ಆರೆಸ್ಸೆಸ್‌ ಶಾಖೆ ವಿಸ್ತರಣೆ ಸೇರಿ ವಿವಿಧ ವಿಚಾರ ಚರ್ಚೆ, ಈ ವರ್ಷದ 2ನೇ ಬೈಠಕ್‌ ಇದು, 800 ಮಂದಿ ಭಾಗಿ

ಮಂಗಳೂರು(ಆ.26):ಆರೆಸ್ಸೆಸ್ ಶಾಖೆ ವಿಸ್ತರಣೆ, ಮುಂದಿನ ಕಾರ್ಯಯೋಜನೆ ಸೇರಿ ವಿವಿಧ ಕ್ಷೇತ್ರಗಳ ಆಗುಹೋಗು ಕುರಿತು ಚರ್ಚೆ ನಡೆಸುವ ಮಹತ್ವದ ಬೈಠಕ್‌ ಆ.26ರಿಂದ 28ರ ವರೆಗೆ ಮೂರು ದಿನಗಳ ಕಾಲ ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ. ಆರೆಸ್ಸೆಸ್‌ ಕರ್ನಾಟಕ ದಕ್ಷಿಣ ಪ್ರಾಂತದ ಈ ವರ್ಷದ ಎರಡನೇ ಬೈಠಕ್‌ ಇದಾಗಿದ್ದು, ಅಖಿಲ ಭಾರತೀಯ ಸಹ ಕಾರ್ಯವಾಹ ಮುಕುಂದ್‌ ನೇತೃತ್ವದಲ್ಲಿ ಈ ಬೈಠಕ್‌ ನಡೆಯಲಿದೆ. ಈ ಬೈಠಕ್‌ನಲ್ಲಿ ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ, ಕ್ಷೇತ್ರೀಯ ಪ್ರಚಾರಕ ಸುಧೀರ್‌, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಸೇರಿ ಸಂಘದ ಪ್ರಮುಖರು ಭಾಗವಹಿಸಲಿದ್ದಾರೆ. ಸುಮಾರು 800 ಮಂದಿ ಅಪೇಕ್ಷಿತರು ಬೈಠಕ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಆ.26ರಂದು ಪ್ರಾಂತ ಕಾರ್ಯಕಾರಿಣಿ ಮಂಡಳಿ(ಪಿಕೆಎಂ) ಸಭೆ ನಡೆಯಲಿದೆ. ಬೈಠಕ್‌ನಲ್ಲಿ ಪ್ರಾಂತ ಹಾಗೂ ವಿಭಾಗ ಮಟ್ಟದ ಪ್ರಮುಖರು, ಪ್ರಚಾರಕರು ಭಾಗವಹಿಸಲಿದ್ದಾರೆ. ಇದರಲ್ಲಿ ಆರೆಸ್ಸೆಸ್‌ ಶಾಖೆ ಬಗ್ಗೆ ವರದಿ, ಶಾಖಾ ವಿಸ್ತಾರ ಬಗ್ಗೆ ಚರ್ಚೆ ನಡೆಯಲಿದೆ. ವಿಭಾಗಶಃ ಚರ್ಚೆ ಇರಲಿದೆ. ಆ.27 ಮತ್ತು 28ರಂದು ಮಹಾನಗರ ಹಾಗೂ ಜಿಲ್ಲಾ ಸ್ತರದ ಸಂಘದ ಪ್ರಮುಖರ ಬೈಠಕ್‌ ನಡೆಯಲಿದ್ದು, ಇದರಲ್ಲೂ ಶಾಖೆ ಕುರಿತು ಹಾಗೂ ಮುಂದಿನ ಯೋಜನೆ ಬಗ್ಗೆ ಚರ್ಚೆ ನಡೆಯುತ್ತದೆ.

ಮಹಾತ್ಮ ಗಾಂಧಿಯವರನ್ನು ಕೊಂದವರು ನನ್ನನ್ನ ಬಿಡ್ತಾರಾ? ಸಿದ್ದರಾಮಯ್ಯ ಆತಂಕ!

27ರ ಬೈಠಕ್‌ಗೆ ನಳಿನ್‌, ಸಿ.ಟಿ.ರವಿ: ಆ.27 ಮತ್ತು 28ರಂದು ವಿವಿಧ ಕ್ಷೇತ್ರಗಳ ಪ್ರಮುಖ ಬೈಠಕ್‌ ಕೂಡ ಸಂಘದ ಬೈಠಕ್‌ ಜತೆಯೇ ನಡೆಯಲಿದೆ. ಈ ಬೈಠಕ್‌ನಲ್ಲಿ ಬಿಜೆಪಿ, ವಿಹಿಂಪ, ಬಜರಂಗದಳ ಸೇರಿ ಸಂಘ ಪರಿವಾರದ ಸಂಘಟನೆಗಳ ಪ್ರಮುಖರು ಇರುತ್ತಾರೆ. ಈ ಬೈಠಕ್‌ಗೆ ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ…, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಹಾಗೂ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಅಪೇಕ್ಷಿತರು.

ರಾಷ್ಟ್ರಧ್ವಜ ಎಲ್ಲರಿಗೆ ಸೇರಿದ್ದು​​​​​​: ಗೃಹ ಸಚಿವ ಆರಗ ಜ್ಞಾನೇಂದ್ರ

ಬೈಠಕ್‌ನಲ್ಲಿ ಪ್ರಮುಖವಾಗಿ ಸಂಘ ಹಾಗೂ ಸಂಘಪರಿವಾರ ಸಂಘಟನೆಗಳ ಚಟುವಟಿಕೆ, ಕಾರ್ಯವಿಸ್ತಾರ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಅಲ್ಲದೆ ವಿಶೇಷವಾಗಿ ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಾಗೂ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಬಾರಿ ಚುನಾವಣಾ ವರ್ಷವಾದ ಕಾರಣ ಅದಕ್ಕೆ ಪೂರಕ ಹಲವು ವಿಚಾರಗಳ ಚರ್ಚೆಯ ಸಂಭವ ಇದೆ ಎಂದು ಹೇಳಲಾಗಿದೆ. 28ರಂದು ಬೈಠಕ್‌ನ ಕೊನೇ ದಿನ ಆರೆಸ್ಸೆಸ್‌ ದಕ್ಷಿಣ ಪ್ರಾಂತದ ಜವಾಬ್ದಾರಿಗಳ ಬದಲಾವಣೆ ಸಾಧ್ಯತೆ ಇರಲಿದೆ ಎಂದು ಸಂಘದ ಮೂಲಗಳು ಮಾಹಿತಿ ನೀಡಿವೆ.

ಪ್ರಾಂತ ಬೈಠಕ್‌: ಆಹ್ವಾನಿತರಿಗೆ ಮಾತ್ರ ಪ್ರವೇಶ

ಮೂರು ದಿನಗಳ ಕಾಲ ನಡೆಯುವ ಈ ಬೈಠಕ್‌ಗೆ ಅತ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ. ಸಂಘ ಪರಿವಾರದ ಖಾಸಗಿ ಭದ್ರತೆಯೂ ಇರಲಿದ್ದು, ಆಹ್ವಾನಿತರ ಹೊರತುಪಡಿಸಿ ಸಾರ್ವಜನಿಕರು, ಮಾಧ್ಯಮ ಸೇರಿ ಯಾರಿಗೂ ಪ್ರವೇಶ ಇರುವುದಿಲ್ಲ. ಬೆಳಗ್ಗೆ 9ರಿಂದ ರಾತ್ರಿ 10 ಗಂಟೆ ವರೆಗೆ ನಿರಂತರವಾಗಿ ಬೈಠಕ್‌ ನಡೆಯಲಿದ್ದು ಇದರಲ್ಲಿ ಉದ್ಘಾಟನೆ, ಸಮಾರೋಪ ಎಂಬುದು ಇರುವುದಿಲ್ಲ. ಪ್ರತಿದಿನ ಕೊನೆಗೆ ಸುದ್ದಿಗೋಷ್ಠಿ ಕೂಡ ಇರುವುದಿಲ್ಲ ಎಂದು ಆರೆಸ್ಸೆಸ್‌ ಮೂಲಗಳು ಸ್ಪಷ್ಟಪಡಿಸಿವೆ.