ಬೆಂಗಳೂರು ಗಲಭೆ: ಶಾಸಕ ಅಖಂಡ ವಿರುದ್ಧ 3 ತಿಂಗಳಿಂದಲೇ ಮಸಲತ್ತು
ರಾಜಕೀಯ ದ್ವೇಷಕ್ಕೆ ಸಂಪತ್ ರಾಜ್, ಜಾಕೀರ್ ಸಂಚು| ಶಾಸಕರ ಸೋದರಳಿಯನ ವಿವಾದಾತ್ಮಕ ಪೋಸ್ಟ್ ವ್ಯವಸ್ಥಿತವಾಗಿ ಬಳಕೆ| ಜನರ ಆಕ್ರೋಶವನ್ನು ಶಾಸಕರ ವಿರುದ್ಧ ತಿರುಗಿಸಿದ ಮಾಜಿ ಮೇಯರ್| ಸಿಸಿಬಿ ಚಾರ್ಜ್‌ಶೀಟ್‌ನಲ್ಲಿ ಘಟನೆಯ ಬಗ್ಗೆ ಉಲ್ಲೇಖ|
ಬೆಂಗಳೂರು(ಅ.15): ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ಮಸಲತ್ತು ನಡೆಸಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ತಂಡ, ಕ್ಷೇತ್ರದಲ್ಲಿ ಶಾಸಕರ ಹೆಸರು ಕೆಡಿಸಲು ಮೂರು ತಿಂಗಳಿಂದಲೇ ಗಲಾಟೆಗೆ ಸಂಚು ರೂಪಿಸಿತ್ತು ಎಂದು ಸಿಸಿಬಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಈ ಸಂಬಂಧ ಡಿ.ಜೆ.ಹಳ್ಳಿ ಠಾಣಾ ಸರಹದ್ದಿನ ಹಸೀನಾ ಹಾಲ್‌ನಲ್ಲಿ ಸಂಪತ್ ರಾಜ್ ಹಾಗೂ ಪುಲಿಕೇಶಿ ನಗರ ವಾರ್ಡ್ ಮಾಜಿ ಕಾರ್ಪೋರೇಟರ್ ಅಬ್ದುಲ್ ಜಾಕೀಬ್ ಜಾಕೀರ್ ಸೇರಿದಂತೆ ಶಾಸಕರ ರಾಜಕೀಯ ವಿರೋಧಿಗಳು ಸಭೆ ನಡೆಸಿದ್ದರು. ಕೊನೆಗೆ ಶಾಸಕರ ವಿರುದ್ಧ ಸೇಡಿ ತೀರಿಸಿಕೊಳ್ಳಲು ಅವರ ಸೋದರಳಿಯ ನವೀನ್ ವಿವಾದಾತ್ಮಕ ಪೋಸ್ಟ್ ಪ್ರಕರಣವನ್ನು ಸಂಪತ್ ರಾಜ್ ಗುಂಪು ವ್ಯವಸ್ಥಿತವಾಗಿ ಬಳಸಿಕೊಂಡಿದೆ ಎಂದು ಸಿಸಿಬಿ ಹೇಳಿದೆ.
ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ದಿನ ಶಾಸಕರ ಮನೆ ಮತ್ತು ಕಚೇರಿಗೆ ಬೆಂಕಿ ಹಾಕಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಭಯೋತ್ಪಾದನೆ ನಿಗ್ರಹ ದಳ, ನ್ಯಾಯಾಲಯಕ್ಕೆ ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಕಾರ್ಪೋರೇಟರ್ ಜಾಕೀರ್ ಸೇರಿದಂತೆ 60 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದೆ.
ಮುಸ್ಲಿಂರ ಕಿಚ್ಚಿಗೆ ಸಂಪತ್ ತುಪ್ಪ:
ನಗರದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ತ್ರಿವಳಿ ತಲಾಖ್ ರದ್ದು, ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನ, ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಅಡ್ಡಿಗಲ್ಲು ಕಾರ್ಯಕ್ರಮಗಳನ್ನು ವಿರೋಧಿಸಿ ಗಲಭೆ ಮಾಡಲು ಕೆಲವು ಮತೀಯ ಸಂಘಟನೆಗಳು ಸಜ್ಜಾಗಿದ್ದವು. ಈ ಸಂಬಂಧ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಗುಪ್ತ ಸಭೆಗಳನ್ನು ಸಂಘಟಿಸಿದ್ದ ಆ ಸಂಘಟನೆಗಳು, ಜನರಲ್ಲಿ ಸರ್ಕಾರದ ವಿರುದ್ಧ ದ್ವೇಷ ಭಾವನೆಯನ್ನು ಮೂಡಿಸಿದ್ದವು. ಹೀಗಿರುವಾಗ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರ ಸಂಬಂಧಿ ನವೀನ್, ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ವಿರುದ್ಧ ಪೋಸ್ಟ್ ಮಾಡಿದ್ದು ಮತ್ತಷ್ಟು ಸಿಟ್ಟು ತಂದಿದೆ.
