*  ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಧ್ಯೆ 15.25 ಕಿ.ಮೀ. ಮಾರ್ಗ*  ವಿಸ್ತೃತ ಮಾರ್ಗದಲ್ಲಿ ಕಾಮಗಾರಿ ಬಹುತೇಕ ಪೂರ್ಣ*  ಕೆಂಗೇರಿ ಮತ್ತು ಚಲ್ಲಘಟ್ಟ ಮಧ್ಯೆಯ 1.3 ಕಿಮೀ ಮಾರ್ಗದ ಕಾಮಗಾರಿ ಕೂಡ ಬಹುತೇಕ ಪೂರ್ಣ 

ಬೆಂಗಳೂರು(ಜು.07): ಐಟಿ ಬಿಟಿ ಕಂಪನಿಗಳು ಹೆಚ್ಚಿರುವ ವೈಟ್‌ಫೀಲ್ಡ್‌ಗೆ ಈ ವರ್ಷಾಂತ್ಯದೊಳಗೆ ಮೆಟ್ರೋ ಸೇವೆ ವಿಸ್ತರಣೆ ಆಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಮೆಟ್ರೋ ನಿಗಮದ (ಬಿಎಂಆರ್‌ಸಿಎಲ್‌) ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಉತ್ತಮ ದರ್ಜೆಯ ಸ್ಟೀಲ್‌ ಸಿಗದೆ ಈ ವರ್ಷ ಕಾಮಗಾರಿ ಮುಕ್ತಾಯಗೊಳ್ಳುವ ಅನುಮಾನವಿತ್ತು. ಆದರೆ ಸದ್ಯ ಸ್ಟೀಲ್‌ ಪೂರೈಕೆ ಸರಾಗವಾಗಿ ನಡೆಯುತ್ತಿರುವುದರಿಂದ ಮುಂದಿನ ಎರಡು ತಿಂಗಳಲ್ಲಿ ಎಲ್ಲ ಕಾಮಗಾರಿ ಮುಕ್ತಾಯಗೊಂಡು ಸೆಪ್ಟೆಂಬರ್‌ ತಿಂಗಳಲ್ಲೇ ಪ್ರಯೋಗಾರ್ಥ ಸಂಚಾರ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಅಲರ್ಟ್..! ನಾಳೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್‌ ಮಧ್ಯೆಯ 15.25 ಕಿ.ಮೀ. ಎಲಿವೇಟೆಡ್‌ ಮಾರ್ಗ ಹೊಂದಿದ್ದು, ಹಳಿ ಹಾಕುವ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಅದೇ ರೀತಿ ನಿಲ್ದಾಣಗಳ ನಿರ್ಮಾಣ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದೆ. ಹೆಚ್ಚಿನ ಕಾರ್ಮಿಕರನ್ನು ಬಳಸಿ ಅಂತಿಮ ಹಂತದ ಕಾಮಗಾರಿ ನಡೆಸಲಾಗುತ್ತಿದೆ ಮತ್ತು ಕಾಮಗಾರಿಗಳಿಗಿದ್ದ ಎಲ್ಲ ತಾಂತ್ರಿಕ, ಆಡಳಿತಾತ್ಮಕ ಅಡಚಣೆಗಳು ನಿವಾರಣೆ ಆಗಿರುವುದರಿಂದ ಡಿಸೆಂಬರ್‌ ಅಂತ್ಯದೊಳಗೆ ಸಾರ್ವಜನಿಕರಿಗೆ ಮೆಟ್ರೋ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ.

ಇದು ಸದ್ಯ ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿ ತನಕ ಕಾರ್ಯನಿರ್ವಹಿಸುತ್ತಿರುವ ನೇರಳೆ ಮಾರ್ಗದ ವಿಸ್ತರಿತ ಮಾರ್ಗವಾಗಿದೆ. ಬೈಯ್ಯಪ್ಪನಹಳ್ಳಿಯಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶದವರೆಗಿನ ಶೇ.96.13 ಮತ್ತು ವಿಶ್ವೇಶ್ವರಯ್ಯ ಕೈಗಾರಿಕಾ ಪ್ರದೇಶದಿಂದ ವೈಟ್‌ಫೀಲ್ಡ್‌ ತನಕದ ಶೇ.99.61ರ ಕಾಮಗಾರಿ ಮುಕ್ತಾಯಗೊಂಡಿದೆ. ಸದ್ಯ ಹಳಿ ಹಾಕುವ ಚಟುವಟಿಕೆ ನಡೆಯುತ್ತಿದ್ದು, ಕೆ.ಆರ್‌.ಪುರದಿಂದ ವೈಟ್‌ಫೀಲ್ಡ್‌ ತನಕ ಶೇ.75ರಷ್ಟುಹಳಿ ಹಾಕಲಾಗಿದೆ. ಈ ಮಾರ್ಗದಲ್ಲಿ ಕಡಿದಾದ ತಿರುವುಗಳಿರುವ ಕಾರಣ ಹಳಿ ಹಾಕುವ ಕಾಮಗಾರಿ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ವಿಳಂಬವನ್ನು ತಪ್ಪಿಸಲು ಆರ್‌.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಹಳಿ ಅಳವಡಿಸುತ್ತಿದ್ದ ತಂಡವೊಂದನ್ನು ಇಲ್ಲಿಗೆ ನಿಯೋಜಿಸಲಾಗಿದೆ.

ಹೊಸೂರಿಗೆ ಮೆಟ್ರೋ: ಕನ್ನಡಿಗರ ಕೆಂಗಣ್ಣು!

ಆದರೆ ಕಾಡುಗೋಡಿ ಡಿಪೋದ ಕೆಲಸ ಶೇ.60ರಷ್ಟುಬಾಕಿ ಉಳಿದಿದೆ. ಟೆಸ್ಟ್‌ ಟ್ರ್ಯಾಕ್‌, ಸ್ಟಬಿಲಿಂಗ್‌ ಲೈನ್‌ಗಳು, ಇನ್‌ಸ್ಪೆಕ್ಷನ್‌ ಲೈನ್‌, ಕೋಚ್‌ ತೊಳೆಯುವ ಘಟಕಗಳ ನಿರ್ಮಾಣ ಕಾಮಗಾರಿ ನಡೆಯಬೇಕಿದೆ. ಈ ಕಾಮಗಾರಿ ಸೆಪ್ಟೆಂಬರ್‌ ಒಳಗೆ ಪೂರ್ಣಗೊಳ್ಳುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬೆನ್ನಿಗಾನಹಳ್ಳಿ, ಕೆ.ಆರ್‌.ಪುರ, ಮಹಾದೇವಪುರ, ಗರುಡಾಚಾರ್‌ಪಾಳ್ಯ, ಹೂಡಿ ಜಂಕ್ಷನ್‌, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರ್‌ ಹಳ್ಳಿ, ಸಾದರಮಂಗಲ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಮತ್ತು ಚನ್ನಸಂದ್ರ ನಿಲ್ದಾಣಗಳು ಈ ಮಾರ್ಗದಲ್ಲಿ ಬರುತ್ತವೆ.

ಕೆಂಗೇರಿ ಮತ್ತು ಚಲ್ಲಘಟ್ಟ ಮಧ್ಯೆಯ 1.3 ಕಿಮೀ ಮಾರ್ಗದ ಕಾಮಗಾರಿ ಕೂಡ ಬಹುತೇಕ ಪೂರ್ಣಗೊಂಡಿದೆ. ಈ ಮಾರ್ಗ ಕೂಡ ವರ್ಷಾಂತ್ಯದೊಳಗೆ ಸೇವೆಗೆ ಲಭ್ಯವಾಗಲಿದ್ದು, ನೇರಳೆ ಮಾರ್ಗದ ಒಟ್ಟು ಉದ್ದ (ಚಲ್ಲಘಟ್ಟ-ವೈಟ್‌ಫೀಲ್ಡ್‌) 42.53 ಕಿ.ಮೀ. ಆಗಲಿದೆ. ಒಟ್ಟು 37 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ.