ಹುಬ್ಬಳ್ಳಿ(ಫೆ.20): ಅಕ್ರಮ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಆನಂದ ಸಿಂಗ್‌ ಗುರುತರ ಆರೋಪಗಳನ್ನು ಎದುರಿಸುತ್ತಿದ್ದು, ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ತಿಳಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿ ಆನಂದ ಸಿಂಗ್‌ ಗಂಭೀರ ಅಪರಾಧಗಳನ್ನು ಮಾಡಿರುವುದು ಕೇಂದ್ರ ಉನ್ನತ ಸಮಿತಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖವಾಗಿದೆ.ಇಂತಹ ವ್ಯಕ್ತಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅರಣ್ಯ ಖಾತೆ ನೀಡಿರುವುದು ಅಚ್ಚರಿ ಮೂಡಿಸಿದೆ. ಈ ಕುರಿತು ಸಿಎಫ್‌ಡಿ, ಜನ ಸಂಗ್ರಾಮ ಪರಿಷತ್‌, ಜನಾಂದೋಲನಗಳ ಮಹಾ ಮೈತ್ರಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ಸರ್ಕಾರಕ್ಕೆ ಪತ್ರ ಬರೆದು ಆನಂದ ಸಿಂಗ್‌ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಲಿವೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇಂದ್ರ ಸರ್ಕಾರ ಸಂವಿಧಾನದ ಮೇಲೆ ಗದಾಪ್ರಹಾರ ಮಾಡುತ್ತಿದ್ದು ಧರ್ಮದ ಆಧಾರದ ಮೇಲೆ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಖಂಡನೀಯ. ಇದರ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಸಂಘಟನೆಗಳು, ಮಹಿಳೆಯರು ಧ್ವನಿ ಎತ್ತಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ, ಪೌರತ್ವ ಜನಸಂಖ್ಯೆ ನೋಂದಣಿ ವಿರುದ್ಧ ಪರಿಣಾಮಕಾರಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಜನಾಂದೋಲನ ಮಹಾ ಮೈತ್ರಿ ಬೆಂಬಲ ಸೂಚಿಸುವ ಜತೆಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಸಂರಕ್ಷಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.

ಶಾಂತಿಯುತವಾಗಿ ನಡೆಸುವ ಪ್ರತಿಭಟನೆಗೆ ಹೊರಗಿನಿಂದ ಯಾರೇ ಪ್ರಚೋದಿಸಿದರೂ ಹಿಂಸೆಗೆ ಇಳಿಯಬಾರದು ಎಂದ ಹಿರೇಮಠ, ಎನ್‌ಆರ್‌ಸಿ ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದರು.