ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮುದ್ರದ ಮಧ್ಯೆ ಸಿಲುಕಿದ ಹಡಗಿನಂತಾಗಿದ್ದಾರೆ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಹೇಳಿಕೆ

 ಮಡಿಕೇರಿ (ಆ.26):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮುದ್ರದ ಮಧ್ಯೆ ಸಿಲುಕಿದ ಹಡಗಿನಂತಾಗಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಸಿಲುಕಿದ ಆ ಹಡಗು ಬಿರುಗಾಳಿಗೆ ಗರಗರ ತಿರುಗುತ್ತಿದೆ. ಅದು ಯಾವಾಗ ಮುಳುಗುತ್ತದೆ ಎಂಬುದು ಗೊತ್ತಿಲ್ಲ. ಅವರಿಗೆ ಆಕಾಶ ಇಲ್ಲ, ಅಡಿಯೂ ಇಲ್ಲ, ಪಾತಾಳವೂ ಇಲ್ಲ, ದೇವಲೋಕವೂ ಇಲ್ಲ ಎಂದು ಸದಾನಂದ ಗೌಡ ಟೀಕಿಸಿದರು.

ದೆಹಲಿಯಲ್ಲಿ ಬೀಡುಬಿಟ್ಟ ಜಾರಕಿಹೊಳಿ ಬ್ರದರ್ಸ್: ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡ

ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕನಾಗಬೇಕಿತ್ತು, ಗೂಟದ ಕಾರು ಬೇಕಿತ್ತು. ಅದಕ್ಕಾಗಿ ಕುಮಾರಸ್ವಾಮಿ ಅವರನ್ನು ಪದಚ್ಯುತಿಗೊಳಿಸಿದರು. ಇದಕ್ಕಿಂತ ಮೇಲೇರಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾನೂನು ಅದರ ಕೆಲಸ ಮಾಡುತ್ತದೆ. ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾದರೆ ಸಮಸ್ಯೆಯಾಗುತ್ತದೆ. ಈ ವಿಚಾರ ಎಲ್ಲರಿಗೂ ಗೊತ್ತಾಗಬೇಕು. ಎಲ್ಲರಲ್ಲೂ ಆ ಭಾವನೆ ಬರಬೇಕು. ಕಾನೂನು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಿದರು.