ಬೆಂಗಳೂರು(ಮಾ.10): ಸರ್ಕಾರಿ ಭೂಮಿ ಕಬಳಿಕೆ ಮಾಡಿರುವವರಿಂದ ವಶಕ್ಕೆ ಪಡೆದ ಜಮೀನಿಗೆ ಕಾಂಪೌಂಡ್‌ ಹಾಕಿ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆಶ್ವಾಸನೆ ನೀಡಿದ್ದಾರೆ.

ಸೋಮವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ ಸದಸ್ಯ ಕೃಷ್ಣಬೈರೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಲಹಂಕ ಬಳಿಯ ಚೊಕ್ಕನಹಳ್ಳಿ ಸರ್ಕಾರಿ ಭೂಮಿ ಪರಭಾರೆ ಪ್ರಕರಣ ಸಂಬಂಧ ತಹಸೀಲ್ದಾರ್‌ ಮತ್ತು ಸಬ್‌ ರಿಜಿಸ್ಟ್ರಾರ್‌ ಅವರನ್ನು ಅಮಾನತು ಮಾಡಲಾಗಿದೆ. ಮೂರು ತಿಂಗಳಲ್ಲಿ ಈ ಜಮೀನನ್ನು ಬಿಡಬ್ಲ್ಯುಎಸ್‌ಎಸ್‌ಬಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನ್ಯಾಯಾಲಯದಿಂದ ತಡೆಯಾಜ್ಞೆ:

ಭೂ ಕಬಳಿಕೆ ನಿಯಂತ್ರಣ ಸಂಬಂಧ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಎಲ್ಲಾ ರೀತಿಯ ಅಧಿಕಾರ ನೀಡಲಾಗಿದೆ. ಭೂ ಕಬಳಿಕೆ ಮಾಡಿದವರಿಂದ ಸ್ವಾಧೀನ ಮಾಡಿಕೊಂಡ ಬಳಿಕ ಜಮೀನನ್ನು ರಕ್ಷಿಸಲು ಕಾಂಪೌಂಡ್‌ ಹಾಕಲಾಗುವುದು. ಸರ್ಕಾರವು ಒಮ್ಮೆ ಸ್ವಾಧೀನ ಪಡಿಸಿಕೊಂಡ ಬಳಿಕ ಮತ್ತೆ ಭೂ ಕಬಳಿಕೆದಾರರ ಕೈ ಸೇರದಂತೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಭೂಮಿಯನ್ನು ರಕ್ಷಿಸಿ ಸದ್ಬಳಕೆ ಮಾಡಿಕೊಳ್ಳಲು ಕ್ರಮ ಜರುಗಿಸಲಾಗುವುದು. ಇತ್ತೀಚೆಗೆ ಪ್ರಕರಣವೊಂದು ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆ ತಹಸೀಲ್ದಾರ್‌ ಮತ್ತು ಸಬ್‌ ರಿಜಿಸ್ಟ್ರಾರ್‌ ಅವರನ್ನು ಅಮಾನತು ಮಾಡಿ ಕ್ರಿಮಿನಿನಲ್‌ ಪ್ರಕರಣ ದಾಖಲಿಸಲಾಗಿದೆ. ದುರಂತವೆಂದರೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅದೇ ಸ್ಥಳಕ್ಕೆ ಬಂದರು. ತರುವಾಯ ತುಮಕೂರಿಗೆ ಎರವಲು ಸೇವೆ ಮೇಲೆ ಕಳುಹಿಸಿದರೆ, ಅದು ತಪ್ಪು ಎಂದು ನ್ಯಾಯಾಲಯದಿಂದ ತಡೆ ತಂದರು. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚೊಕ್ಕನಹಳ್ಳಿಯಲ್ಲಿ ಸರ್ಕಾರಿ 21.19 ಎಕರೆ ಭೂಮಿಯು ಪರರ ಪಾಲಾಗಲು ಬಿಡುವುದಿಲ್ಲ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೇ ಪತ್ರ ಬರೆದು ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ನೋಂದಣಿ ಮಾಡಬೇಡಿ ಎಂದು ಸೂಚಿಸಿದರೂ ಸಬ್‌ರಿಜಿಸ್ಟ್ರಾರ್‌ ಮಾತು ಕೇಳಿಲ್ಲ ವಿಷಾದಿಸಿದರು.

ಇತ್ತೀಚೆಗೆ ಭೂಕಬಳಿಕೆ ಪ್ರಕರಣವೊಂದು ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆ ತಹಸೀಲ್ದಾರ್‌ ಮತ್ತು ಸಬ್‌ ರಿಜಿಸ್ಟ್ರಾರ್‌ರನ್ನು ಅಮಾನತು ಮಾಡಿ ಕ್ರಿಮಿನಿನಲ್‌ ಪ್ರಕರಣ ದಾಖಲಿಸಲಾಯಿತು. ದುರಂತವೆಂದರೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅದೇ ಸ್ಥಳಕ್ಕೆ ಬಂದರು. ತರುವಾಯ ತುಮಕೂರಿಗೆ ಎರವಲು ಸೇವೆ ಮೇಲೆ ಕಳುಹಿಸಿದರೆ, ಅದು ತಪ್ಪು ಎಂದು ನ್ಯಾಯಾಲಯದಿಂದ ತಡೆ ತಂದರು ಎಂದು ಕಂದಾಯ ಸಚಿವ ಅಶೋಕ್‌ ಹೇಳಿದ್ದಾರೆ.