾರದ ಪ್ರತಿಭಟನೆ ಇದಾಗಿದೆ ಎಂದು ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.