ಬೆಂಗಳೂರು [ಅ.15]:  ಸಕಾಲ ಸೇವೆ ಕಲ್ಪಿಸುವಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿರುವ ಬೆಂಗಳೂರು ನಗರ ಜಿಲ್ಲೆಯು ನವೆಂಬರ್‌ ತಿಂಗಳೊಳಗೆ ಮೊದಲ ಹತ್ತು ಸ್ಥಾನದೊಳಗೆ ಗುರುತಿಸಿಕೊಳ್ಳುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಕಾಲ ಸಚಿವ ಎಸ್‌. ಸುರೇಶ್‌ಕುಮಾರ್‌ ಸೂಚನೆ ನೀಡಿದರು.

ಬೆಂ.ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಯಾವ ಜಿಲ್ಲೆಗಳು ಎಷ್ಟರಮಟ್ಟಿಗೆ ಸಕಾಲ ಸೇವೆ ಮಾಡುತ್ತಿವೆ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅದರಂತೆ ಬೆಂ.ನಗರ ಜಿಲ್ಲೆಯ ಕೊನೆಯ ಸ್ಥಾನದಲ್ಲಿದೆ. ಇನ್ನು ಮುಂದೆ ಪ್ರತಿ ತಿಂಗಳು ಪರಿಶೀಲನೆ ನಡೆಸಿ ರಾರ‍ಯಂಕ್‌ ನೀಡಲಾಗುತ್ತದೆ ಎಂದು ಹೇಳಿದರು.

ಸಕಾಲ ಸೇವೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಮಾಹಿತಿಗಳು ನಿಖರವಾಗಿಲ್ಲ ಎಂಬ ಮಾಹಿತಿಯನ್ನು ಫಲಾನುಭವಿಗಳಿಗೆ ಸೇವೆ ಕಲ್ಪಿಸಬೇಕಿರುವ ಕೊನೇ ದಿನ ತಿಳಿಸುತ್ತಿದ್ದಾರೆ. ಇದರಿಂದ ಸೇವೆಗೆ ಹಿನ್ನಡೆಯಾಗಿದೆ. ಇನ್ನೂ ಕೆಲವು ಅಧಿಕಾರಿಗಳಿಗೆ ಸಕಾಲ ಯೋಜನೆ ಮಹತ್ವವೇ ತಿಳಿದಿಲ್ಲ. ಹೀಗಾಗಿ, ಕಾರ್ಯಾಗಾರ ಆಯೋಜಿಸಿ ಮಾಹಿತಿ ನೀಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಅಧಿಕಾರಿಯು ಏಳು ಬಾರಿ ಸೇವೆ ಕಲ್ಪಿಸಿಲ್ಲ ಎಂದರೆ ಒಂದು ‘ಡಿಫಾಲ್ಟ್‌’ ಎಂದು ಗುರುತಿಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ 348 ಡಿಫಾಲ್ಟ್‌ ಪ್ರಕರಣಗಳಿವೆ. ಸಕಾಲ ಆರಂಭವಾದ ಏಳು ವರ್ಷಗಳಲ್ಲಿ ಒಟ್ಟಾರೆ 63,90,648 ಅರ್ಜಿಗಳು ದಾಖಲಾಗಿವೆ. ಈ ಪೈಕಿ 63,40,199 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮಾಸಿಕ ಸರಾಸರಿ 80,601 ಅರ್ಜಿಗಳು ದಾಖಲಾಗುತ್ತಿವೆ. ಬೆಂಗಳೂರು ಮಹಾನಗರಕ್ಕೆ ಇದು ತುಂಬಾ ಕಡಿಮೆ ಪ್ರಮಾಣದ ಅರ್ಜಿಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂದಿನ 8-10 ದಿನಗಳಲ್ಲಿ ರಾಜ್ಯಾದ್ಯಂತ ಯಾವ ಜಿಲ್ಲೆಯ ಎಷ್ಟನೇ ಸ್ಥಾನದಲ್ಲಿದೆ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು. ಸಕಾಲವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಜಿಲ್ಲೆಗಳ ರಾರ‍ಯಂಕಿಂಗ್‌ ಪಟ್ಟಿಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

‘ಜನಸೇವಕ’ನಿಗೆ ಉತ್ತಮ ಪ್ರತಿಕ್ರಿಯೆ

ದೆಹಲಿ ಮಾದರಿಯಲ್ಲಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಕಾಲ ಯೋಜನೆಯಡಿ ಜಾರಿಗೊಳಿಸಿದ್ದ ‘ಜನ ಸೇವಕ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಚಿವ ಸುರೇಶ್‌ ಕುಮಾರ್‌ ಇದೇ ವೇಳೆ ತಿಳಿಸಿದರು.

ಪ್ರಾಯೋಗಿಕವಾಗಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯೋಜನೆ ಜಾರಿಗೊಳಿಸಲಾಗಿದೆ. ಸರ್ಕಾರದ ಪ್ರತಿನಿಧಿಗಳೇ ಖುದ್ದಾಗಿ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು ನಂತರ ಸಂಬಂಧ ಪ್ರಮಾಣಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವುದೇ ಜನಸೇವಕ ಯೋಜನೆ ಈ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ. ‘ಜನ ಸೇವಕ’ ಯೋಜನೆ ಸಹಾಯವಾಣಿ 080 44554455 ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ. ಈ ನಂಬರಿಕೆ ಕರೆ ಮಾಡಿ ತಮ್ಮ ಮನೆ ವಿಳಾಸ ಹಾಗೂ ತಮಗೆ ಅವಶ್ಯವಿರುವ ಸೇವೆಯನ್ನು ದಾಖಲಿಸಿದರೆ, ಸರ್ಕಾರದ ಪ್ರತಿನಿಧಿಗಳು ತಮ್ಮ ಮನೆ ಬಾಗಿಲಿಗೆ ಬಂದು ಮಾಹಿತಿ ಪಡೆಯಲಿದ್ದಾರೆ. ನಂತರ ನಿಗದಿಪಡಿಸಿರುವ ಕಾಲಮಿತಿಯೊಳಗೆ ಸೇವೆಯನ್ನು ನೀಡಲಿದ್ದಾರೆ. ಸೇವೆಗೆ ತಗಲುವ ಶುಲ್ಕದ ಜತೆಗೆ ಮನೆಬಾಗಿಲಿನ ಸೇವೆಗಾಗಿ 115 ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿದರೆ ಸೇವೆ ದೊರೆಯಲಿದೆ ಎಂದು ತಿಳಿಸಿದರು.