ಸಾರಿಗೆ ಸಿಬ್ಬಂದಿಗೆ ದಸರಾ ಒಳಗೆ ವೇತನ: ಸಚಿವ ಶ್ರೀರಾಮುಲು
* ಆನೆಗೊಂದಿಯ ದುರ್ಗಾಬೆಟ್ಟದಲ್ಲಿ ಸರ್ಕಾರದಿಂದ ಗೋ ಶಾಲೆ ನಿರ್ಮಾಣ
* ಕೊರೋನಾ ಸಂದರ್ಭದಲ್ಲಿ ತೊಂದರೆಗೆ ಈಡಾಗಿದ್ದ ಸಾರಿಗೆ ಸಿಬ್ಬಂದಿ
* ಕುಮಾರಸ್ವಾಮಿ ಸುಸಂಸ್ಕೃತರು
ಗಂಗಾವತಿ(ಅ.07): ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ದುರ್ಗಾಬೆಟ್ಟದಲ್ಲಿರುವ ಪ್ರದೇಶದಲ್ಲಿ ಸರ್ಕಾರದಿಂದ ಗೋ ಶಾಲೆ ನಿರ್ಮಿಸಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಹೇಳಿದ್ದಾರೆ.
ತಾಲೂಕಿನ ಆನೆಗೊಂದಿಯ(Anegondi) ಮೇಗೋಟಿಯ ದುರ್ಗಾ ಬೆಟ್ಟದಲ್ಲಿರುವ ದುರ್ಗಾದೇವಿಗೆ ಹಮ್ಮಿಕೊಳ್ಳಲಾಗಿದ್ದ ಹೋಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತವಾಗಿ ದುರ್ಗಾ ಬೆಟ್ಟದ ಪ್ರದೇಶದಲ್ಲಿರುವ ಗೋಶಾಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗೋವುಗಳಿದ್ದು, ಇನ್ನೂ ಹೆಚ್ಚಿನ ಗೋವುಗಳು ಬರುತ್ತವೆ. ಈ ಕಾರಣಕ್ಕೆ ಸರ್ಕಾರ ಜಿಲ್ಲೆಗೊಂದು ಗೋಶಾಲೆ ನಿರ್ಮಾಣದ ಹಿನ್ನೆಲೆಯಲ್ಲಿ ಸರ್ಕಾರದಿಂದ ಇಲ್ಲಿಯೇ ಗೋಶಾಲೆ ನಿರ್ಮಿಸಲಾಗುತ್ತದೆ ಎಂದರು.
ಗೋವುಗಳಿಗೆ ಮೇವು ಸೇರಿದಂತೆ ಕುಡಿಯುವ ನೀರಿನ ಸೌಲಭ್ಯ ಬೇಕಾಗುತ್ತದೆ. ಈ ಕಾರಣಕ್ಕೆ ಸರ್ಕಾರದ ನೀತಿ, ನಿಯಮಗಳನ್ನು ನೋಡಿಕೊಂಡು ಜಮೀನು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ಪದೇ ಪದೇ ಅತಿವೃಷ್ಟಿ, ಅನಾವೃಷ್ಟಿಗಳು ಆಗುತ್ತಿರುವುದರಿಂದ ದನ- ಕರುಗಳಿಗೆ ಮೇವಿನ ಕೊರತೆಯಾಗದಂತೆ ಸರ್ಕಾರ ಕೂಡಲೆ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.
KSRTC ನೌಕರರಿಗೆ ಇನ್ನೂ ಸಿಕ್ಕಿಲ್ಲ ಆಗಸ್ಟ್‌ನ ಬಾಕಿ ಅರ್ಧ ಸಂಬಳ
ದುರ್ಗಾಬೆಟ್ಟದಲ್ಲಿರುವ ದುರ್ಗಾದೇವಿ ದೇವಸ್ಥಾನ ಮತ್ತು ಪಂಪಾಸರೋವರ ದೇವಸ್ಥಾನಗಳು ಪ್ರಸಿದ್ಧಿ ಪಡೆದಿದೆ. ತಮ್ಮ ಸ್ವಂತ ಖರ್ಚಿನಿಂದ ದೇವಸ್ಥಾನಗಳನ್ನು ನವೀಕರಣಗೊಳಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ಅವರು ಪಂಪಾಸರೋವರದಲ್ಲಿ ವಿಜಯಲಕ್ಷ್ಮೇ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ ಸುಸಂಸ್ಕೃತರು:
ದೇಶದಲ್ಲಿರುವುದು ಚುನಾಯಿತ ಸರ್ಕಾರ ಅಲ್ಲ ಆರ್‌ಎಸ್‌ಎಸ್‌ನಿಂದ(RSS) ನಿಯಂತ್ರಿಸುವ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.
ಮಾಜಿ ಪ್ರಧಾನಿಯ ಪುತ್ರರಾಗಿರುವ ಕುಮಾರಸ್ವಾಮಿ ಅವರು ಸುಸಂಸ್ಕೃತರಾಗಿದ್ದಾರೆ. ಅವರ ಬಾಯಿಯಿಂದ ಇಂತಹ ಶಬ್ದಗಳು ಬರಬಾರದಿತ್ತು. ಯಾರದ್ದೋ ಮಾತು ಕೇಳಿ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು. ಆರ್‌ಎಸ್‌ಎಸ್ ಶಿಸ್ತಿನ ಸಂಸ್ಥೆಯಾಗಿದೆ. ಇದರ ನೀತಿ, ನಿಯಮಗಳೇ ಬೇರೆ ಇರುತ್ತವೆ. ಇಂತಹ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರ ಬಾಯಲ್ಲಿ ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಸಾರಿಗೆ ಸಿಬ್ಬಂದಿಗೆ ದಸರಾ ಒಳಗೆ ವೇತನ:
ದಸರಾ(Dasara) ಹಬ್ಬದ ಒಳಗೆ ಸಾರಿಗೆ ಸಿಬ್ಬಂದಿಗಳಿಗೆ(KSRTC) ವೇತನ ನೀಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದರು. ಈಗಾಗಲೇ ಸಿಬ್ಬಂದಿಗಳ ಸಂಕಷ್ಟ ಗೊತ್ತಾಗಿದೆ. ಕೊರೋನಾ ಸಂದರ್ಭದಲ್ಲಿ ತೊಂದರೆಗೆ ಈಡಾಗಿದ್ದಾರೆ. ಈಗಾಗಲೇ ಕೆಲ ತಿಂಗಳ ವೇತನ(Salary) ನೀಡಲಾಗಿದ್ದು, ದಸರಾ ಹಬ್ಬದೊಳಗೆ ಉಳಿದ ವೇತನ ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ ಕೆಲೋಜಿ ಇದ್ದರು.