ರೋಪ್‌ ವೇ ಬೇಡ- ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಅಭಿಪ್ರಾಯ ವ್ಯಕ್ತ ರೋಪ್‌ ವೇ ಅಗತ್ಯವಿಲ್ಲ- ಜಿಟಿಡಿ, ಪ್ರತಾಪ್‌ ಸಿಂಹ ಪ್ರವಾಸೋದ್ಯಮ ಸಂಘ ಮಾತ್ರ ರೋಪ್‌ ವೇ ಪರ

ಮೈಸೂರು (ಜು.7): ಚಾಮುಂಡಿಬೆಟ್ಟದ ಪಾವಿತ್ರ್ಯತೆ ಕಾಪಾಡಿ, ಪರಿಸರ ಸಂರಕ್ಷಣೆ ಮಾಡುವ ದೃಷ್ಟಿಯಿಂದ ಉದ್ದೇಶಿತ ರೋಪ್‌ ವೇ ಯೋಜನೆಯನ್ನು ಕೈಬಿಡಲು ಜಿಲ್ಲಾಡಳಿತವು ನಿರ್ಧರಿಸಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರ ತೀರ್ಮಾನಿಸಿದೆ.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಹಿನ್ನೆಲೆಯಲ್ಲಿ ಯೋಜನೆ ಜಾರಿ ಸಂಬಂಧ ಬುಧವಾರ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ನೇತೃತ್ವದಲ್ಲಿ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ರೋಪ್‌ ವೇ ಬೇಡವೆಂದು ಒಮ್ಮತದ ಅಭಿಪ್ರಾಯ ಕೇಳಿ ಬಂತು. ಯೋಜನೆಯನ್ನು ಕೈಬಿಟ್ಟು ಸರ್ಕಾರಕ್ಕೆ ಪ್ರಸ್ತಾವಣೆ ಕಳುಹಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌.ಟಿ. ಸೋಮಶೇಖರ್‌ ಅವರು, ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಬೇಡ ಎಂಬ ಅಭಿಪ್ರಾಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಬಗ್ಗೆ ಪ್ರಸ್ತಾಪಿಸಿದ್ದರು. ಈ ಸಂಬಂಧ ನಡೆದ ಸಭೆಯಲ್ಲಿ ರೋಪ್‌ ವೇ ಬೇಡ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಬೆಂಗಳೂರು: ವರ್ಷಾಂತ್ಯದೊಳಗೆ ವೈಟ್‌ಫೀಲ್ಡ್‌ಗೆ ಮೆಟ್ರೋ

ಚಾಮುಂಡೇಶ್ವರಿಯ ದರ್ಶನ ಪಡೆದು ಆಕೆಯ ಕೃಪೆಗೆ ಪಾತ್ರರಾಗಲು ಬೆಟ್ಟಕ್ಕೆ ಆಗಮಿಸುತ್ತಾರೆ. ಇಲ್ಲಿಗೆ ಆಗಮಿಸುವವರು ಬಹುತೇಕರು ಭಕ್ತರು. ಹೀಗಾಗಿ ಬೆಟ್ಟಕ್ಕೆ ತೆರಳಲು ಅವರಿಗೆ ಸಾಕಷ್ಟುಅನುಕೂಲ ಕಲ್ಪಿಸಿರುವುದರಿಂದ ರೋಪ್‌ ವೇ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಬೆಟ್ಟಕ್ಕೆ ಪ್ರವಾಸಿಗರಿಗಿಂತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಕಾಲ್ನಡಿಗೆಯಲ್ಲಿ, ವಾಹನಗಳ ಮೂಲಕ ಬೆಟ್ಟಕ್ಕೆ ತೆರಳಲು ಅನುಕೂಲ ಕಲ್ಪಿಸಲಾಗಿದೆ. ಉತ್ತಮ ರಸ್ತೆ ಕೂಡ ಇರುವುದರಿಂದ ರೋಪ್‌ ವೇ ಬೇಡ ಎಂದು ಸಭೆಯಲ್ಲಿದ್ದವರು ಹೇಳಿದರು. ಪ್ರವಾಸೋದ್ಯಮ ಸಂಘದವರು ಮಾತ್ರ ರೋಪ್‌ ವೇ ಪರವಾಗಿ ಇದ್ದರು ಎಂದು ಅವರು ಹೇಳಿದರು.

