ಬೆಳಗಾವಿ(ಏ.22): ಮಹಾಮಾರಿ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಗರದ ನಿಷೇಧಿತ ವಲಯದಿಂದ ಹೊರ ಹೋಗುವ, ಒಳ ಬರುವ ಎಲ್ಲ ವಾಹನಗಳನ್ನು ಸ್ಯಾನಿಟೈಜೇಶನ್‌ ಕಾರ್ಯ ಮಾಡಲಾಗುತ್ತಿದೆ.

ನಗರದಲ್ಲಿ 6 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದರಿಂದ, ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ. ನಗರದ ಕ್ಯಾಂಪ್‌ ಪ್ರದೇಶ, ಸಂಗಮೇಶ್ವರ ನಗರ, ಅಮನ ನಗರವನ್ನು ಜಿಲ್ಲಾಡಳಿತ ನಿಷೇಧಿತ ವಲಯವೆಂದು ಘೋಷಣೆ ಮಾಡಿದೆ. ಕಚ್ಚೆಟ್ಟರ ವಹಿಸಿರುವ ಪೊಲೀಸರು ನಿಷೇಧಿತ ವಲಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ನಿಷೇಧಿತ ವಲಯದಲ್ಲಿರುವ ನಿವಾಸಿಗಳು ಅನಗತ್ಯವಾಗಿ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರುತ್ತಿದ್ದಾರೆ.

ಲಾಕ್‌ಡೌನ್‌ ಮಧ್ಯೆ ಪುಣೆಯಿಂದ ಮಗುವಿಗೆ ಮಾತ್ರೆ ತರಿಸಿಕೊಟ್ಟ ಸಚಿವ ಅಂಗಡಿ

ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮುಂಜಾಗ್ರತಾ ಕ್ರಮವಾಗಿ ನಿಷೇಧಿತ ಪ್ರದೇಶಗಳಿಂದ ಹೊರಗೆ ಬರುವ ಹಾಗೂ ಒಳಗೆ ಹೋಗುವ ಪ್ರತಿಯೊಂದು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು, ಅವುಗಳನ್ನು ತಡೆದು ಪಾಲಿಕೆ ಸಿಬ್ಬಂದಿ ಸ್ಯಾನಿಟೈಜೇಶನ್‌ ಕಾರ್ಯವನ್ನು ಮಾಡುತ್ತಿದ್ದಾರೆ.

ಮಹಾಂತೇಶ ನಗರದ ರಸ್ತೆಯಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ವಾಹನಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಜೇಶನ್‌ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಜನರು ಕೂಡ ಸ್ಪಂದಿಸುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ವಾಹನ ಸ್ಯಾನಿಟೈಜೇಶನ್‌ ಮಾಡಿಸಿಕೊಂಡೇ ಅಲ್ಲಿಂದ ಮುಂದೆ ಸಾಗುತ್ತಿದ್ದಾರೆ. ಬೃಹತ್‌ ವಾಹನಗಳು, ಕಾರು, ಬೈಕ್‌ ಸೇರಿದಂತೆ ಎಲ್ಲ ತರಹದ ವಾಹನಗಳನ್ನು ಸ್ಯಾನಿಟೈಜೇಶನ್‌ ಮಾಡಲಾಗುತ್ತಿದೆ.

ಮೊದಲೇ ಕೊರೋನಾ ಸೋಂಕಿನ ಆತಂಕದಲ್ಲಿರುವ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆ ನಗರದ ಎಲ್ಲ ವಾರ್ಡ್‌ಗಳಲ್ಲಿ ಕೀಟನಾಶಕ ಔಷಧವನ್ನು ಸಿಂಪರಣೆ ಮಾಡುವ ಕಾರ್ಯವನ್ನು ಕೈಗೊಂಡಿದೆ. ಜೊತೆಗೆ ಇದೀಗ ರಸ್ತೆಗೆ ಇಳಿಯುವ ವಾಹನಗಳಿಗೂ ಸ್ಯಾನಿಟೈಜೇಶನ್‌ ಕಾರ್ಯವನ್ನು ಮಾಡಲಾಗುತ್ತಿದೆ. ನಗರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಗರಿಕರು ತಮ್ಮ ಮನೆಯಲ್ಲಿಯೇ ಇರುವ ಮೂಲಕ ಕೊರೋನಾ ಸೋಂಕಿನ ವಿರುದ್ಧ ಹೋರಾಡಬೇಕು ಎಂದು ಪಾಲಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ನಿಷೇಧಿತ ವಲಯಗಳಾದ ಕ್ಯಾಂಪ್‌ ಪ್ರದೇಶ, ಸಂಗಮೇಶ್ವರ ನಗರ ಮತ್ತು ಅಮನ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲಾಗಿದೆ.