ಬೆಂಗಳೂರಿನಲ್ಲಿ ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಕೆಲವೆಡೆ ಉಚಿತ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಉಳಿದಂತೆ ಬೈಸಿಕಲ್‌ ಹಾಗೂ ಆಟೋ ನಿಲ್ದಾಣಗಳಿಗೆ ಪಾರ್ಕಿಂಗ್‌ ಶುಲ್ಕ ವಿಧಿಸಿಲ್ಲ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆಗೆ ಸರ್ಕಾರ ತೀಲಾಂಜಲಿ ಆಡಲು ಮುಂದಾಗಿದೆ. ಇಷ್ಟು ದಿನ ಮನೆ ಮುಂದಿನ ರಸ್ತೆಯಲ್ಲಿ ಉಚಿತವಾಗಿ ವಾಹನ ನಿಲ್ಲಿಸುತ್ತಿದ್ದ ಮಾಲೀಕರು ಇನ್ನು ಮುಂದೆ ಪಾರ್ಕಿಂಗ್ ಶುಲ್ಕ ಪಾವತಿ ಮಾಡಬೇಕಿದೆ. ಒಂದೊಮ್ಮೆ ಬಾಡಿಗೆದಾರರಿಗೆ ಪಾರ್ಕಿಂಗ್ಗೆ ಮಾಲೀಕರು ಸ್ಥಳಾವಕಾಶ ನೀಡಿಲ್ಲ ಎಂದರೇ ಮಾಲೀಕರೇ ಅವರ ಪಾರ್ಕಿಂಗ್ ಶುಲ್ಕವನ್ನು ಪಾವತಿ ಮಾಡಬೇಕಿದೆ.

ಹೌದು, ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್‌ ನೀತಿ ಜಾರಿಗೆ ಸಿದ್ಧತೆ ಗ್ರೇಟರ್ ಬೆಂಗಳೂರು ಆಥಾರಿಟಿ ಸಿದ್ಧತೆ ನಡೆಸಿದ್ದು, ಇದರಂತೆ ಪಾರ್ಕಿಂಗ್‌ ವ್ಯವಸ್ಥೆ ಕ್ರಮಬದ್ಧಗೊಳಿಸಲು GBA ಹೊಸ ನೀತಿ ರೂಪಿಸಿದೆ. ಸರ್ಕಾರಿ ನಿಗಮಗಳ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಆಫ್‌ಸ್ಟ್ರೀಟ್‌ ಪಾರ್ಕಿಂಗ್‌ ಬಳಸುವವರಿಗೆ ಮಾಸಿಕ ಪಾಸ್‌ ಪಡೆದುಕೊಳ್ಳಲು ಅವಕಾಶ ನೀಡಿದೆ.

ವಿಶೇಷ ಎಂದರೆ, ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಕೆಲವೆಡೆ ಉಚಿತ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಉಳಿದಂತೆ ಬೈಸಿಕಲ್‌ ಹಾಗೂ ಆಟೋ ನಿಲ್ದಾಣಗಳಿಗೆ ಪಾರ್ಕಿಂಗ್‌ ಶುಲ್ಕ ವಿಧಿಸಿಲ್ಲ. ಖಾಲಿ ನಿವೇಶನಗಳನ್ನು ಪಾರ್ಕಿಂಗ್‌ಗೆ ನೀಡಿದರೆ ಆಸ್ತಿ ತೆರಿಗೆ ವಿನಾಯಿತಿ ಪ್ರಸ್ತಾವನೆ ಮಾಡಲಾಗಿದ್ದು, ಬಾಡಿಗೆದಾರರ ಪಾರ್ಕಿಂಗ್‌ ಶುಲ್ಕ ಮಾಲೀಕರೇ ಭರಿಸಬೇಕು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಬಾಡಿಗೆದಾರರಿಗೆ ಪಾರ್ಕಿಂಗ್‌ ಜಾಗ ಕಲ್ಪಿಸದ ಮಾಲೀಕರಿಗೆ ದಂಡ ವಿಧಿಸುವ ಪ್ರಸ್ತಾವನೆ ಕೂಡ ಇದ್ದು, ಮನೆ ಮುಂದೆ ವಾಹನ ನಿಲುಗಡೆಗೆ ಪಾರ್ಕಿಂಗ್‌ ಶುಲ್ಕ ಪಾವತಿಸುವ ಹೊಣೆ ಮಾಲೀಕರಿಗೆ ನೀಡಲಾಗಿದೆ.

ಆನ್‌ಸ್ಟ್ರೀಟ್‌ ಪಾರ್ಕಿಂಗ್‌ ಕನಿಷ್ಠ ದರ

ಸಿ ಕೆಟಗರಿ:ದ್ವಿಚಕ್ರ ₹20ಲಘು ವಾಹನ₹40–60 ಪ್ರತಿ ಗಂಟೆ
ಬಿ ಕೆಟಗರಿ:ದ್ವಿಚಕ್ರ ₹30ಲಘು ವಾಹನ₹60 ಪ್ರತಿ ಗಂಟೆ
ಎ ಕೆಟಗರಿದ್ವಿಚಕ್ರ ₹40ಲಘು ವಾಹನ₹80 ಪ್ರತಿ ಗಂಟೆ

ಆಫ್‌ಸ್ಟ್ರೀಟ್‌ ಪಾರ್ಕಿಂಗ್‌ ಕನಿಷ್ಠ ದರ

ಸಿ ಕೆಟಗರಿದ್ವಿಚಕ್ರ ₹10ಲಘು ವಾಹನ₹20 ಪ್ರತಿ ಗಂಟೆ
ಬಿ ಕೆಟಗರಿದ್ವಿಚಕ್ರ ₹15ಲಘು ವಾಹನ₹30 ಪ್ರತಿ ಗಂಟೆ
ಎ ಕೆಟಗರಿದ್ವಿಚಕ್ರ ₹20ಲಘು ವಾಹನ₹40 ಪ್ರತಿ ಗಂಟೆ

ಮಾಸಿಕ ಆಫ್‌ಸ್ಟ್ರೀಟ್‌ ಪಾರ್ಕಿಂಗ್‌ ಪಾಸ್‌

ಸಿ ಕೆಟಗರಿದ್ವಿಚಕ್ರ ₹1,000ಲಘು ವಾಹನ₹2,000
ಬಿ ಕೆಟಗರಿದ್ವಿಚಕ್ರ ₹1,500ಲಘು ವಾಹನ₹3,000
ಎ ಕೆಟಗರಿದ್ವಿಚಕ್ರ ₹2,000ಲಘು ವಾಹನ₹4,000

ಇನ್ನು, ಟ್ರಾಫಿಕ್ ಸಮಸ್ಯೆ ನಿವಾರಿಸಲು ಕೆಲವು ಪ್ರದೇಶಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಮೆಟ್ರೋ ಹಾಗೂ ಬಸ್ ನಿಲ್ದಾಣಗಳು. ಮುಖ್ಯ ಸಂಪರ್ಕ ರಸ್ತೆಗಳು. ಟ್ರಾಫಿಕ್ ಸಿಗ್ನಲ್ ಗಳಿಂದ 50 ಮೀಟರ್ ವ್ಯಾಪ್ತಿಯೊಳಗೆ ವಾಹನ ಪಾರ್ಕಿಂಗ್ ಸಂಪೂರ್ಣ ನಿಷೇಧ ಮಾಡಲಾಗಿದೆ. ಉಳಿದರೆ ಮುಖ್ಯ ರಸ್ತೆಗಳ ಪ್ರಮುಖ ಜಂಕ್ಷನ್‌ನಿಂದ 26 ಮೀಟರ್ ವರೆಗೂ ಯಾವುದೇ ವಾಹನ ಪಾರ್ಕಿಂಗ್ ಮಾಡಲು ನಿಷೇಧಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪಾರ್ಕಿಂಗ್ ಪಾಲಿಸಿ ಬಗ್ಗೆ ಡ್ರಾಫ್ಟ್ ಬಿಡುಗಡೆ ಮಾಡಲಾಗಿದೆ. A, B, C ಕೆಟಗರಿ ಆಧಾರದ ಮೇಲೆ ಪಾಲಿಸಿ ಸಿದ್ದಪಡಿಸಲಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು, ಯಾವ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಎನ್ನುವುದನ್ನೂ ಇನ್ನೂ ಅಂತಿಮ ಮಾಡಿಲ್ಲ. ಮನೆ ಮಾಲೀಕರು ಬಾಡಿಗೆದಾರರಿಗೆ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿಕೊಡಬೇಕು. ನಗರದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಈ ತೀರ್ಮಾನ ಮಾಡಲಾಗಿದೆ. ಆಫ್ ಸ್ಟ್ರೀಟ್ ಮತ್ತು ಆನ್ ಸ್ಟ್ರೀಟ್ ಪಾರ್ಕಿಂಗ್ ಎಂದು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಆನ್ ಸ್ಟ್ರೀಟ್ ಪಾರ್ಕಿಂಗ್ ದರದ ಅರ್ಧದಷ್ಟು ದರ ಆಫ್ ಸ್ಟ್ರೀಟ್ ಪಾರ್ಕಿಂಗ್ ನಲ್ಲಿ ಸಂಗ್ರಹಿಸಬೇಕು. ಡಲ್ಟ್, ಸಂಚಾರಿ ಪೊಲೀಸರ ಜತೆ ಚರ್ಚೆ ಮಾಡಿ ಕರಡು ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರಿಂದ ಆಕ್ಷೇಪಣೆ ನೋಡಿಕೊಂಡು ಬದಲಾವಣೆ ಮಾಡಲಾಗುವುದು, ಪಾರ್ಕಿಂಗ್ ಫೀ ಇಟ್ಟಿರುವುದು ಕಾನೂನು ಬದ್ದವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.