ಚಾಮುಂಡಿಬೆಟ್ಟಇದೊಂದು ಧಾರ್ಮಿಕ ಕೇಂದ್ರ. ಸಾಹಸ ಪ್ರವೃತ್ತಿ ಇಲ್ಲ. ಮೈಸೂರಿನಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ. ಬೆಟ್ಟಪ್ರವಾಸೋದ್ಯಮ ಸ್ಥಳ ಅಲ್ಲ. ಬೆಟ್ಟದಲ್ಲಿ ಸ್ವಚ್ಛತೆ, ಮನೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಬಗ್ಗೆ ಕೂಡ ಸಭೆಯಲ್ಲಿ ಪ್ರಸ್ತಾಪವಾಯಿತು. ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಚಾಮುಂಡಿಬೆಟ್ಟಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಸಂಸದರು, ಶಾಸಕರು ಕೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ASSEMBLY ELECTION 2023; ಕೋಲಾರದಿಂದ ಸ್ಪರ್ಧಿಸಲು ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ?

ರೋಪ್‌ ವೇ ಅಗತ್ಯವಿಲ್ಲ- ಜಿಟಿಡಿ, ಪ್ರತಾಪ್‌ ಸಿಂಹ: ಇದಕ್ಕೂ ಮುನ್ನ ನಡೆದ ಸಭೆಯ ಆರಂಭದಲ್ಲಿ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ ಅವರು, ಬೆಟ್ಟಕ್ಕೆ ರೋಪ್‌ ವೇ ಅಗತ್ಯವಿಲ್ಲ. ಭಕ್ತರು ತೆರಳಲು ಉತ್ತಮ ರಸ್ತೆ, ಮೆಟ್ಟಿಲು ಮಾರ್ಗವಿದೆ. ಬೆಟ್ಟಪವಿತ್ರ ಸ್ಥಳವಾದ್ದರಿಂದ ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಪಾವಿತ್ರ್ಯತೆಯೊಂದಿಗೆ ಅರಣ್ಯವನ್ನೂ ಸಂರಕ್ಷಣೆ ಮಾಡಬೇಕು.ಯಾವುದೇ ಕಾರಣಕ್ಕೂ ರೋಪ್‌ ವೇ ಜಾರಿ ಮಾಡಬಾರದು ಎಂದರು.

ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಬೆಟ್ಟಕ್ಕೆ ಬರುವವರು ಭಕ್ತರು. ಪ್ರವಾಸೋದ್ಯಮ ದೃಷ್ಟಿಯಿಂದ ಯಾರೂ ಬರುವುದಿಲ್ಲ. ಬೆಟ್ಟವನ್ನು ಶ್ರದ್ಧಾಭಕ್ತಿಯ ಕೇಂದ್ರವಾಗಿ ನೋಡಬೇಕೆ ಹೊರತು ಪ್ರವಾಸಿ ತಾಣವಾಗಿಯಲ್ಲ. ಮೈಸೂರಿನಲ್ಲಿ ಪ್ರವಾಸೋದ್ಯಮಕ್ಕೆ ಹಲವು ತಾಣಗಳಿವೆ. ಬೆಟ್ಟಕ್ಕೆ ಪ್ರಸಾದ ಯೋಜನೆಯಲ್ಲಿ 50 ಕೋಟಿ ಬರುತ್ತದೆ. ಅದರಲ್ಲಿ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬಹುದು. ಚಾಮುಂಡಿಬೆಟ್ಟಮರಳು ಮಿಶ್ರಿತ ಮಣ್ಣಿನಿಂದ ಆಗಿದೆ. ಸ್ವಲ್ಪ ಮಳೆ ಬಂದರೂ ಜರ್ಜರಿತವಾಗುತ್ತದೆ. ಮೂಲಸೌಕರ್ಯ ಕಲ್ಪಿಸಿದರೆ ಭಕ್ತರಿಂದಲೇ ಸಾಕಷ್ಟುಆದಾಯ ಬರುವುದರಿಂದ ರೋಪ್‌ ವೇ ಅಗತ್ಯವಿಲ್ಲ ಎಂದು ಹೇಳಿದರು.

ರೋಪ್‌ ವೇ ಪ್ರವಾಸೋದ್ಯಮಕ್ಕೆ ಪೂರಕ: ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ ಗೌರವಾಧ್ಯಕ್ಷ ಬಿ.ಎಸ್‌. ಪ್ರಶಾಂತ್‌ ಮಾತನಾಡಿ, ಮೈಸೂರು ಪ್ರವಾಸಿ ತಾಣವಾಗಿರುವುದರಿಂದ ಬೆಟ್ಟಕ್ಕೆ ರೋಪ್‌ವೇ ಅಗತ್ಯವಿದೆ. ಬೆಟ್ಟಕ್ಕೆ ಸಾವಿರಾರು ವಾಹನಗಳು ತೆರವುಗಳಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ರೋಪ್‌ ವೇ ನಿರ್ಮಾಣವಾದರೆ ಪರಿಸರ ಮಾಲಿನ್ಯ ತಪ್ಪಲಿದೆ. ಜತೆಗೆ ಬೆಟ್ಟಕ್ಕೆ ವಾಹನ ಸಂಚಾರ ನಿಲ್ಲಿಸಿ ಎಲೆಕ್ಟ್ರಿಕ್‌ ಬಸ್‌ ಸೌಲಭ್ಯ ಕಲ್ಪಿಸಬೇಕು. ಬೇರೆ ದೇಶಗಳಲ್ಲಿ ಉತ್ತಮ ತಂತ್ರಜ್ಞಾನ ಬಳಸಿಕೊಂಡು ರೋಪ್‌ ವೇ ನಿರ್ಮಿಸಿದ್ದಾರೆ. ತಜ್ಞರ ಅಭಿಪ್ರಾಯ ಪಡೆದು ವಿದೇಶದ ಪ್ರವಾಸಿ ತಾಣಗಳಂತೆ ಅಭಿವೃದ್ಧಿಪಡಿಸಬಹುದು ಎಂದು ಸಲಹೆ ನೀಡಿದರು.

ಶಾಸಕ ಎಂ. ಅಶ್ವಿನ್‌ಕುಮಾರ್‌, ಮೇಯರ್‌ ಸುನಂದಾ ಪಾಲನೇತ್ರ, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ನಗರ ಪೊಲೀಸ್‌ ಆಯುಕ್ತ ಡಾ. ಚಂದ್ರಗುಪ್ತ, ಎಸ್ಪಿ ಆರ್‌. ಚೇತನ್‌, ಡಿಸಿಎಫ್‌ ಕಮಲಾ ಕರಿಕಾಳನ್‌ ಮೊದಲಾದವರು ಇದ್ದರು.

ಚಾಮುಂಡಿಬೆಟ್ಟಅಭಿವೃದ್ಧಿ ಪ್ರಾಧಿಕಾರ ರಚಿಸಿ: ಚಾಮುಂಡಿಬೆಟ್ಟದಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಾಗುತ್ತಿದೆ. ಅಲ್ಲದೆ, ಲಂಗುಲಗಾಮಿಲ್ಲದೆ ನಡೆಯುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ಪ್ರಾಧಿಕಾರ ರಚನೆಯಾದರೆ ಬೆಟ್ಟವನ್ನು ಇನ್ನಷ್ಟುಅಭಿವೃದ್ಧಿಪಡಿಸಬಹುದು ಎಂದು ಸಂಸದ ಪ್ರತಾಪ ಸಿಂಹ, ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು. ಈ ಸಂಬಂಧ ಈಗಾಗಲೇ ಚರ್ಚಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲಾಗುವುದು ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ರಸ್ತೆ ದುರಸ್ತಿಗೆ ಚಾಲನೆ: ಚಾಮುಂಡಿಬೆಟ್ಟದಲ್ಲಿ ನಂದಿಗೆ ಸಾಗುವ ಮಾರ್ಗದಲ್ಲಿ ಕುಸಿತವಾಗಿರುವ ರಸ್ತೆ ದುರಸ್ತಿಯ ಕಾಮಗಾರಿಗೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಈ ಸಂಬಂಧ ಕಾರ್ಯಾದೇಶ ನೀಡಲಾಗಿದೆ. ಭೂಕುಸಿತ ಆಗಿದ್ದ ಸ್ಥಳದಲ್ಲಿ ದುರಸ್ತಿ ಮಾಡಿ ಯಥಾಸ್ಥಿತಿಗೆ ತರಲಾಗುವುದು. ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು. ಮತ್ತೆ ಭೂಕುಸಿತ ಆಗದ ರೀತಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.