ನಿರ್ವಹಣೆ ಇಲ್ಲದೇ ಇಡೀ ಕೆರೆ ತುಂಬ ಕೊಳಚೆ ನೀರು ತುಂಬಿ ಗೊಬ್ಬು ನಾರುತ್ತಿದ್ದ ಸಾಧನಕೇರಿ ಕೆರೆ ಹಾಗೂ ಬಾರೋ ಸಾದನಕೇರಿ ಉದ್ಯಾನವನಕ್ಕೆ ಅಂತೂ ಕಾಯಕಲ್ಪ ದೊರೆಯುವ ಕಾಲ ಸನ್ನಿಹಿತವಾಗಿದೆ. 

ಬಸವರಾಜ ಹಿರೇಮಠ

 ಧಾರವಾಡ (ಮೇ.27) : ನಿರ್ವಹಣೆ ಇಲ್ಲದೇ ಇಡೀ ಕೆರೆ ತುಂಬ ಕೊಳಚೆ ನೀರು ತುಂಬಿ ಗೊಬ್ಬು ನಾರುತ್ತಿದ್ದ ಸಾಧನಕೇರಿ ಕೆರೆ ಹಾಗೂ ಬಾರೋ ಸಾಧನಕೇರಿ ಉದ್ಯಾನವನಕ್ಕೆ ಅಂತೂ ಕಾಯಕಲ್ಪ ದೊರೆಯುವ ಕಾಲ ಸನ್ನಿಹಿತವಾಗಿದೆ.

ಖ್ಯಾತ ಕವಿ ಡಾ.ದ.ರಾ. ಬೇಂದ್ರೆ ಅವರು ವಾಸಿಸಿದ, ಅವರ ಸಾಹಿತ್ಯಕ್ಕೆ ಪ್ರೇರಣೆಯಾದ ಸಾಧನಕೇರಿ ಪ್ರದೇಶ ಹಾಗೂ ಅವರ ಮನೆ ಎದುರಿರುವ ಕೆರೆ ತುಂಬ ಆಕರ್ಷಣೀಯ ತಾಣ. . ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಡಾ. ಎಂ.ಎಂ.ಕಲಬುರ್ಗಿ ಅವರು 2011ರಲ್ಲಿ ಕೆರೆಗೆ ಕಾಯಕಲ್ಪ ನೀಡಲು ಯೋಜನೆ ರೂಪಿಸಿದರು. ಅಂದಿನ ಜಿಲ್ಲಾ​ಧಿಕಾರಿ ದರ್ಪಣ್‌ ಜೈನ್‌ ಅವರು ಕೆರೆಗೆ ಹಾಗೂ ದಂಡೆಯಲ್ಲಿನ ಸುಂದರ ಉದ್ಯಾನ ನಿರ್ಮಾಣಕ್ಕೆ ಮುನ್ನುಡಿ ಬರೆದರು. ಮಕ್ಕಳ ಬಾಲ್ಯ, ತುಂಟಾಟಗಳನ್ನು ನೆನಪಿಸುವ ಕಲಾಕೃತಿಗಳು ಕೆರೆಯ ಮೆರುಗು ಹೆಚ್ಚಿಸಿದ್ದವು. ಸಂಜೆಯ ಹೊತ್ತಿಗೆ ಗೂಡಿಗೆ ಮರಳುವ ಹಕ್ಕಿಗಳ ಕಲರವ, ಸೂರ್ಯಾಸ್ತದ ರಂಗು ನಡುವೆ ಕೆರೆಯಲ್ಲಿ ದೋಣಿಯ ವಿಹಾರವು ಬೇಂದ್ರೆ ಅವರ ಕಾವ್ಯಗಳ ನೆನಪಿಸುತ್ತಿತ್ತು.

ಹುಬ್ಬಳ್ಳಿ: 3 ವರ್ಷದ ಬದಲು ಪ್ರತಿವರ್ಷ ಆಸ್ತಿ ಕರ ಹೆಚ್ಚಳ, ಇಂದು ಚರ್ಚೆ ಸಾಧ್ಯತೆ

ಹಾಳಾದ ಕೆರೆ, ಉದ್ಯಾನವನ..

ವರ್ಷಗಳು ಕಳೆದಂತೆ ಕೆರೆಗೆ ಸುತ್ತಲಿನ ಪ್ರದೇಶಗಳ ಕೊಳಚೆ ನೀರು ಹರಿಯತೊಡಗಿತು. ಕೆರೆ ಕಲುಷಿತಗೊಂಡಿತು. ದೋಣಿ ವಿಹಾರ ಸ್ಥಗಿತಗೊಂಡಿತು. ನೃತ್ಯ ಕಾರಂಜಿಯೂ ಸೊಬಗು ಕಳೆದುಕೊಂಡಿತು. ವಾಯುವಿಹಾರ ಸೇರಿದಂತೆ ಮಕ್ಕಳಾಟ, ಕಾರಂಜಿ, ಕ್ಯಾಂಟೀನ್‌ ಹೀಗೆ ಎಲ್ಲವೂ ಹೋಗಿ ಇತ್ತೀಚೆಗೆ ಬರೀ ಪ್ರಣಯಪಕ್ಷಿಗಳಿಗೆ ರಮಣೀಯ ತಾಣವಾಗಿ ಮಾತ್ರ ಪರಿವರ್ತನೆಯಾಗಿತ್ತು. ಇದೀಗ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ ಮೂಲಕ ಸಾಧನಕೆರೆಗೆ ಮರು ಕಾಯಕಲ್ಪ ನೀಡುವ ಕಾಮಗಾರಿ ಶುರು ಮಾಡಿದೆ. ಒಂದು ತಿಂಗಳ ಹಿಂದೆಯೇ ಕೆರೆಯ ಅಂಗಳದಲ್ಲಿದ್ದ ನೀರನ್ನು ಸಂಪೂರ್ಣ ಖಾಲಿ ಮಾಡಲಾಗಿದೆ. ಹೂಳೆತ್ತಲು ಜೆಸಿಬಿಗಳು ಕೆರೆಗಿಳಿದಿದ್ದು, ಟ್ರ್ಯಾಕ್ಟರ್‌ಗಳು ಹೂಳು ಹೊತ್ತು ಸಾಗುತ್ತಿವೆ. ಹೂಳನ್ನು ಸಮೀಪದ ಪೊಲೀಸ ಹೆಡ್‌ ಕ್ವಾರ್ಟಸ ವಿಶಾಲ ಪ್ರದೇಶದಲ್ಲಿ ಬಿಡಲಾಗುತ್ತಿದೆ.

ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಕೆಆರ್‌ಐಡಿಎಲ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಫರೀದಾ ನದಾಫ್‌, ರು.3.75 ಕೋಟಿ ವೆಚ್ಚದಲ್ಲಿ ಕೆರೆ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. 9 ತಿಂಗಳ ಕಾಮಗಾರಿ ಇದಾಗಿದೆ. ಸುಮಾರು 3ರಿಂದ 3.5 ಅಡಿ ಹೂಳು ತುಂಬಿರುವ ಸಾಧ್ಯತೆ ಇದೆ. ಮಳೆಗಾಲ ಆರಂಭವಾಗುವುದರೊಳಗೆ ಕೆರೆಯ ಹೂಳೆತ್ತಲಾಗುವುದು. ಸುತ್ತಲಿನ ಪ್ರದೇಶಗಳ ತ್ಯಾಜ್ಯ ನೀರು ಕೆರೆ ಸೇರದಂತೆ ಕಾಂಕ್ರೀಟ್‌ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಕೆರೆಯ ದಂಡೆಗೆ ಪೇವರ್ಸ್‌ ಅಳವಡಿಸಲಾಗುವುದು. ಇನ್ಮುಂದೆ ಕೆರೆಗೆ ಕೊಳಚೆ ನೀರು ಬರೋದಿಲ್ಲ. ನೀರು ಶುದ್ಧವಾಗಿರುತ್ತದೆ. ಅಲ್ಲದೇ, ಕೆರೆ ಮಧ್ಯೆ ಉಣಕಲ್‌ ಕೆರೆ ರೀತಿಯಲ್ಲಿ ಕಾರಂಜಿ ಮಾಡುವ ಯೋಜನೆಯೂ ಇದೆ ಎಂಬ ಮಾಹಿತಿ ನೀಡಿದರು.

ಕುಂದಗೋಳ: ನೂತನ ಶಾಸಕ ಎಂ.ಆರ್‌.ಪಾಟೀಲ ಎದುರು ನೂರೆಂಟು ಸವಾಲು

ಜನಪ್ರತಿನಿಧಿಗಳಿಗೆ ತೀವ್ರ ಬೆನ್ನು ಬಿದ್ದಾಗ ಬಿಜೆಪಿ ಸರ್ಕಾರದ ಕೊನೆ ಕ್ಷಣದಲ್ಲಿ ಕೆರೆ ಅಭಿವೃದ್ಧಿಗೆ ಒಪ್ಪಿಗೆ ದೊರೆಯಿತು. ಅದೃಷ್ಟವಶಾತ್‌ ಕೆಲಸ ಪ್ರಾರಂಭವಾಗಿದೆ. ಆದರೆ, ಇನ್ನೇನು ಮಳೆಗಾಲ ಶುರುವಾಗುವ ಸಮಯಕ್ಕೆ ಈ ಕಾಮಗಾರಿ ಆರಂಭಿಸಿದ್ದು ತಪ್ಪು. ಮಳೆ ಬಂದಾಗ ಕೆರೆಯಲ್ಲಿ ಹೇಗೆ ಕಾಮಗಾರಿ ಮಾಡಲು ಸಾಧ್ಯ. ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಯೋಜನೆ, ಯೋಚನೆ ಮಾಡದೇ ಹೋದರೆ ಒಂದು ಯೋಜನೆ ಯಶಸ್ವಿ ಆಗುವುದು ಕಷ್ಟ. ಏನೆಯಾಗಲಿ ಒಟ್ಟಾರೆ ಸಾಧನಕೇರಿ ಕೆರೆ ಹಾಗೂ ಉದ್ಯಾನವನಕ್ಕೆ ಅಭಿವೃದ್ಧಿ ಭಾಗ್ಯ ದೊರೆತಿದ್ದು ಧಾರವಾಡ ಜನತೆಯ ಪುಣ್ಯ ಎಂದು ಸ್ಥಳೀಯ ಸಾಹಿತಿಯೊಬ್ಬರು ಪ್ರತಿಕ್ರಿಯೆ ನೀಡಿದರು.