KSRTC ನೌಕರರಿಗೆ ಇನ್ನೂ ಸಿಕ್ಕಿಲ್ಲ ಆಗಸ್ಟ್‌ನ ಬಾಕಿ ಅರ್ಧ ಸಂಬಳ
* 50% ಪಾವತಿಸಿ ಅರ್ಧ ಬಾಕಿ ಉಳಿಸಿರುವ ಸರ್ಕಾರ
* ದಸರಾ ಆಚರಣೆಗೆ ಹಣವಿಲ್ಲದೆ ನೌಕರರಿಗೆ ಸಮಸ್ಯೆ
* ಕೊರೋನಾದಿಂದ ಸಾರಿಗೆ ಆದಾಯದಲ್ಲಿ ಕುಸಿತ
ಬೆಂಗಳೂರು(ಅ.03): ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ(KSRTC) ನೌಕರರಿಗೆ ಅಕ್ಟೋಬರ್ ಬಂದರೂ ಆಗಸ್ಟ್ ತಿಂಗಳ ಬಾಕಿ ಶೇ.50ರಷ್ಟು ವೇತನ ಬಿಡುಗಡೆಯಾಗಿಲ್ಲ.
ಕೊರೋನಾ(Coronavirus) ಆರಂಭವಾದಾಗಿನಿಂದ ನೌಕರರ ವೇತನ ಬಿಡುಗಡೆಯಲ್ಲಿ ಏರುಪೇರಾಗುತ್ತಿದೆ. ಕಳೆದ ಒಂದು ವರ್ಷದಿಂದ ನಿಗದಿತ ದಿನಕ್ಕೆ ವೇತನ ಸಿಗುತ್ತಿಲ್ಲ. ಜುಲೈ ತಿಂಗಳ ವೇತನವನ್ನು ಆಗಸ್ಟ್ ಕೊನೆಯ ವಾರದಲ್ಲಿ ಪಾವತಿಸಲಾಗಿತ್ತು. ಆಗಸ್ಟ್ ತಿಂಗಳ ಶೇ.50ರಷ್ಟು ವೇತನವನ್ನು ಗೌರಿ-ಗಣೇಶ ಹಬ್ಬಕ್ಕೂ ಮುನ್ನ ಬಿಡುಗಡೆಗೊಳಿಸಲಾಗಿತ್ತು. ಈಗ ಅಕ್ಟೋಬರ್ ಬಂದರೂ ಆಗಸ್ಟ್ ತಿಂಗಳ ಬಾಕಿ ಶೇ.50ರಷ್ಟುವೇತನ ನೀಡಿಲ್ಲ. ಇದೀಗ ಮಹಾಲಯ ಅಮಾವಾಸ್ಯೆ, ದಸರಾ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ನೌಕರರಿಗೆ ಹಣದ ಅಗತ್ಯವಿದೆ. ಹೀಗಾಗಿ ಆಗಸ್ಟ್ ಬಾಕಿ ಹಾಗೂ ಸೆಪ್ಟೆಂಬರ್ ತಿಂಗಳ ವೇತನ ಸೇರಿದಂತೆ ಒಟ್ಟು ಒಂದೂವರೆ ತಿಂಗಳ ವೇತನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಸಾರಿಗೆ ನೌಕರರ ಮುಖಂಡ ಆನಂದ್ ಒತ್ತಾಯಿಸಿದ್ದಾರೆ.
ವಜಾಗೊಂಡ ಸಾರಿಗೆ ನೌಕರರ ಮರುನೇಮಕ: ಸಚಿವ ಶ್ರೀರಾಮುಲು ಹೇಳಿದ್ದಿಷ್ಟು
ಕೊರೋನಾದಿಂದ ಸಾರಿಗೆ ಆದಾಯ ಕುಸಿತವಾಗಿ ಆರ್ಥಿಕ ಸಮಸ್ಯೆಗೆ ಸಿಲುಕಿರುವ ನಾಲ್ಕು ರಸ್ತೆ ಸಾರಿಗೆ ನಿಗಮಗಳು, ಪ್ರತಿ ತಿಂಗಳು 1.30 ಲಕ್ಷ ನೌಕರರಿಗೆ ವೇತನ(Salary) ನೀಡಲು ಸರ್ಕಾರದ ನೆರವಿಗೆ ಎದುರು ನೋಡುವಂತಾಗಿದೆ. ಆಗಸ್ಟ್ ತಿಂಗಳ ಶೇ.50ರಷ್ಟು ಬಾಕಿ ವೇತನ ಹಾಗೂ ಸೆಪ್ಟೆಂಬರ್ ತಿಂಗಳ ವೇತನಕ್ಕಾಗಿ ಅನುದಾನ ನೀಡುವಂತೆ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಸರ್ಕಾರಕ್ಕೆ ಮನವಿ ಮಾಡಿವೆ. ಸರ್ಕಾರ ಅನುದಾನ ನೀಡಿದರಷ್ಟೇ ದಸರಾ ಹಬ್ಬಕ್ಕೂ ಮುನ್ನ ನೌಕರರಿಗೆ ವೇತನ ಕೈಸೇರಲಿದೆ.