Karnataka Budget 2023: ಕಲಬುರಗಿಗೆ ಹಿಂದೆಯೇ ಮಂಜೂರಾಗಿದ್ದ ಅಸ್ಪತ್ರೆಗಳಿಗೆ ಮರುಜೀವ
ಕಲಬುರಗಿಗೆ ‘ಆಸ್ಪತ್ರೆ’ಗಳ ಸುರಿಮಳೆ, ಸಿಎಂ ಸಿದ್ದರಾಮಯ್ಯ ದಾಖಲೆ ಬಜೆಟ್‌ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಯ್ತು ಕಮಲಾಪುರ ‘ಕೆಂಬಾಳೆ’
ಶೇಷಮೂರ್ತಿ ಅವಧಾನಿ
ಕಲಬುರಗಿ(ಜು.08): ಸಿಎಂ ಸಿದ್ದರಾಮಯ್ಯ ಮಂಡಿಸಿರುವ 14ನೇ ಬಜೆಟ್‌ನಲ್ಲಿ ಕಲಬುರಗಿಗೆ ಆಸ್ಪತ್ರೆಗಳ ಸುರಿಮಳೆಯಾಗಿದೆ. ಆದರೆ, ಮೂಲ ಸವಲತ್ತು ಹಾಗೂ ಇತರೆ ವಿಚಾರಗಳಲ್ಲಿ ಜಿಲ್ಲೆಗೆ ಹೆಚ್ಚಿನದೇನೂ ದಕ್ಕಿಲ್ಲದ ಕಾರಣ ಸಹಜವಾಗಿಯೇ ತುಸು ನಿರಾಶೆಯೂ ಆಗಿದೆ.
ತಾಯಿ- ಮಕ್ಕಳ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ... ಹೀಗೆ ಒಂದಲ್ಲ, ಎರಡಲ್ಲ, ಮೂರು ಆಸ್ಪತ್ರೆಗಳು ಒಟ್ಟಿಗೆ ಕಲಬುರಗಿಗೆ ಮಂಜೂರಾಗಿ ಬಹುಕೋಟಿ ಅನುದಾನವೂ ಬರಲಿದೆ.
ಆದರೆ, ಇದೇ ಬಜೆಟ್‌ನಲ್ಲಿ ಉತ್ಪಾದನೆ ಸಂಶೋಧನೆ, ಮಾರುಕಟ್ಟೆಮತ್ತು ಬ್ರಾಂಡಿಂಗ್‌ಗೆ ಒತ್ತು ನೀಡಲಾಗಿರುವ ಮೈಸೂರು ಮಲ್ಲಿಗೆ, ವೀಳ್ಯದೆಲೆ, ನಂಜನಗೂಡು ರಸಬಾಳೆ ಪಟ್ಟಿಯಲ್ಲಿ ಬಿಸಿಲೂರಿನ ಕಮಲಾಪುರದ ಅತಿ ವಿಶಿಷ್ಠವಾಗಿರುವ ಕೆಂಬಾಳೆಗೆ ಸ್ಥಾನಮಾನ ದೊರಕದೆ ಇರೋದು ಇಲ್ಲಿನ ಜನಮನದ ಅಸಮಾಧಾನಕ್ಕೆ ಕಾರಣವಾಗಿದೆ.
ಬಜೆಟ್‌ನಲ್ಲಿ ಸಿದ್ದರಾಮಯ್ಯ ತಮ್ಮ ಅಸಹಾಯಕತೆ ಪ್ರದರ್ಶಿಸಿದ್ದಾರೆ: ಡಾ.ಕೆ.ಸುಧಾಕರ್
ಭೌಗೋಳಿಕ ಸೂಚ್ಯಂಕ (ಜಿಐ ಟ್ಯಾಗ್) ಹೊಂದಿದ್ದರೂ ಸಹ ಕೆಂಬಾಳೆಗೇಕೆ ಬ್ರಾಂಡಿಂಗ್, ಮಾರುಕಟ್ಟೆ, ಸಂಶೋಧನೆಯಂತಹ ಕೆಲಸಗಳಲ್ಲಿ ಸೇರಿಸಲಿಲ್ಲ? ಎಂಬುದು ಉತ್ತರ ಸಿಗದಪ್ರಶ್ನೆಯಾಗಿದೆ. ಈಗಾಗಲೇ ಇಲ್ಲಿನ ರೈತರು ಜಿಐ ಟ್ಯಾಂಗ್ ಹೊಂದಿದ ನಂತರ ಗುಂಪು ರಚಿಸಿಕೊಂಡು ಕೆಂಬಾಳೆ ಬೇಸಾಯಕ್ಕೆ ಮುಂದಾಗಿದ್ದಾರೆ. ಅವರಿಗೆ ಬ್ರಾಂಡಿಂಗ್, ಮಾರುಕಟ್ಟೆದೊರೆತಲ್ಲಿ ಈ ತಳಿ ಸಂವರ್ಧನೆಯಾಗೋದರಲ್ಲಿ ಎರಡೂ ಮಾತಿಲ್ಲ. ಆದರೆ ಬಜೆಟ್‌ನ ಬಲ ಸಿಗದೆ ಇದು ಅಲಕ್ಷಿಸಲ್ಪಟ್ಟಿರೋದರಿಂದ ಕೆಂಬಾಳೆ ರೈತರು ನಿರಾಶರಾಗಿದ್ದಾರೆ.
ಹಿಂದೆಯೇ ಮಂಜೂರಾಗಿದ್ದ ಆಸ್ಪತ್ರೆಗಳಿವು:
ಬಜೆಟ್‌ನಲ್ಲಿ ಘೋಷಿಸಲಾಗಿರುವ ಟ್ರಾಮಾ ಕೇರ್ ಸೆಂಟರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳೆಲ್ಲವೂ ಹಿಂದಿದ್ದ ಕಾಂಗ್ರೆಸ್ ಸರ್ಕಾರದಲ್ಲೇ ಮಂಜೂರಾಗಿದ್ದವು. ಆದರೆ ಬಿಜೆಪಿ ಸರ್ಕಾರದಲ್ಲಿ ಕಡೆಗಣಿಸಲ್ಪಟ್ಟಿದ್ದವು. ಇದೀಗ ಜಿಲ್ಲೆಯವರೇ ಆಗಿರುವ ಡಾ. ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಕಾತೆ ಸಚಿವರಾದ ನಂತರ ಮತ್ತೆ ಈ ಯೋಜನೆಗಲಿಗೆ ಮರುಜೀವ ಬಂದಿದ್ದರಿಂದ ಮತ್ತೆ ಬಜೆಟ್ ಪುಟಗಳನ್ನಲಂಕರಿಸಿ ಘೋಷಣೆಯಾಗಿವೆ. ಅದೇನ ಆಗಲಿ, ನೂರಾರು ಕೋಟಿ ರು ಎವಚ್ಚದಲ್ಲಿ ಉತ್ಕೃಷ್ಟಆರೋಗ್ಯ ಚಿಕಿತ್ಸೆಗಳು ಕಲಬುರಗಿಗೆ ಬರುತ್ತಿರೋದನ್ನ ಜನ ಸ್ವಾಗತಿಸುತ್ತಿದ್ದಾರೆ.
ಇದು ದಾಖಲೆ ಸ್ಥಾಪಿಸಿಕೊಳ್ಳಲು ಮಂಡಿಸಿದ ಬಜೆಟ್: ಎಚ್.ಡಿ.ಕುಮಾರಸ್ವಾಮಿ ಟೀಕೆ
ಬಜೆಟ್‌ನಲ್ಲಿ ಕಲಬುರಗಿಗೆ ದಕ್ಕಿದ್ದಿಷ್ಟು
1) ಜಿಮ್ಸ್‌ನಲ್ಲಿ 70 ಕೋಟಿ ರು. ವೆಚ್ಚದಲ್ಲಿ 200 ಹಾಸಿಗೆ ತಾಯಿ- ಮಕ್ಕಳ ಆಸ್ಪತ್ರೆ
2) ಕಲಬುರಗಿಯಲ್ಲಿ 155 ಕೋಟಿ ರು. ವೆಚ್ಚದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ
3) ಕಲಬುರಗಿಯಲ್ಲಿ 30 ಕೋಟಿ ರು. ವೆಚ್ಚದಲ್ಲಿ ಟ್ರಾಮಾ ಕೇರ್ ಸೆಂಟರ್
4) ಕಲಬುರಗಿ ಗುರುದ್ವಾರ ಅಭಿವೃದ್ಧಿಗೆ 5 ಕೋಟಿ ರು., ಸಿಬ್ಬಂದಿಗೆ ಗೌರವ ಧನ
5) ಗಾಣಗಾಪುರ, ಸನ್ನತಿ, ಮಳಖೇಡ, ಕಲಬುರಗಿ ಕೋಟೆ ಅಭಿವೃದ್ಧಿ
6) ಕಲಬುರಗಿ ವಸ್ತು ಸಂಗ್ರಹಾಲಯ ಅಭಿವೃದ್ಧಿ
7) ಯೂಕೆಪಿ 3ನೇ ಹಂತದ ಭೂಸ್ವಾಧೀನ, ಪುನಾವಸತಿಗೆ ಆದ್ಯತೆ
ಕಲಬುರಗಿಗೆ ಅಲ್ಪ ಅನುಕೂಲ
ಕೆಕೆಆರ್‌ಡಿಬಿಗೆ 5 ಸಾವಿರ ಕೋಟಿ ರು. ಪ್ರದೇಶಕ್ಕೆ ಒಳ್ಳೆಯದು. ಗರಿಷ್ಠ ಮೊತ್ತವನ್ನು ಉದ್ಯೋಗ ಸೃಷ್ಟಿಸುವ ಯೋಜನೆಗಳಿಗೆ ಬಳಸಬೇಕು ಇದು ವ್ಯಕ್ತಿಯ ತಲಾ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೈಸೂರು ಮತ್ತು ಬೆಳಗಾವಿ ಜೊತೆಗೆ ಹೊಸದಾಗಿ ನಿರ್ಮಿಸಲಾದ 10 ಅಂತಸ್ತಿನ ಮೂಲ ಸೌಕರ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 70 ಕೋಟಿ ರು. ವೆಚ್ಚದ ಮಕ್ಕಳ ಮತ್ತು ತಾಯಿ ಆರೈಕೆ ಆಸ್ಪತ್ರೆ, ಟ್ರಾಮಾ ಸೆಂಟರ್‌ಗೆ 30 ಕೋಟಿ ಬಜೆಟ್ ಮೀಸಲಿಟ್ಟಿರುವುದನ್ನು ನಾವು ಸ್ವಾಗತಿಸುತ್ತೇವೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ತೆಗೆದುಹಾಕುವ ನಿರ್ಧಾರ ಉತ್ತಮ. ಆದರೆ, ನಮ್ಮ ಪ್ರದೇಶಕ್ಕೆ ಯಾವುದೇ ರೀತಿಯ ಕೈಗಾರಿಕಾ ಕಾರಿಡಾರ್‌ಗಳಿಗೆ ಪ್ರತ್ಯೇಕ ಉದ್ಯಮ ನೀತಿಯ ಪ್ರಸ್ತಾಪವಿಲ್ಲ. ಉದ್ಯೋಗವಕಾಶ ಹುಟ್ಟು ಹಾಕುವ ಯೋಜನೆಗಳಿಲ್ಲ. ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಲು 4 ಪಥದ ರಸ್ತೆಗಳಿಗೆ ಆದ್ಯತೆ ಇಲ್ಲ. ಮೂಲಸೌಕರ್ಯಗಳನ್ನು ನವೀಕರಿಸಲು ಯಾವುದೇ ಅವಕಾಶವಿಲ್ಲ. 8 ತಿಂಗಳ ಬಜೆಟ್ ಆಗಿದೆ, ಮುಂದಿನ ಬಜೆಟ್‌ನಲ್ಲಿ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವ ಕ್ರಮಗಳನ್ನು ನಾವು ನಿರೀಕ್ಷಿಸುತ್ತೇವೆ ಅಂತ ಅಭಾ ವೀರಶೈವ ಮಹಾಸಭಾ ರಾಷ್ಟ್ರೀಯ ಕೈಗಾರಿಕೆಗಳು ಮತ್ತು ವಾಣಿಜ್ಯ ಸಮಿತಿ ಅಧ್ಯಕ್ಷರು/ ಸಂಚಾಲಕರು ಅಮರನಾಥ ಪಾಟೀಲ್/ ಆನಂದ ದಂಡೋತಿ ತಿಳಿಸಿದ್ದಾರೆ.