ಬೆಂಗಳೂರು [ಆ.27]:  ವಿಶ್ವದಲ್ಲೇ ಮೊದಲ ಬಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಯೋಜನೆಯ ರನ್‌ ವೇ ಮತ್ತು ರಸ್ತೆಯನ್ನು ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ನಿರ್ಮಿಸಲು ಉದ್ದೇಶಿಸಲಾಗಿದೆ. ರನ್‌ ವೇ ಮತ್ತು ರಸ್ತೆ ನಿರ್ಮಾಣಕ್ಕೆ ಬೇಕಾದ 50 ಟನ್‌ ಪ್ಲಾಸ್ಟಿಕ್ಕನ್ನು ಬಿಬಿಎಂಪಿ ಪೂರೈಸಲಿದೆ.

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ‘ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ’ (ಬಿಐಎಎಲ್‌)ಕ್ಕೆ ಸಾಂಕೇತಿಕವಾಗಿ ಐದು ಟನ್‌ ಪ್ಲಾಸ್ಟಿಕ್‌ ತುಂಬಿದ ಟ್ರಕ್‌ಗೆ ಹಸಿರು ನಿಶಾನೆ ತೋರುವ ಮೂಲಕ ಮೇಯರ್‌ ಗಂಗಾಂಬಿಕೆ ಸೋಮವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ವಿಶ್ವದಲ್ಲಿ ಪ್ರಥಮ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡಿಕೊಂಡು ರಸ್ತೆ ಮತ್ತು ರನ್‌ವೇ ನಿರ್ಮಾಣ ಪ್ರಯೋಗಕ್ಕೆ ಕೈಹಾಕಿದೆ. ಪ್ಲಾಸ್ಟಿಕ್‌ ಬಳಕೆಯಿಂದ ರಸ್ತೆ ಗುಣಮಟ್ಟಹೆಚ್ಚಾಗಲಿದೆ ಎಂಬ ಉದ್ದೇಶದಿಂದ ಬಿಐಎಎಲ್‌ ಈ ಪ್ರಯೋಗ ಆರಂಭಿಸಿದೆ. ಇದು ಯಶಸ್ವಿಯಾದರೆ ಇದೇ ತಂತ್ರಜ್ಞಾನ ಬಳಸಿ ನಗರದ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಮಾತನಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2ರ ಯೋಜನೆಯಲ್ಲಿ 3.1 ಮೀಟರ್‌ ಅಗಲದ 50 ಕಿ.ಮೀ. ರಸ್ತೆ ನಿರ್ಮಾಣ ಮಾಡುವ ಯೋಜನೆಯೂ ಸೇರಿದೆ. ಬಿಐಎಎಲ್‌ ಸಂಸ್ಥೆಗೆ ಒಟ್ಟು 50 ಟನ್‌ ಪ್ಲಾಸ್ಟಿಕ್‌ ಅವಶ್ಯಕತೆ ಇದೆ. ಸಾಂಕೇತಿಕವಾಗಿ ಐದು ಟನ್‌ ಪ್ಲಾಸ್ಟಿಕ್ಕನ್ನು ಈಗ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಐಎಎಲ್‌ ಸಂಸ್ಥೆಗೆ ಅವಶ್ಯಕತೆಗೆ ತಕ್ಕಂತೆ ಪ್ಲಾಸ್ಟಿಕ್‌ ಪೂರೈಕೆ ಮಾಡುತ್ತೇವೆ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯದ ಶೇ.10ರಿಂದ 15ರಷ್ಟುಅಂದರೆ, 700ರಿಂದ 800 ಟನ್‌ ಪ್ಲಾಸ್ಟಿಕ್‌ ಸಂಗ್ರಹವಾಗುತ್ತಿದೆ. ಒಂದು ಕಿ.ಮೀ. ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಿಟುಮಿನ್‌ ಜೊತೆಗೆ ಶೇ.6ರಿಂದ 8ರಷ್ಟುಪ್ರಮಾಣದ ಪ್ಲಾಸ್ಟಿಕ್ಕನ್ನು ಸಣ್ಣ ಚೂರುಗಳಾಗಿ ಮಾಡಿ ಬಳಸುವುದರಿಂದ ರಸ್ತೆಯ ಗುಣಮಟ್ಟಹೆಚ್ಚಾಗಲಿದೆ. ಬಿಐಎಎಲ್‌ ಸಂಸ್ಥೆಯ ಈ ಪ್ರಯೋಗ ಯಶಸ್ವಿಯಾದರೆ ನಗರದ ರಸ್ತೆಗಳ ನಿರ್ಮಾಣಕ್ಕೆ ಬಿಐಎಎಲ್‌ ತಂತ್ರಜ್ಞಾನ ಬಳಸಲಾಗುವುದು ಎಂದರು.

ಬಿಐಎಎಲ್‌ನ ಉಪಾಧ್ಯಕ್ಷ ಎಚ್‌.ಆರ್‌. ವೆಂಕಟರಾಮನ್‌ ಮಾತನಾಡಿ, ರಸ್ತೆ ನಿರ್ಮಾಣದ ವೇಳೆ ಬಿಟುಮಿನ್‌ ಜೊತೆ ಶೇ.7ರಿಂದ 8ರಷ್ಟುಪ್ಲಾಸ್ಟಿಕ್‌ ಬಳಸುವುದರಿಂದ ಪ್ರತಿ ಕಿ.ಮೀ.ಗೆ 30 ಸಾವಿರ ರು. ಉಳಿತಾಯವಾಗಲಿದೆ. ಜತೆಗೆ ರಸ್ತೆಯ ಬಾಳಿಕೆ ಮೂರು ಪಟ್ಟು ಹೆಚ್ಚಾಗಲಿದೆ. ಪ್ರತಿ ಕಿ.ಮೀ. ರಸ್ತೆಗೆ ಎರಡು ಟನ್‌ ಪ್ಲಾಸ್ಟಿಕ್‌ ಬೇಕಾಗಲಿದೆ. ಪರಿಸರ ಸ್ನೇಹಿ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಬಿಐಎಎಲ್‌ ಈಗಾಗಲೇ ಹಲವಾರು ಕ್ರಮ ಕೈಗೊಂಡಿದೆ. ಆ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಾಣ ಪ್ರಯೋಗ ಯಶಸ್ವಿಯಾದರೆ ಇಡೀ ನಿಲ್ದಾಣದ ರಸ್ತೆಗಳನ್ನು ಪ್ಲಾಸ್ಟಿಕ್‌ ಬಳಸಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಉಪಮೇಯರ್‌ ಭದ್ರೇಗೌಡ, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌, ಹೆಚ್ಚುವರಿ ಆಯುಕ್ತ (ಘನತ್ಯಾಜ್ಯ ವಿಭಾಗ) ಡಿ.ರಂದೀಪ್‌, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ಉಪಸ್ಥಿತರಿದ್ದರು.