ಸ್ಯಾಂಡಲ್​​ವುಡ್ ನಟಿಯೊಬ್ಬರ ತಂಗಿ ಮತ್ತು ಆಕೆಯ ಪ್ರಿಯಕರನ ನಡುವಿನ ನಾಲ್ಕು ವರ್ಷಗಳ ಲಿವಿಂಗ್ ರಿಲೇಷನ್‌ಶಿಪ್, 15 ಲಕ್ಷ ರೂಪಾಯಿ ವಂಚನೆ ಆರೋಪದೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಯುವಕ ವಂಚನೆ ದೂರು ನೀಡಿದರೆ, ಯುವತಿ ಲೈಂಗಿಕ ದುರ್ಬಳಕೆ ಆರೋಪದ ಮೇಲೆ ಕೌಂಟರ್ ದೂರು ದಾಖಲಿಸಿದ್ದು, ಇದೀಗ ಪ್ರಿಯಕರ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಬೆಂಗಳೂರು; ಚಿತ್ರರಂಗದ ಗ್ಲಾಮರ್ ಲೋಕದ ಗಲ್ಲಿಗಳಿಂದ ಪ್ರತಿದಿನವೂ ಹೊಸ ಹೊಸ ಕಥೆಗಳು ಹೊರಬರುತ್ತಿರುತ್ತವೆ. ಆದರೆ, ಈ ಬಾರಿ ಸ್ಯಾಂಡಲ್​​ವುಡ್‌ನ ಪ್ರಸಿದ್ಧ ನಟಿಯೊಬ್ಬರ ತಂಗಿ ಮತ್ತು ಅವರ ಪ್ರಿಯಕರನ ನಡುವಿನ ಕಥೆ ಕೋರ್ಟ್ ಹಾಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪ್ರೀತಿಸಿದೆ, ಮದುವೆಯಾಗುತ್ತೇನೆ" ಎಂದು ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾಳೆ ಎಂದು ಯುವಕ ದೂರುತ್ತಿದ್ದರೆ, ಅತ್ತ ಯುವತಿ ನೀಡಿದ 'ಲೈಂಗಿಕ ಕಿರುಕುಳ' ದೂರಿನ ಆಧಾರದ ಮೇಲೆ ಅದೇ ಯುವಕೀಗ ಕಂಬಿ ಎಣಿಸುವಂತಾಗಿದೆ! ಅಷ್ಟಕ್ಕೂ ಈ ಕಥೆಯ ಹಿಂದೆ ನಡೆದಿದ್ದೇನು? ಪ್ರೀತಿಯ ಹೆಸರಿನಲ್ಲಿ ನಡೆದ ಈ ಹೈಡ್ರಾಮಾದ ಅಸಲಿ ಕಥೆ ಇಲ್ಲಿದೆ.

4 ವರ್ಷದ ಲಿವಿಂಗ್ ರಿಲೇಷನ್‌ಶಿಪ್, 15 ಲಕ್ಷ ವಂಚನೆ?

ಬೆಂಗಳೂರಿನ ತಲಘಟ್ಟಪುರದ ನಿವಾಸಿ ರಾಘವೇಂದ್ರ ಮತ್ತು ಸ್ಯಾಂಡಲ್​​ವುಡ್ ನಟಿಯ ತಂಗಿ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು (Living Relationship) ಎಂದು ಹೇಳಲಾಗಿದೆ. ಮದುವೆಯಾಗುವುದಾಗಿ ನಂಬಿಸಿದ್ದ ನಟಿಯ ತಂಗಿ, ರಾಘವೇಂದ್ರ ಅವರೊಂದಿಗೆ ಇದ್ದುಕೊಂಡು ಹಂತ ಹಂತವಾಗಿ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿಸಿ, ಕೊನೆಗೆ ಕೈಕೊಟ್ಟಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಠಾಣೆಗೆ ದೂರು ನೀಡಿದ ರಾಘವೇಂದ್ರ!

ತನಗೆ ಭಾರಿ ಮೊತ್ತದ ಹಣ ವಂಚನೆಯಾಗಿದೆ ಎಂದು ಅರಿತ ರಾಘವೇಂದ್ರ, ಕಳೆದ ಮೇ 19ರಂದು ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಗೆ ತೆರಳಿ ನಟಿಯ ತಂಗಿಯ ವಿರುದ್ಧ ಅಧಿಕೃತವಾಗಿ ದೂರು ನೀಡಿದ್ದರು. ಆದರೆ, ದೂರು ನೀಡಿದ್ದರೂ ಪೊಲೀಸರು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ರಾಘವೇಂದ್ರ ಬಹಿರಂಗವಾಗಿ ಆರೋಪಿಸಿದ್ದರು.

ನಟಿ ತಂಗಿಯಿಂದ 'ಕೌಂಟರ್ ಕಂಪ್ಲೇಂಟ್'; ಕಥೆಗೆ ಬಿಗ್ ಟ್ವಿಸ್ಟ್!

ರಾಘವೇಂದ್ರ ತಲಘಟ್ಟಪುರ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ, ಇತ್ತ ನಟಿಯ ತಂಗಿಯೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಜುಲೈ 7ರಂದು ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ತೆರಳಿದ ಯುವತಿ, ರಾಘವೇಂದ್ರ ವಿರುದ್ಧ ಭಾರಿ ಗಂಭೀರವಾದ 'ಕೌಂಟರ್ ದೂರು' ದಾಖಲಿಸಿದ್ದಾಳೆ. ತನ್ನ ದೂರಿನಲ್ಲಿ, "ರಾಘವೇಂದ್ರ ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ" ಎಂದು ಗಂಭೀರ ಆರೋಪ ಹೊರಿಸಿದಳು. ಯುವತಿಯ ದೂರಿನ ಆಧಾರದ ಮೇಲೆ ಚಂದ್ರಾಲೇಔಟ್ ಪೊಲೀಸರು ನೂತನ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69, 351(2) ಮತ್ತು 351(3) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡರು.

ಬಂಧನ ಭೀತಿಗೆ ಆತ್ಮಹತ್ಯೆಗೆ ಯತ್ನ!

ಯುವತಿ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುತ್ತಿದ್ದಂತೆ, ಬಂಧನದ ಭೀತಿಯಿಂದ ತೀವ್ರ ಆತಂಕಕ್ಕೊಳಗಾದ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಘವೇಂದ್ರ ಅವರನ್ನು ಆಗಸ್ಟ್ 4ರಂದು ಚಂದ್ರಾಲೇಔಟ್ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದುರ್ಬಳಕೆ ಮಾಡಿಕೊಂಡ ಪ್ರಕರಣದಡಿ ರಾಘವೇಂದ್ರ ಅವರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವು ಈಗ ಪೊಲೀಸ್ ತನಿಖೆಯ ಹಂತದಲ್ಲಿದ್ದು, 'ಪ್ರೀತಿಯ ಹೆಸರಿನಲ್ಲಾದ ವಂಚನೆ' ನಿಜವೇ ಅಥವಾ 'ಲೈಂಗಿಕ ದುರ್ಬಳಕೆ' ನಡೆದಿದೆಯೇ ಎಂಬ ಸತ್ಯಾಸತ್ಯತೆ ತನಿಖೆಯ ನಂತರವಷ್ಟೇ ಹೊರಬರಬೇಕಿದೆ.