ಬೆಂಗಳೂರು ಗಲಭೆ: ಸ್ವಪಕ್ಷದವರೇ ಮನೆಗೆ ಬೆಂಕಿ, ಕಾಂಗ್ರೆಸ್ ಶಾಸಕ ಅಖಂಡ ನೋವು
ಈ ಪರಿಸ್ಥಿತಿ ಲಾಭ ಪಡೆದ ಶಾಸಕರ ರಾಜಕೀಯ ವಿರೋಧಿಗಳು, ಮುಸ್ಲಿಂ ಸಮುದಾಯವನ್ನು ಶಾಸಕರ ವಿರುದ್ಧ ಎತ್ತಿ ಕಟ್ಟಿದ್ದಾರೆ. ನವೀನ್ ಮಾಡಿದ್ದ ಫೋಸ್ಟನ್ನು ಸ್ಕ್ರೀನ್ ಶಾಟ್ ತೆಗೆದು ಮತೀಯವಾದಿಗಳ ವಾಟ್ಸ್‌ಅಪ್ ಗ್ರೂಪ್‌ಗಳಿಗೆ ಕಳುಹಿಸಿ ಪ್ರಚೋದನೆ ನೀಡಿದ್ದರು ಎಂದು ಸಿಸಿಬಿ ಆರೋಪ ಪಟ್ಟಿಯಲ್ಲಿ ಹೇಳಿದೆ.
50 ಲಕ್ಷ ಲೂಟಿ
ಶಾಸಕರ ಮನೆ ಮತ್ತು ಕಚೇರಿಗೆ ಬೆಂಕಿ ಹಾಕಿ ಸುಡುವ ಮುನ್ನ ದುಷ್ಕರ್ಮಿಗಳು, ಶಾಸಕರ ಮನೆಯಲ್ಲಿ .11.50 ಲಕ್ಷ ನಗದು ಮತ್ತು .50 ಲಕ್ಷ ಬೆಲೆ ಬಾಳುವ ಚಿನ್ನಾಭರಣವನ್ನು ದೋಚಿದ್ದರು. ಅಲ್ಲದೆ, ಒಂದೇ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಮನೆ, ಅಂಗಡಿ ಮತ್ತು ವಾಹನಗಳ ಮೇಲೆ ದಾಳಿ ನಡೆಸಿ ಪೆಟ್ರೋಲ್ ಸುರಿದು ಆರೋಪಿಗಳು ಬೆಂಕಿ ಹಚ್ಚಿದ್ದರು ಎಂದು ಸಿಸಿಬಿ ದೋಷಾರೋಪಪಟ್ಟಿಯಲ್ಲಿ ಹೇಳಿದೆ
ಶಾಸಕ ಅಖಂಡ ಅವರೇ ಸಾಕ್ಷಿ ನಂ.1
ತಮ್ಮ ಮನೆ ಮತ್ತು ಕಚೇರಿ ಮೇಲಿನ ದಾಳಿ ಕೃತ್ಯಕ್ಕೆ ಶಾಸಕ ಶ್ರೀನಿವಾಸಮೂರ್ತಿ ಅವರನ್ನೇ ಪ್ರಕರಣದ ಮೊದಲ ಸಾಕ್ಷಿಯಾಗಿ ಸಿಸಿಬಿ ಪರಿಗಣಿಸಿದೆ. ಸಿಸಿಬಿ ಮುಂದೆ ತಮ್ಮ ವಿರುದ್ಧ ಸ್ವಪಕ್ಷೀಯರಿಂದಲೇ ರಾಜಕೀಯ ಷಡ್ಯಂತ್ರ ನಡೆದಿತ್ತು. ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಕಾರ್ಪೋರೇಟರ್‌ಗಳಾದ ಜಾಕೀರ್ ಹಾಗೂ ಮುನೇಶ್ವರ ನಗರ ವಾರ್ಡ್‌ನ ಸೈಯದ್ ಸಾಜೀದಾ ಪತಿ ಸೈಯದ್ ನಾಸಿರ್ ಸೇರಿದಂತೆ ಇತರರು ಗಲಭೆ ಸಂಚು ರೂಪಿಸಿದ್ದರು ಎಂದು ಶಾಸಕರು ಸಾಕ್ಷ್ಯ ನುಡಿರುವುದಾಗಿ ತಿಳಿದು ಬಂದಿದೆ.