ಉಡುಪಿ-ಚಿಕ್ಕಮಗಳೂರು 8 ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ
ಉಡುಪಿ ಚಿಕ್ಕಮಗಳೂರು 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು ಮತ್ತು ಕಳೆದ ಬಾರಿಗಿಂತ ಹೆಚ್ಚಿನ ಮತದಾನ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ.26): ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಇಂದು 8 ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಒಂದೆರಡುಕಡೆ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಸಣ್ಣ ಪುಟ್ಟ ಲೋಪ ಕಂಡುಬಂದಿದ್ದು ಹೊರತು ಪಡಿಸಿದರೆ ಉಳಿದಂತೆ ಸುಸೂತ್ರವಾಗಿ ತೆರೆಕಂಡಿದೆ. ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನಿಂದಲೇ ಆರಂಭವಾದ ಮತದಾನ ಮಧ್ಯಾಹ್ನದ ವರೆಗೂ ಹಾಗೆಯೇ ಮುಂದುವರಿದಿತ್ತು. ಹೊತ್ತೇರಿದಂತೆ ಬಿಸಿಲ ಧಗೆ ನೆತ್ತಿ ಸುಡಲಾರಂಭಿಸಿದ ಹಿನ್ನೆಲೆಯಲ್ಲಿ ಮತ ಕೇಂದ್ರದ ಕಡೆ ಬರುವವರ ಸಂಖ್ಯೆ ಕ್ಷೀಣಿಸಲಾರಂಭಿಸಿತು.ತದನಂತರ ಸಂಜೆ ಹೊತ್ತಿಗೆ ಮತ್ತೆ ಬಿರುಸು ಪಡೆದುಕೊಂಡಿತ್ತು. ಕಳೆದ ಲೋಕಸಭಾ ಚುನಾವಣೆಗಿಂತ ದಾಖಲೆ ಪ್ರಮಾಣದಲ್ಲಿ ಮತದಾನದ ಆಗಿದೆ.
8 ವಿಧಾನಸಭಾ ಕ್ಷೇತ್ರದಲ್ಲೂ ಶಾಂತಿಯುತ ಮತದಾನ
ಮುಂಜಾನೆದ ನಂತರ ಬಿಸಿಲ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಮಂದಗತಿಯಲ್ಲಿ ಸಾಗಲಾರಂಭಿಸಿತು. ಬೆಳಗ್ಗೆ ಉದ್ದನೇ ಸರತಿ ಸಾಲು ಕಂಡು ಬಂದಿದ್ದ ಬೂತ್ಗಳಲ್ಲಿ ಮಧ್ಯಾಹ್ನದ ವೇಳಗೆ ಆಗೊಬ್ಬರು, ಈಗೊಬ್ಬರು ಆಗಮಿಸಿ ಹಕ್ಕು ಚಲಾಯಿಸಲಾರಂಭಿಸಿದರು. 4 ಗಂಟೆ ವರೆಗೆ ಇದೇ ರೀತಿ ನೀರಸ ಪ್ರತಿಕ್ರಿಯೆ ಕಂಡು ಬಂತು. 4 ಗಂಟೆ ನಂತರ ಮತದಾನ ಮತ್ತೆ ಚುರುಕುಪಡೆಯಿತು. ಬರದಿಂದ ತತ್ತರಿಸಿದ್ದ ಗ್ರಾಮೀಣ ಭಾಗದಲ್ಲಿ ನಾಲ್ಕೈದು ದಿನಗಳ ಹಿಂದೆ ಹದ ಮಳೆ ಸುರಿದಿದ್ದ ಹಿನ್ನೆಲೆಯಲ್ಲಿ ಕೊಂಚ ಸಮಾಧಾನದಿಂದಲೇ ರೈತಾಪಿ ಜನರು ಹಕ್ಕು ಚಲಾಯಿಸಲು ಬಂದಿದ್ದರು. ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಕೆಲವರು ಬೇಸಾಯಕ್ಕೆ ತೆರಳಿದ್ದಾರೆ ಮಧ್ಯಾಹ್ನದ ನಂತರ ಮತ ಹಾಕಲು ಬರುತ್ತಾರೆ ಎಂದು ಹಿರೇಗೌಜದ ರೈತ ನಾರಾಯಣಗೌಡ ತಿಳಿಸಿದರು.ನಗರ, ಪಟ್ಟಣ ಪ್ರದೇಶಗಳಲ್ಲೂ ಬಹುತೇಕ ಬೂತ್ಗಳಲ್ಲಿ ಸರತಿ ಸಾಲು ಕಂಡುಬಂತು. ಬೆಳಗಿನಿಂದ ಮಧ್ಯಾಹ್ನದ ವರೆಗೆ ಉತ್ಸಾಹದಿಂದ ಮತದಾನ ನಡೆಯಿತು. ಬಿರು ಬಿಸಿಲಿನ ಕಾರಣಕ್ಕೆ ಮಧ್ಯಾಹ್ನದ ವೇಳೆಗೆ ಮತದಾನ ಬಿರುಸು ಕಳೆದುಕೊಂಡಿತ್ತು.2014ರಲ್ಲಿ 74ಷ್ಟು ಮತದಾನ, 2019ರಲ್ಲಿ 76 ರಷ್ಟು ಮತದಾನವಾಗಿತ್ತು. ಈ ಭಾರೀ ಸಂಜೆ 6 ಗಂಟೆ ವರೆಗೂ ದಾಖಲೆಯ ಪ್ರಮಾಣದಲ್ಲಿ 77 .17 ರಷ್ಟು ಮತದಾನವಾಗಿತ್ತು.
ಕಾರ್ಯಕರ್ತರ ನಿರುತ್ಸಾಹ
ಇತರೆ ಸಾರ್ವತ್ರಿಕ ಚುನಾವಣೆಗಳಲ್ಲಿ ಇರುವಂತೆ ಈ ಚುನಾವಣೆಯಲ್ಲಿ ಗ್ರಾಮಾಂತರ ಭಾಗದ ಯಾವುದೇ ಮತಗಟ್ಟೆಗಳ ಬಳಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಗುಂಪುಗೂಡುವಿಕೆಯಾಗಲಿ, ಪೈಪೋಟಿಯ ಮೇಲೆ ಮತದಾರರನ್ನು ಓಲೈಸುವ ಪ್ರಯತ್ನಗಳಾಗಲಿ ಹಾಗೂ ಬಿಗುವಿನ ವಾತಾವರಣವಾಗಲಿ ಎಲ್ಲೂ ಕಂಡು ಬರಲಿಲ್ಲ. ಆದರೆ ಮತದಾರರು ಮಾತ್ರ ಯಾವ ಸಮಸ್ಯೆಯೂ ಇಲ್ಲದೆ ಉತ್ಸಾಹದಿಂದಲೇ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.
ಮೊದಲ ಮತದಾನದ ಪುಳಕ
ಲಕ್ಯ ಗ್ರಾಮದದಲ್ಲಿ ಎಲ್.ಸ್ನೇಹ ಎಂಬ ಯುವತಿ ಮೊದಲ ಬಾರಿ ಮತ ಹಾಕಿದ ಸಂಭ್ರಮದಲ್ಲಿದ್ದರು. ಮತಗಟ್ಟೆ ಬಳಿ ಎದುರಾದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು ಪ್ರತಿಯೊಂದು ಮತದಿಂದ ದೇಶದ ಭವಿಷ್ಯ ಬದಲಾಗುತ್ತದೆ. ದೇಶ ಸಾಕಷ್ಟು ಅಭಿವೃದ್ಧಿ ಆಗಿದೆ. ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಿಸಬೇಕಿದೆ. ದೊಡ್ಡ ದೊಡ್ಡ ಉದ್ಯಮಗಳು ಬರಬೇಕಿದೆ ಈ ಕಾರಣಕ್ಕಾಗಿ ಮತ ಹಾಕಿದ್ದೇನೆ. ಭಾರತದ ಪ್ರಜೆಯಾಗಿ ಪ್ರಮುಖ ಜವಾಬ್ದಾರಿಯೊಂದನ್ನು ನಿಭಾಯಿಸಿದ್ದೇನೆ ಎನ್ನುವ ಹೆಮ್ಮೆ ಉಂಟಾಯಿತು ಎಂದರು.ಅದೇ ಮತಗಟ್ಟೆಯಲ್ಲಿ ಇಂಜಿನೀಯರಿಂಗ್ ವಿದ್ಯಾರ್ಥಿ ಚೇತನ್ಗೌಡ ಮೊದಲ ಬಾರಿ ಹಕ್ಕು ಚಲಾಯಿಸಿದ ಖುಷಿಯಲ್ಲಿದ್ದರೆ, ಹಿರೇಗೌಜದಲ್ಲಿ ಭೂಮಿಕಾ, ನವ್ಯ, ಎಚ್.ಸಿ.ಸಹನಾ, ಎಚ್.ಡಿ.ಧನಲಕ್ಷ್ಮಿ, ಎಚ್.ಡಿ.ಆಶಾ, ಉದ್ದೇಬೋರನಹಳ್ಳಿಯ ಪಲ್ಲವಿ ಮೊದಲ ಬಾರಿ ಹಕ್ಕು ಚಲಾಯಿಸಿ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಗಲಾಟೆ ಮತಗಟ್ಟೆಗಳು ಶಾಂತ:
ಈ ಹಿಂದಿನ ಚುನಾವಣೆಗಳಲ್ಲಿ ಗಲಾಟೆಯಿಂದಲೇ ಗುರುತಿಸಿಕೊಂಡಿದ್ದ ಪಿಳ್ಳೇನಹಳ್ಳಿ, ಉದ್ದೇಬೋರನಹಳ್ಳಿ, ಸಖರಾಯಪಟ್ಟಣ, ಸಿಂಧಿಗೆರೆ ಇತರೆ ಗ್ರಾಮಗಳಲ್ಲೂ ಈ ಬಾರಿ ಮತದಾನ ಸಂಪೂರ್ಣ ಶಾಂತಿಯಿಂದ ನಡೆಯಿತು. ಬಹುತೇಕ ಎಲ್ಲ ಮತಗಟ್ಟೆಗಳ ಬಳಿ ಜನಸಂಖ್ಯೆ ತೀರಾ ವಿರಳವಾಗಿತ್ತು. ರಕ್ಷಣಾ ಸಿಬ್ಬಂದಿಗಳು ಯಾವುದೇ ಒತ್ತಡವಿಲ್ಲದೆ ಕರ್ತವ್ಯ ನಿರ್ವಹಿಸಿದರು.
ದುಬೈನಿಂದ ಬಂದ ದಂಪತಿ
ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಲೆಂದೇ ದುಬೈನಿಂದ ಆಗಮಿಸಿದ್ದ ದಂಪತಿಗಳಿಬ್ಬರು ಗಮನಸೆಳೆದರು. ಪಿಳ್ಳೇನಹಳ್ಳಿ ಮತಗಟ್ಟೆಯಲ್ಲಿ ಮತ ಹಾಕಿದ ಅವರು, ಜವಾಬ್ದಾರಿ ಪೂರೈಸಿದ ಧನ್ಯತಾ ಭಾವ ವ್ಯಕ್ತಪಡಿಸಿದರು.ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿರುವ ಮಧು ತಮ್ಮ ಕಂಪನಿಯಿಂದ ವಿಶೇಷ ಅನುಮತಿ ಪಡೆದು ಗೃಹಿಣಿಯಾಗಿರುವ ತಮ್ಮ ಪತ್ನಿ ತನುಶ್ರೀ ಸಮೇತರಾಗಿ ಮಹ ಹಾಕಲು ಬಂದಿದ್ದರು. ನಮ್ಮ ದೇಶ ಸಾಕಷ್ಟು ಮುಂದುವರಿದಿದೆ. ಆದರೂ ದುಬೈನಂತೆ ಅಭಿವೃದ್ಧಿ ಹೊಂದಬೇಕೆನ್ನುವುದು ನಮ್ಮ ಅಭಿಲಾಷೆ. ಮತ ಹಾಕಲು ಏನು ಕೊಡುತ್ತೀರಿ ಎಂದು ಕೇಳುವ ಮುನ್ನ ಉತ್ತಮ ನಾಯಕರನ್ನು ಆಯ್ಕೆ ಮಾಡುವ ನಮ್ಮ ಜವಾಬ್ದಾರಿಯನ್ನು ಮೊದಲು ನಿಭಾಯಿಸಬೇಕು ಎಂದು ಮಧು ಹೇಳಿದರು.
ಕೈಕೊಟ್ಟ ಮತಯಂತ್ರ
ಶೃಂಗೇರಿ ಹಾಗೂ ಎನ್.ಆರ್.ಪುರ ತಾಲ್ಲೂಕಿನ ಒಂದೆರಡುಕಡೆಗಳಲ್ಲಿ ಆರಂಭದಿಂದಲೇ ವಿದ್ಯುನ್ಮಾನ ಮತಯಂತ್ರದಲ್ಲಿ ಸಣ್ಣ ಪುಟ್ಟ ತಾಂತ್ರಿಕ ದೋಷ ಕಾಣಿಸಿಕೊಂಡ ಬಗ್ಗೆ ವರದಿಯಾಗಿದ್ದು ಬಿಟ್ಟರೆ, ಮತದಾನ ಸ್ಥಗಿತದಂತಹ ಘಟನೆ ಎಲ್ಲೂ ನಡೆದಿಲ್ಲ. ಆದ್ರೆ ಹಿಂದೂ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆಸಿರುವ ಆರೋಪ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಉಜೈನಿ ಮತಗಟ್ಟೆ ಮುಂಭಾಗ ಕೇಳಿಬಂದಿದೆ. ಹಿಂದೂ ಕಾರ್ಯಕರ್ತ ಪ್ರವೀಣ ಖಾಂಡ್ಯ ಮೇಲೆ ಹಲ್ಲೆ ಆರೋಪ ಕೇಳಿಬಂದಿದ್ದು ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಈ ಘಟನೆ ನಡೆದಿದೆ. ಹಲ್ಲೆಗ ಒಳಾಗಿರುವ ಪ್ರವೀಣ್ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಯೆ ಪಡೆಯುತ್ತಿದ್ದಾರೆ. ಹಳೇ ದ್ವೇಷ ಹಿನ್ನೆಲೆ ಬಿಜೆಪಿ ಕಾರ್ಯಕರ್ತರಿಂದಲೇ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಗಣ್ಯರ ಮತದಾನ :
ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರು ಮತ ಚಲಾಯಿಸಿದ ನಂತರ ವಿವಿಧ ಬೂತ್ಗಳಿಗೆ ಭೇಟಿ ನೀಡಿ ಬೆಂಬಲಿಗರನ್ನು ಮಾತನಾಡಿಸಿ ಮತ ಸೆಳೆಯುವ ಪ್ರಯತ್ನ ಮಾಡಿದರು. ಮತಗಟ್ಟೆ ಬಳಿ ಯಾವುದೇ ರಾಜಕೀಯ ಪಕ್ಷಗಳು ಶಾಮಿಯಾನ ಹಾಕುವುದು, ಧ್ವಜ ಪ್ರದರ್ಶಿಸುವುದನ್ನು ನಿಷೇಧಿಸಲಾಗಿತ್ತು. ಮತದಾರರ ಅನುಕೂಲಕ್ಕಾಗಿ ಜಿಲ್ಲಾಡಳಿತವೇ ಮಾಹಿತಿ ಕೇಂದ್ರಗಳನ್ನು ತೆರೆದಿತ್ತು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದ್ದ ಖಾಲಿ ಚೊಂಬು ತುಂಬಿಸುವಂತಹ ತೀರ್ಪು ಸುಪ್ರೀಂ ನೀಡಿದೆ - ಸಚಿವ ದಿನೇಶ್ ಗುಂಡೂರಾವ್
ಕಾಣದ ಜಾತ್ರೆ ಸಂಭ್ರಮ
ಚುನಾವಣಾ ಆಯೋಗ ಮತದಾನವನ್ನು ಜಾತ್ರೆ, ಹಬ್ಬದೋಪಾದಿಯಲ್ಲಿ ಸಂಭ್ರಮಿಸಬೇಕೆಂದು ಪದೇ ಪದೇ ಜಾಹಿರಾತುಗಳ ಮೂಲಕ ಹೇಳುತ್ತಿದ್ದರು ಜಿಲ್ಲೆಯ ಯಾವುದೇ ಭಾಗದಲ್ಲಿ ಅಂತಹ ಸಂಭ್ರಮ ಕಾರಣಲಿಲ್ಲ. ಕಾರ್ಯಕರ್ತರಲ್ಲೇ ಉತ್ಸಾಹ ಇಲ್ಲದಿರುವುದು ಮೂಲ ಕಾರಣವಾದರೆ, ಯಾವುದೇ ಪಕ್ಷದ ಬ್ಯಾನರ್, ಬಂಟಿಂಗ್, ಶಾಲು, ಚಿಹ್ನೆಗಳನ್ನು ಪ್ರದರ್ಶಿಸಿದ್ದು ಕಂಡುಬರಲಿಲ್ಲ.